ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಭಾರತೀಯರ ಆತ್ಮಗೌರವದ ಪತಾಕೆ ಹಾರಿಸಿದ್ದು ಸರ್ ಎಂ. ವಿಶ್ವೇಶ್ವರಯ್ಯನವರು- ನಾಡೋಜ ಡಾ. ಮಹೇಶ ಜೋಶಿ

ಬೆಂಗಳೂರು: ದಿಟ್ಟನುಡಿ. ದಿಟ್ಟತನ, ಕಾರ್ಯತತ್ಪರತೆ, ದೂರದೃಷ್ಟಿತ್ವ, ಶ್ರದ್ಧೆ, ಸೇವಾನಿಷ್ಠೆ, ಕಳಕಳಿ, ಬದ್ಧತೆ, ದಕ್ಷತೆ, ತನ್ನ ಗುರಿಯತ್ತ ಇರುವ ಸ್ಪಷ್ಟ ನಿರ್ಧಾರ ಗುಣಗಳ ಸಾಕಾರಮೂರ್ತಿ ಸರ್. ಎಂ.ವಿಶ್ವೇಶ್ವರಯ್ಯ ಅವರು. ಕನ್ನಡ ನಾಡನ್ನು, ಭಾರತ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸುವ ಕನಸನ್ನು ಕಂಡು, ಆ ಕನಸನ್ನು ನನಸು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಭಾರತೀಯರ ಆತ್ಮಗೌರವದ ಪತಾಕೆಯನ್ನು ಹಾರಿಸಿದ್ದಕ್ಕೆ ಸರ್. ಎಮ್.ವಿ ಅವರು “ಭಾರತ ರತ್ನ” ರಾದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯಪಟ್ಟರು.

               ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ಸರ್ ಎಂ. ವಿಶ್ವೇಶ್ವರಯ್ಯ ರವರ ಜನ್ಮ ದಿನಾಚರಣೆ ಹಾಗೂ ಶ್ರೀ ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡೋಜ ಡಾ. ಮಹೇಶ ಜೋಶಿ ಅವರು  ಮಹರ್ಷಿಕಲ್ಪರು, ಪರಮ ಪರಿಶುದ್ಧರು, ಸತ್ಯೋನ್ನತರು, ನಿಸ್ವಾರ್ಥವಾದ ಜನಪ್ರೀತಿಯ ಮೂರ್ತಿಸ್ವರೂಪರು. ರಾಷ್ಟ್ರಕವಿ ಕುವೆಂಪು ಅವರು ಸರ್ ಎಂವಿ ಅವರನ್ನು “ಯಂತ್ರಶ್ರೀ ಎಂದು ಕರೆದಿದ್ದಾರೆ. ಮಹಾತ್ಮ ಗಾಂಧೀಜಿಯವರೂ ಸಹ ಅವರನ್ನು ಪ್ರೀತಿ, ಅಭಿಮಾನದಿಂದ ಕಾಣುತ್ತಿದ್ದರು ಎನ್ನುವುದು ಉಲ್ಲೇಖನೀಯ. ೧೦೨ ವರ್ಷಗಳ ಕಾಲ ಬದುಕಿದ ವಿಶ್ವೇಶ್ವರಯ್ಯನವರು ಸರಿ ಸುಮಾರು ೭೮ ವರ್ಷಗಳ ಕಾಲ ದೇಶವನ್ನು ಪ್ರಗತಿಪಥದತ್ತ ಸಾಗಿಸಿದವರು. ಸಾವಿರಾರು ವರ್ಷಗಳಿಂದ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಪರಂಪರೆ ವೈವಿಧ್ಯಮಯ ಸಮೃದ್ಧ ಪರಿಸರವನ್ನು ಕಾಣುತ್ತೇವೆ. ಹಾಗೆಯೇ ಮಹಾನ್ ವಿಜ್ಞಾನಿಗಳು, ದೂರದೃಷ್ಟಿಯ ತಂತ್ರಜ್ಞರು, ದೇಶಸೇವೆಯೇ ತಮ್ಮ ಜೀವನದ ಧ್ಯೇಯವಾಗಿಸಿಕೊಂಡು  ಕನ್ನಡ ನೆಲದಲ್ಲಿ ಹುಟ್ಟಿ ಇದ್ದು ಹೋದಂತಹ ‘ಅಭಿವೃದ್ಧಿ ಪಥದರ್ಶಿ’ ಸರ್ ಎಂ. ವಿಶ್ವೇಶ್ವರಯ್ಯನವರು. ಆಲಸ್ಯದಲ್ಲಿ ಇರುವವರಿಗೆ ವಯಸ್ಸು ಆಗುತ್ತದೆ, ಚಟುವಟಿಕೆಯಿಂದ ಇರುವವರಿಗೆ ಆಯುಷ್ಯ ಇರುತ್ತದೆ ಎಂದು ಹೇಳಿದ ಸರ್. ಎಮ್.ವಿ. ಅವರ ಮಾತನ್ನು ನಾಡೋಜ ಡಾ. ಮಹೇಶ ಜೋಶಿ ಅವರು ನೆನೆದುಕೊಂಡರು.

ಬೆಂಗಳೂರು ದಕ್ಷಿಣ ಪಿ.ಡಬ್ಲೂ.ಡಿಯ ಮುಖ್ಯ ಅಭಿಯಂತರರಾದ ಶ್ರೀ ಕೆ. ದುರ್ಗಪ್ಪ ಅವರು ಮಾತನಾಡಿ ಪ್ರಪಂಚಕ್ಕೆ ಮಾದರಿಯಾಗಿ, ನಮ್ಮ ನಾಡಿನಲ್ಲಿ ಹೊನ್ನ ಕನಸು ಬಿತ್ತಿದ ವಿಶ್ವೇಶ್ವರಯ್ಯ ಅವರು ಹಾಕಿಕೊಟ್ಟ ದಾರಿಯಲ್ಲಿ ಇವತ್ತಿನ ಸಮಾಜ ನಡೆಯುವ ಅವಶ್ಯಕತೆ ಇದೆ. ಅವರ ಬಗ್ಗೆ ಅರಿತುಕೊಂಡು ಅವರಂತೆ ನಡೆಯಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ನ  ಪ್ರಾಂಶುಪಾಲರಾದ ಶ್ರೀ ಸದಾಶಿವಮೂರ್ತಿ ಟಿ.ಎಸ್. ಅವರು ಬೆಂಗಳೂರು ಇಂದು ಸಿಲಿಕಾನ್ ಸಿಟಿ ಎಂದು ಗುರುತಿಸಿಕೊಳ್ಳಲು ಸರ್.ಎಮ್.ವಿ ಅವರು ಅಂದು ಹಾಕಿದ ಅಡಿಪಾಯವೇ ಕಾರಣ. ಅವರು ಸ್ಥಾಪಿಸಿದ ವಿದ್ಯಾಸಂಸ್ಥೆಯಿಂದ ಇಂದು ಪ್ರಪಂಚ ರೂಪಿಸುವ ಪ್ರತಿಭೆಗಳು ಹೊರಹೊಮ್ಮಿತ್ತಿದ್ದಾರೆ ಎಂದು ಹೇಳಿದರು.

