ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಹಿರಿಯ ರಾಜಕಾರಣಿ , ಸಂಸದೀಯ ಪಟು, ಇಂದಿರಾಗೆ ಸ್ಥಾನ ಬಿಟ್ಟುಕೊಟ್ಟಿದ್ದ  ಡಿ.ಬಿ.ಚಂದ್ರೇಗೌಡ ಇನ್ನಿಲ್ಲ..ಗಣ್ಯರ ಕಂಬನಿ….

ಚಿಕ್ಕಮಗಳೂರು:  ಹಿರಿಯ ರಾಜಕಾರಣಿ ಮತ್ತು ಖ್ಯಾತ ಸಂಸದೀಯ ಪಟುವಾಗಿದ್ದ ಮಾಜಿ ವಿಧಾನಸಭಾಧ್ಯಕ್ಷ, ಕರ್ನಾಟಕ ಸರ್ಕಾರದ ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ಅವರು ನ.6 ರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷವಾಗಿತ್ತು.

ಮಂಗಳವಾರ ಮಧ್ಯಾಹ್ನ 2 ರಿಂದ ಸಂಜೆ 6ರ ವರೆಗೆ ಮೂಡಿಗೆರೆ ಅಡ್ಯಂತಾಯ ರಂಗದಮಂದಿರದಲ್ಲಿ ಡಿ.ಬಿ. ಚಂದ್ರೇಗೌಡರ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಬುಧವಾರ ಮಧ್ಯಾಹ್ನ ದಾರದಹಳ್ಳಿಯ ಅವರ ಪೂರ್ಣಚಂದ್ರ ಎಸ್ಟೇಟ್ ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಡಿಬಿಸಿಯೆಂದೇ ಖ್ಯಾತರಾಗಿದ್ದ ಚಂದ್ರೇಗೌಡ ಅವರು ರಾಜ್ಯಾಂಗದ ನಾಲ್ಕು ಸದನಗಳನ್ನು ಪ್ರವೇಶಿಸಿದ್ದ ಕೆಲವೇ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಅವರು ಕಾಂಗ್ರೆಸ್ ಪಕ್ಷದಿಂದ  ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾಗುವ ಮೂಲಕ ರಾಜಕೀಯ ರಂಗ ಪ್ರವೇಶಿಸಿದ್ದರು. ಅನಂತರ ವಿಧಾನ ಪರಿಷತ್ ಮತ್ತು ವಿಧಾನಸಭೆಯ ಸದಸ್ಯರಾಗಿಯೂ ಬಳಿಕ ರಾಜ್ಯ ಸಭೆಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.
1970 ರ ದಶಕದ ಕೊನೆಯಲ್ಲಿ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರ ವಿನಂತಿಯ ಮೇರೆಗೆ ಚಂದ್ರೇಗೌಡರು  ತಾವು ಪ್ರತಿನಿಧಿಸುತ್ತಿದ್ದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿಯವರಿಗೆ  ಬಿಟ್ಟುಕೊಟ್ಟಿದ್ದರು. ತುರ್ತುಪರಿಸ್ಥಿತಿಯ ಬಳಿಕ ನಡೆದ ಸಂಸತ್ ಚುನಾವಣೆಯಲ್ಲಿ  ಇಂದಿರಾ ಅವರು ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದಲ್ಲಿ ಜನತಾ ಪಕ್ಷದ ರಾಜ್ ನಾರಾಯಣ್ ಅವರ ವಿರುದ್ಧ ಪರಾಜಿತರಾಗಿ ರಾಜಕೀಯ ಅಜ್ಞಾತವಾಸ ಅನುಭವಿಸುತ್ತಿದ್ದರು.  ಹೀಗಾಗಿ ಇಂದಿರಾ ಸ್ಪರ್ಧಿಸಿದ್ದ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯ ಮೇಲೆ ಇಡೀ ದೇಶದ ಕಣ್ಣು ನೆಟ್ಟಿತ್ತು.
