ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಅ.15ರಿಂದ ಅ.29ರ ವರೆಗೆ ಶ್ರೀ ಶರನ್ನವರಾತ್ರೋತ್ಸವ.

ಶಿವಮೊಗ್ಗ: ಶ್ರೀ ಪ್ರಸನ್ನ ಗಣಪತಿ (ಬಲಮುರಿ) ದೇವಸ್ಥಾನ ಅಭಿವೃದ್ಧಿ ದತ್ತಿ ವತಿಯಿಂದ ರವೀಂದ್ರ ನಗರದ ದೇವಸ್ಥಾನದಲ್ಲಿ ಅ.15ರಿಂದ ಅ.29ರ ವರೆಗೆ ಶ್ರೀ ಶರನ್ನವರಾತ್ರೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹೌಸಿಂಗ್ ಕೋ.ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಸ್.ಪಿ. ಶೇಷಾದ್ರಿ ಹೇಳಿದರು.
ಅವರು ಇಂದು ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ವಿಶೇಷ ಎಂದರೆ ಶ್ರೀ ಧನಲಕ್ಷ್ಮಿ ದೇವಿಯ ಅಲಂಕಾರವಾಗಿದೆ. ನವರಾತ್ರಿ ಅತ್ಯಂತ ಸಂಭ್ರಮ ಸಡಗರದ ಹಬ್ಬವಾಗಿದೆ. ದುರ್ಗಾದೇವಿಯನ್ನು ಒಂದೊಂದು ದಿನ ಒಂಭತ್ತು ರೂಪಗಳಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. 10ನೆ ದಿನ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಪ್ರಸನ್ನಗಣಪತಿ ದೇವಸ್ಥಾನದಲ್ಲಿ ಕಳೆದ 32 ವರ್ಷಗಳಿಂದ ಶರನ್ನವರಾತ್ರಿ ಆಚರಿಸುತ್ತಾ ಬಂದಿದ್ದೇವೆ ಎಂದರು.
ಈ ಬಾರಿಯೂ ಕೂಡ ಅ.15ರಂದು ಪ್ರಾರಂಭವಾಗಿ, ಅ.28ರಂದು ಸಮಾರೋಪಗೊಳ್ಳುತ್ತದೆ. ಅ.29ರಂದು ರಾಜಬೀದಿ ಉತ್ಸವವಿರುತ್ತದೆ. ಈ ಉತ್ಸವದಲ್ಲಿ ಧನಲಕ್ಷ್ಮಿ ದೇವಿಯ ಭವ್ಯ ಮೆರವಣಿಗೆ ನಡೆಯುತ್ತದೆ. ಪ್ರತಿದಿನವೂ ವಿಶೇಷ ಹೋಮ, ಹವನ, ಯಾಗಗಳು ನಡೆಯುತ್ತವೆ. ಜೊತೆಗೆ ಪ್ರತಿದಿನ ಸಂಜೆ 6ರಿಂದ 6-30ರವರೆಗೆ ಸಹಚೇತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯವಿರುತ್ತದೆ. ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನೆ ಅ.15ರಂದು ಸಂಜೆ 6 ಗಂಟೆಗೆ ನಡೆಯಲಿದ್ದು, ಜಿಲ್ಲಾ ರಕ್ಷಣಾಧಿಕಾರಿ ಕಾರ್ಯಕ್ರಮ ಉದ್ಘಾಟಿಸುವರು ಎಂದರು.
ಅ.28ರಂದು ಶತಚಂಡಿಕಾ ಯಾಗ, ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಂಜೆ ಭಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅ.15ರಿಂದ ಪ್ರತಿದಿನ ನಡೆಯುವ ಸಂಜೆಯ ಸಾಂಸ್ಕøತಿ ಕಾರ್ಯಕ್ರಮದಲ್ಲಿ ಭಜನಾ ಗಾಯಕರು, ಸುದರ್ಶನ್ ಜಿ. ಯವರಿಂದ ಸತ್ಸಂಗ, ಲಕ್ಷ್ಮೀರಾಧಾಕೃಷ್ಣ ಅವರಿಂದ ದೇವರನಾಮ, ಗರ್ತಿಕೆರೆ ರಾಘಣ್ಣ ತಂಡದಿಂದ ಸುಗಮ ಸಂಗೀತ, ಹರಿಕಥೆ, ರಾಮ ಸ್ಮರಣೆ, ವೀಣಾವಾದನ, ಕುಮಾರಸ್ವಾಮಿ ಮತ್ತು ವೃಂದದವರಿಂದ ಸ್ಯಾಕ್ಸೋಫೋನ್ ವಾದನ, ಯಕ್ಷಗಾನ, ಗಮಕವಾಚನ, ಭರತನಾಟ್ಯ, ಭಜನೆ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.
ಅ.28ರಂದು ಶತಚಂಡಿಕಾ ಯಾಗದಲ್ಲಿ 15ಕ್ಕೂ ಹೆಚ್ಚು ಪುರೋಹಿತರು ಭಾಗವಹಿಸಲಿದ್ದು, 1ಲಕ್ಷ ಜಪ ಮಾಡುತ್ತಾರೆ. 100 ಸುವಾಸಿನಿಯರಿಗೆ ಬಾಗಿನ ನೀಡುತ್ತಾರೆ. ನಂತರ ಸಂಜೆ 4-30ಕ್ಕೆ ಅಮ್ಮನವರ ರಾಜಬೀದಿ ಉತ್ಸವ ನಡೆಯಲಿದ್ದು, ವಿಸರ್ಜಿಸಲಾಗುವುದು ಎಂದರು.
ಲೋಕಕಲ್ಯಾಣಾರ್ಥವಾಗಿ ನಡೆಯುವ ಈ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಎನ್.ಉಮಾಪತಿ, ಸ.ನಾ. ಮೂರ್ತಿ, ಶಬರೀಶ್ ಕಣ್ಣನ್, ಶಂಕರ್ ಭಟ್, ವಿನಾಯಕ ಬಾಯರಿ ಇದ್ದರು.

Related posts

ಮುಂದಿನ ಬಜೆಟ್ ನಲ್ಲಿ ಹಿರಿಯ ನಾಗರಿಕರಿಗೆ 2 ಸಾವಿರ ರೂ. ಮಾಶಾಸನ

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು ಬಂಗಾರಪ್ಪನವರು – ದೀನಬಂಧು ಸೇವಾಟ್ರಸ್ಟ್ ಅಧ್ಯಕ್ಷ ರಮೇಶ್ ಶೆಟ್ಟಿ ಅಭಿಮತ

2024 ರಲ್ಲಿ ಮತ್ತೆ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ…