ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸರ್ಕಾರ ಮತ್ತು ಪೋಷಕರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು- ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್

ಶಿವಮೊಗ್ಗ: ಸರ್ಕಾರ ಮತ್ತು ಪೋಷಕರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರಗಳು ಎಲ್‍ಕೆಜಿಯಿಂದ ಪಿಯುಸಿ ವರೆಗೆ ಉಚಿತ ಶಿಕ್ಷಣ ನೀಡಬೇಕು ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಅವರು ಇಂದು ನಗರದ ಆದಿಚುಂಚನಗಿರಿ ಸಮುದಾಯಭವನದಲ್ಲಿ ಒಕ್ಕಲಿಗರ ಯುವ ವೇದಿಕೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಒಕ್ಕಲಿಗರ ಯುವ ಸಮಾವೇಶ, ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕ ಗಳಿಸಿರುವ ಒಕ್ಕಲಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಒಕ್ಕಲಿಗೆ ಸಮುದಾಯದ ಸಾಧಕರಿಗೆ ಸನ್ಮಾನ, ವಿಶೇಷಚೇತನರಿಗೆ ವ್ಹೀಲ್ ಚೇರ್, ವಾಕರ್ ಹಾಗೂ ವಾಕ್ ಸ್ಟಿಕ್ ವಿತರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ದೇಶದಲ್ಲಿ 30ಕೋಟಿಗೂ ಹೆಚ್ಚು ಜನ ಕಡು ಬಡತನದಲ್ಲಿದ್ದಾರೆ. ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂತಹ ಕಾರ್ಯಕ್ರಮಗಳಿಂದ ಅವರ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಈ ದೇಶದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಯಾವುದೇ ಖಾಸಗಿ ಶಾಲಾ ಕಾಲೇಜುಗಳಿಗೆ ಕಡಿಮೆಯಾಗದ ರೀತಿಯಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಗಳು ಉಚಿತ ಸೇವೆ ನೀಡಬೇಕು. ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮೂವರೂ ಒಟ್ಟಾಗಿ ಹೊಂದಾಣಿಕೆಯಾದಾಗ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಸಾಧ್ಯ. ಕುವೆಂಪು ಅವರು ತಮ್ಮ 24ನೇ ವರ್ಷದಲ್ಲೇ ಸರ್ವಜನಾಂಗದ ಶಾಂತಿಯ ತೋಟದ ಕಲ್ಪನೆಯಿಂದ ನಾಡಗೀತ ಬರೆದರು. ಅವರನ್ನು ಮತ್ತು ಅವರ ಗೀತೆಯನ್ನು ಎಲ್ಲರೂ ಗೌರವಿಸುತ್ತೇವೆ. ಎದ್ದು ನಿಂತು ಹಾಡುತ್ತೇವೆ. ಕೆಳಗಿಳಿದ ತಕ್ಷಣ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತೇವೆ. ಹಣ ಒಂದೇ ಜೀವನದ ಗುರಿಯಾಗಬಾರದು ಮತ್ತು ಅದಕ್ಕಾಗಿ ಜೋತು ಬೀಳಬಾರದು ಎಂದರು.
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಪ್ರತಿಭಾ ಪುರಸ್ಕಾರದ ಮೂಲಕ ವಿದ್ಯಾರ್ಥಿಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದಾಗ ಮಾತ್ರ ಸಾಧನೆಗೆ ಸ್ಫೂರ್ತಿಯಾಗುತ್ತದೆ. ಹಿಂದೆ ವಿದ್ಯೆ ಎನ್ನುವುದು ಮೇಲ್ಜಾತಿಯವರ ಸೊತ್ತು ಎನ್ನುವಂತಿತ್ತು. ಆದರೆ ಈಗ ಸಾಧಕರ ಸೊತ್ತಾಗಿದೆ. ಪ್ರಾಮಾಣಿಕ ಪ್ರಯತ್ನ ಮಾಡಿದಲ್ಲಿ ಯಶಸ್ಸು ಸಿಗುತ್ತದೆ.ಹೆಚ್ಚಿನ ಅಂಕ ಗಳಿಕೆ ಮಾತ್ರ ಶಿಕ್ಷಣದ ಉದ್ದೇಶ ಅಲ್ಲ. ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಪೋಷಕರಿಗೆ ಮತ್ತು ದೇಶಕ್ಕೆ ಆಸ್ತಿಯಾಗಬೇಕು. ಅರಸಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ದೊಡ್ಡ ವಿಜ್ಞಾನಿಯಾಗಿ ಚಂದ್ರಯಾನದ ಯಶಸ್ಸಿನಲ್ಲಿ ಪಾತ್ರವಹಿಸಿದ್ದರು. ಅದೇರೀತಿ ಕೆಲವು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಇಂಜಿನಿಯರ್ ಆಗಿ ಕುಕ್ಕರ್ ಬಾಂಬ್ ತಯಾರಿಸಿದ್ದು ಕೂಡ ನಮ್ಮ ಕಣ್ಣ ಮುಂದೆ ಇದೆ. ವಿಶ್ವ ವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಯೋಗ್ಯ ಮನುಷ್ಯರನ್ನಾಗಿ ಮಾಡಬೇಕು. ಒಕ್ಕಲಿಗರು ಸನಾತನ ಧರ್ಮದ ಒಂದು ಅಂಗ. ಸನಾತನ ಧರ್ಮವನ್ನು ಏಡ್ಸ್ ಮತ್ತು ಕೋವಿಡ್‍ಗೆ ಕೆಲವರು ಹೋಲಿಸಿದ್ದಾರೆ. ಅವರಿಗೆ ಆ ಸ್ವಾತಂತ್ರ್ಯ ನೀಡಿದವರು ಸನಾತನ ಧರ್ಮೀಯರೇ. ಎಲ್ಲವನ್ನೂ ಅಳವಡಿಸಿಕೊಳ್ಳುವ ಧರ್ಮ ಇದ್ದರೆ ಅದು ಸನಾತನ ಧರ್ಮ ಎಂದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿರಿಬೈಲು ಧರ್ಮೇಶ್, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೆ. ಚೇತನ್, ಶಾಸಕ ಎಸ್.ಎಲ್. ಭೋಜೇಗೌಡ, ಜಿಲ್ಲ ಒಕ್ಕಲಿಗರ ಸಂಘದ ಅಧ್ಯಕ್ಷ ಆದಿಮೂರ್ತಿ, ಪ್ರಮುಖರಾದ ಕೆ.ಎನ್. ರಾಮಕೃಷ್ಣ, ಉಂಬ್ಳೇಬೈಲು ಮೋಹನ್, ವಿಜಯಕುಮಾರ್, ಕಡಿದಾಳ್ ಗೋಪಾಲ್, ಸುವರ್ಣ ಶಂಕರ್, ಯಮುನಾ ರಂಗೇಗೌಡ, ರಮೇಶ್ ಹೆಗಡೆ, ಗುರುರಾಜ ಗೌಡ, ಶೋಭಾ ವೆಂಕಟರಮಣ, ಸುನಿಲ್ ಗೌಡ, ರಘುಗೌಡ, ಪ್ರಜ್ವಲ್ ಗೌಡ ಸೇರಿದಂತೆ ಹಲವರಿದ್ದರು.

Related posts

ಭಾರತದಿಂದ ಐತಿಹಾಸಿಕ ಮೈಲಿಗಲ್ಲು: ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್ ದಾಟಿದ `GDP’

ದೇವೇಗೌಡರು ರಾಷ್ಟ್ರದ ಹೆಮ್ಮೆಯ ಪ್ರತೀಕ: ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ವಿಶ್ಲೇಷಣೆ

ರಾಜ್ಯದ 6 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಮೂರು ವರ್ಷದೊಳಗೆ ಮೂರು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ – ಸಚಿವ ಮಧು ಬಂಗಾರಪ್ಪ