ಆ ಸಂದರ್ಭದಲ್ಲಿ ಆಗಿನ ಜನಸಂಘವೂ ಸೇರಿಕೊಂಡಿದ್ದ ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಇಂದಿರಾ ಅವರನ್ನು ಶತಾಯ ಗತಾಯ ಸೋಲಿಸಲೇಬೇಕೆಂದು ಪಣ ತೊಟ್ಟಿದ್ದ ವಿರೋಧಿ ಜನತಾ ಪಕ್ಷದವರು ಇಂದಿರಾರ ವಿರುದ್ದ ಸ್ಪರ್ಧಿಸಲು ಆಗ  ನಟ ಸಾರ್ವಭೌಮ ಡಾ. ರಾಜಕುಮಾರ್ ಅವರನ್ನು  ಅವರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ರಾಜಕುಮಾರ್ ಅವರು ನಯವಾಗಿಯೇ ಇದನ್ನು ತಿರಸ್ಕರಿಸಿದ್ದರು. ಹೀಗಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು ಇಂದಿರಾ ಗಾಂಧಿಯವರ ವಿರುದ್ದ ಸ್ಪರ್ಧಿಸಿದ್ದರು.
ತುರ್ತುಪರಿಸ್ಥಿತಿಯ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದ್ದರೆ, ದಕ್ಷಿಣದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಕಾಂಗ್ರೇಸ್ ಸಂಪೂರ್ಣ ಮೇಲುಗೈ ಸಾಧಿಸಿತ್ತು. ಜನಸಾಮಾನ್ಯರು ಕಾಂಗ್ರೆಸ್ ಕೈಬಿಟ್ಟಿರಲಿಲ್ಲ. ಆದರೂ ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಯಲ್ಲಿ ಇಂದಿರಾ ಅವರನ್ನು ಸೋಲಿಸಲು ವಿರೋಧ ಪಕ್ಷದವರು ಹರಸಾಹಸ ಪಟ್ಟರೂ ಇಂದಿರಾ ಅವರು ಗೆದ್ದು ಕರ್ನಾಟಕದಿಂದಲೇ ರಾಜಕೀಯ ಪುನರ್ಜನ್ಮ ಪಡೆದಿದ್ದು ಈಗ ಇತಿಹಾಸ.
ಅದೇನೇ ಇದ್ದರೂ , ತಮ್ಮ ಲೋಕಸಭಾ ಸ್ಥಾನವನ್ನು ಇಂದಿರಾ ಗಾಂಧಿಗೆ ಬಿಟ್ಟುಕೊಟ್ಟ ಕಾರಣದಿಂದಲೇ ಡಿಬಿಸಿ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದರು. ರಾಜಕೀಯ ಮೆಟ್ಟಿಲುಗಳನ್ನು ಏರುತ್ತಾ ಮುಂದೆ  ಸಂಸದೀಯ ಪಟುವಾಗಿಯೂ ಬೆಳೆದರು. ಆದರೂ ರಾಜಕೀಯದ ಏರಿಳಿತಕ್ಕೆ ಸಿಕ್ಕಿ 80 ರ ದಶಕದಲ್ಲಿ ಕಾಂಗ್ರೆಸ್ ತೊರೆದು ಜನತಾ ದಳ – ಕ್ರಾಂತಿರಂಗ ಪಕ್ಷವನ್ನು ಸೇರಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ಆಗಿನ ರಾಮಕೃಷ್ಣ ಹೆಗಡೆ ಅವರ ನೇತೃತ್ವದ ಜನತಾ ದಳದ ಸರ್ಕಾರದಲ್ಲಿ ಸ್ಪೀಕರ್ ಕೂಡ ಆಗಿದ್ದವರು. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇವರು ಒಟ್ಟು ನಾಲ್ಕು ಬಾರಿ ಸ್ಪರ್ಧಿಸಿ ಎರಡು ಬಾರಿ ಗೆಲುವು ಸಾಧಿಸಿದ್ದರು.
ರಾಜಕೀಯದಲ್ಲಿ ಒಬ್ಬರನ್ನೊಬ್ಬರು ಹತ್ತಿಕ್ಕುವ ‘ಆಟ’ ಗಳ ಇತಿಹಾಸ ನಿನ್ನೆ ಮೊನ್ನೆಯದಲ್ಲ. ಅಂತೆಯೇ  ಎಚ್.ಡಿ.ದೇವೇಗೌಡ ಹಾಗೂ ರಾಮಕೃಷ್ಣ ಹೆಗಡೆಯವರ ರಾಜಕೀಯ  ‘ಜಿದ್ದಾಜಿದ್ದಿ’ ಮತ್ತು ಮೇಲಾಟದಲ್ಲಿ ಚಂದ್ರೇಗೌಡರನ್ನು ಬಳಸಿಕೊಂಡು ದೇವೇಗೌಡರನ್ನು ಹತ್ತಿಕ್ಕುವ ಪ್ರಯತ್ನವನ್ನೂ ರಾಮಕೃಷ್ಣ ಹೆಗಡೆಯವರು ಮಾಡುತ್ತಿದ್ದರು. ಹೀಗಾಗಿ ಹೆಗಡೆಯವರಿಗೆ ಡಿಬಿಸಿ ಆಗ ಆಪ್ತರಾಗಿದ್ದರು.
ಚಂದ್ರೇಗೌಡ ಅವರ ಮೂಡಿಗೆರೆ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದರಿಂದ ಡಿಬಿಸಿಯವರು ತಮ್ಮ ರಾಜಕೀಯ ಏಳಿಗೆಗಾಗಿ ಇತರೆ ಕ್ಷೇತ್ರಗಳಿಗೆ ವಲಸೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿಗಳು ಎದುರಾಗುತ್ತಿದ್ದವು. ಆದರೂ ರಾಜಕೀಯದಲ್ಲಿ ಪಳಗುತ್ತಾ ಮುತ್ಸದಿಯಾಗಿದ್ದ ಡಿಬಿಸಿಯವರು ತಾವು ವಲಸೆ ಹೋದ ಕ್ಷೇತ್ರದಲ್ಲೂ ಜನಬೆಂಬಲ ಗಳಿಸಿಕೊಳ್ಳುತ್ತಿದ್ದರು. ಆದರೂ ಹೊರಗಿನವರು ಎನ್ನುವ ಸಮಸ್ಯೆ ಮತ್ತು ಸಂಕಷ್ಟಗಳು ಅವರನ್ನು ರಾಜಕೀಯವಾಗಿ ಸದಾ ಕಾಡಿದವು.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದಲೂ ಹೊರಗಿನವರು ಎಂದು ಅವರನ್ನು  ವ್ಯವಸ್ಥಿತವಾಗಿ ‘ ಹೊರಗಟ್ಟ’ ಲಾಯಿತು. ಈ ನಡುವೆ ಜನತಾ ದಳದಿಂದ ಮತ್ತೆ ಕಾಂಗ್ರೆಸ್ ಗೆ ಬಂದ ಡಿಬಿಸಿಯವರು 1999 ರಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಎಸ್. ಎಂ. ಕೃಷ್ಣ ಅವರು ಆಗ ಮುಖ್ಯಮಂತ್ರಿಯಾದರು. ಕೃಷ್ಣ ಅವರ ಸಂಪುಟದಲ್ಲಿ ಇವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ  ಕಾರ್ಯನಿರ್ವಹಿಸಿದರು. ಈ ಅವಧಿಯಲ್ಲಿ ಸಚಿವ ಸಂಪುಟದ ತೀರ್ಮಾನಗಳನ್ನು ಮಾಧ್ಯಮಗಳಿಗೆ ಇವರೇ ಬ್ರೀಫ್ ( ಮಾಹಿತಿ) ಮಾಡುತ್ತಿದ್ದರು.
ಬಳಿಕ ಮತ್ತೆ ಕಾಂಗ್ರೆಸ್ ಮೇಲೆ ಮುನಿಸಿಕೊಂಡು ತಾವು ಪಾಲಿಸಿಕೊಂಡು ಬಂದಿದ್ದ ಸಿದ್ದಾಂತಗಳನ್ನೆಲ್ಲ ಗಾಳಿಗೆ ತೂರಿ ಬಿಜೆಪಿ ಸೇರಿ ಬೆಂಗಳೂರು ಉತ್ತರದಿಂದ ಸಂಸದರೂ ಆದರು. ಇವರು ವಿಧಾನಸಭೆ ಮತ್ತು ವಿಧಾನ ಪರಿಷತ್ತು ಎರಡೂ ಕಡೆ ವಿರೋಧ ಪಕ್ಷದ ನಾಯಕರಾಗಿಯೂ ಕೆಲಸ ಮಾಡಿದ್ದರು.
ಹೀಗೆ ರಾಜಕೀಯದ ಎಲ್ಲಾ ಪಟ್ಟುಗಳನ್ನೂ ಕರಗತ ಮಾಡಿಕೊಂಡಿದ್ದ ಡಿಬಿಸಿಯವರು ಓರ್ವ ಅತ್ಯುತ್ತಮ ಸಂಸದೀಯ ಪಟುವಾಗಿ, ರಾಜಕೀಯ ಮುತ್ಸದ್ದಿಯಾಗಿ ಕರ್ನಾಟಕದ ರಾಜಕೀಯದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿ ಇದೀಗ  ನೇಪಥ್ಯಕ್ಕೆ ಸರಿದಿದ್ದಾರೆ.
ಚಂದ್ರೇಗೌಡರ ಹೆಸರು ಬಂದಾಗ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಸ್ಥಾನ ಬಿಟ್ಟುಕೊಟ್ಟವರು ಎಂಬ ನೆನಪನ್ನಂತೂ ಎಲ್ಲರೂ ಸದಾ ಮಾಡಿಕೊಳ್ಳುತ್ತಾರೆ. ಯಾವುದೋ ಒಂದು ಅಪಘಾತವಾಗಿದ್ದರಿಂದ ಮುಖದ ಮೇಲಿನ ಗಾಯದ ಗುರುತನ್ನು ಮರೆಸಲು ಗಡ್ಡ ಬಿಡಲಾರಂಭಿಸಿದ ಚಂದ್ರೇಗೌಡರು ಈ ಬಳಿಕ  ಸದಾ ಗಡ್ಡಧಾರಿಯೇ ಆದರು ಎಂದು ಓದಿದ ನೆನಪು ನನಗೆ . ಗಡ್ಡ ಇವರ ಮುಖಕ್ಕೆ ಒಪ್ಪುತ್ತಿತ್ತು. ಹಸನ್ಮುಖಿಯಾಗಿರುತ್ತಿದ್ದ ಚಂದ್ರೇಗೌಡರು ಉತ್ತಮ ವಾಗ್ಮಿಯಾಗಿದ್ದರು. ಯಾವ ಕ್ಷೇತ್ರಕ್ಕೆ ಹೋದರೂ ಬೆಂಬಲಿಗರನ್ನು ಆಕರ್ಷಿಸಿಕೊಳ್ಳುವ ರಾಜಕೀಯ ಕಲೆ, ವರ್ಚಸ್ಸು ಮತ್ತು ವ್ಯಕ್ತಿತ್ವ ಇವರದಾಗಿತ್ತು.
ಚಂದ್ರೇಗೌಡರಿಗೆ ‘ ಅಂತರಂಗ ‘ ಮತ್ತು ‘ಸಹ್ಯಾದ್ರಿ ಸುದ್ದಿ’  ಬಳಗದ ಅಂತಿಮ ಪ್ರಣಾಮಗಳು ????
– ಟಿ.ಕೆ.ರಮೇಶ್ ಶೆಟ್ಟಿ

ಗಣ್ಯರ ಕಂಬನಿ:

ಮಾಜಿ ಸಚಿವರಾದ ಡಿ ಬಿ ಚಂದ್ರೇಗೌಡರ ನಿಧನಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥ ಗೌಡ, ಕೆಪಿಸಿಸಿ ಸದಸ್ಯರಾದ ಹೆಚ್.ಸಿ.ದಾಸೇಗೌಡ, ಮಾಜಿ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಪ್ರೊ.ಜೆ ಎಲ್ ಪದ್ಮನಾಭ್, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 

 

 

Related posts

ನ.08 ರಂದು ಕಸಾಪ ವತಿಯಿಂದ ದತ್ತಿ ಉಪನ್ಯಾಸ.

ಏಕದಿನ ಏಷ್ಯಾಕಪ್ 2023: ಇಂಡೋ- ಪಾಕ್ ಕದನ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ.

ದಿನಪತ್ರಿಕೆ ವಿತರಕರ ದಿನಾಚರಣೆ: ಪೇಪರ್ ಬ್ಯಾಗ್ ವಿತರಣೆ.