ಸರ್ ಎಂ. ವಿಶ್ವೇಶ್ವರಯ್ಯ ರವರ  ಕುರಿತ ವಿಶೇಷ ಉಪನ್ಯಾಸ ನೀಡಿದ ಹಿರಿಯ ರಂಗಭೂಮಿ ಕಲಾವಿದರಾದ ಶ್ರೀ ಶ್ರೀಪತಿ ಮಂಜನಬೈಲು ಅವರು ಯಾರಿಂದಲೂ ಆಗದ ಸವಾಲಿನ ಕೆಲಸಗಳನ್ನು ಲೀಲಾಜಾಲವಾಗಿ ಮಾಡಿ ಮುಗಿಸುವದರ ಜೊತೆಗೆ ಎಲ್ಲರೂ ಹುಬ್ಬೇರಿಸುವಂತಹ ಫಲಿತಾಂಶವನ್ನು ನೀಡುವ ಮೂಲಕ ಅವರು ಜಗತ್ ಪ್ರಸಿದ್ಧರಾಗಿದ್ದರು. ಹೆಸರಿಗಾಗಿ ಎಂದೂ ಕೆಲಸ ಮಾಡಿದವರಲ್ಲ. ಬದಲಿಗೆ ಕೆಲಸವೇ ಹೆಸರು ಮಾಡಬೇಕು ಎನ್ನುತ್ತಲೇ ದೇಶದ ಬಹುತೇಕ ಭಾಗದಲ್ಲಿ ತನ್ನ ಕಾರ್ಯದಕ್ಷತೆಯನ್ನು ಸ್ಥಾಪಿಸಿದ ಧೀಮಂತ, ನಮ್ಮ ನಾಡು ಕಂಡ ಅಪ್ರತಿಮ ಕನಸುಗಾರ ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯನವರು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್ ಅವರು ಮಾತನಾಡಿ ನುಡಿದಂತೆ ನಡೆಯಬೇಕು ಅಂದಾಗ ದೇಶ ನಮ್ಮನ್ನು ನೆನಪಿಡುತ್ತದೆ. ದಕ್ಷತೆ ಹಾಗೂ ಪ್ರಾಮಾಣಿಕ ಬದುಕಿನ ಜೊತೆಗೆ ಕರ್ತವ್ಯದಕ್ಷತೆ ತೊರಿದ ಸರ್. ಎಂ. ವಿ ಅವರಂತೆ ಬಾಳಿ ಬದುಕಿದವರು ಪಾಂಡಪ್ಪ ಹುಗಾರ ಅವರು. ಶಿಕ್ಷಕರಾಗಿ ರೋಗಗ್ರಸ್ಥ ದೇಶವನ್ನು ಸುದಾರಣೆ ಮಾಡುವಲ್ಲಿ ವಚನ ಸಾಹಿತ್ಯ ಯಾವರೀತಿಯಲ್ಲಿ ಕೆಲಸ ಮಾಡಿದೆ ಅನ್ನುವುದನ್ನು ನೆನಪಿಸಿಕೊಡುವ ಉದ್ದೇಶದಿಂದ ತನ್ನ ದುಡುಮೆಯ ದಾಯ ಭಾಗವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಇಡುವ ಮೂಲಕ ಸಮಾಜಕ್ಕೆ ಮಾದರಿಯಾದವರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ೨೦೨೧ ನೆಯ ಸಾಲಿನ ಹಾಗೂ ೨೦೨೨ ನೆಯ ಸಾಲಿನ  ಶ್ರೀ ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ ಪ್ರಶಸ್ತಿಯನ್ನು ಕ್ರಮವಾಗಿ ಬೆಂಗಳೂರಿನ ಸಂಧ್ಯಾ ದೀಪ ಟ್ರಸ್ಟ್ (ರಿ) ಹಾಗೂ ಧಾರವಾಡ. ಲೇಖಕರು, ಪ್ರಸಾರ ತಜ್ಞರಾಗಿರುವ  ಡಾ. ಬಸವರಾಜ ಸಾದರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃತ  ಡಾ. ಬಸವರಾಜ ಸಾದರ ಅವರು ಮಾತನಾಡಿ ನಮ್ಮ ಹಿಂದಿನ ಮಹನಿಯರು  ದೇಶದ ಅಭ್ಯುದಯದ ಕುರಿತು ಕನಸು ಕಾಣದಿದ್ದರೆ ನಮ್ಮ ಯುವಕರು ಇಂದು ಬಿದಿಯಲ್ಲಿ ಇರಬೇಕಿತ್ತು. ದೂರ ದೃಷ್ಟಿಯೊಂದಿಗೆ ಸ್ಥಗಿತ ಸ್ಥಿರ ಬದಕನ್ನು ದೂರವಿಟ್ಟು, ಚಾಲನಾ ಸ್ಥಿತಿಯಲ್ಲಿ ಶರಣ ಸದೃಷ್ಯವಾಗಿ ಬದುಕಿದ ಮಾಹಾನ್ ವ್ಯಕ್ತಿಗಳ ಜೀವನವೇ ನಮ್ಮ ಆದರ್ಶವಾಗಬೇಕು ಎಂದರು. ಬೆಂಗಳೂರಿನ ಸಂಧ್ಯಾ ದೀಪ ಟ್ರಸ್ಟ್ (ರಿ)ಪರವಾಗಿ ಪ್ರಶಸ್ತಿ ಸ್ವಿಕರಿಸಿದ ಸಂಸ್ಥೆಯ ಶ್ರೀಮತಿ ರತ್ನ ಶ್ರೀನಿವಾಸ್ ಅವರು ಸಾಂದರ್ಭಿಕ ಮಾತನ್ನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿದರು, ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್.ಪಟೇಲ್ ಪಾಂಡು ಅವರು ಕಾರ್ಯಕ್ರಮ ನಿರೂಪಿಸಿದರು, ಪರಿಷತ್ತಿನ ಕೇಶವಮೂರ್ತಿ ಅವರು ಪ್ರಶಸ್ತಿ ಪುರಸ್ಕೃತರ ವಿವರಣೆ ನೀಡಿದರು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಅವರು ವಂದಿಸಿದರು.

ಛಾಯಾಚಿತ್ರ- ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಳ್ಳಲಾದ ಸರ್ ಎಂ. ವಿಶ್ವೇಶ್ವರಯ್ಯ ರವರ ಜನ್ಮ ದಿನಾಚರಣೆ ಹಾಗೂ ಶ್ರೀ ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಂಗಳೂರಿನ ಸಂಧ್ಯಾ ದೀಪ ಟ್ರಸ್ಟ್ (ರಿ) ಹಾಗೂ ಧಾರವಾಡ. ಲೇಖಕರು, ಪ್ರಸಾರ ತಜ್ಞರಾಗಿರುವ  ಡಾ. ಬಸವರಾಜ ಸಾದರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Related posts

ಜಿಲ್ಲೆಯ ಜನಪದ ಕಲಾವಿದರ ಮಾಹಿತಿ ನೀಡಲು ಕಜಾಪ ಮನವಿ

ಲೋಕಾಯುಕ್ತದಿಂದ ತಾಲ್ಲೂಕುಗಳಲ್ಲಿ ಕುಂದುಕೊರತೆ ಅರ್ಜಿ ಸ್ವೀಕಾರ

ಇನ್ಮುಂದೆ ಸುಪ್ರೀಂಕೋರ್ಟ್ ಪ್ರಕರಣಗಳ ವಿವರ ವೆಬ್ ಸೈಟ್ ನಲ್ಲಿ ಲಭ್ಯ.