ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನಾಟಕಕ್ಕೆ ತನ್ನದೇ ಆದ ಒಂದು ವಿಶೇಷ ಗಮ್ಮತ್ತಿದೆ-ಚಲನಚಿತ್ರ ನಟ ದೊಡ್ಡಣ್ಣ

ಶಿವಮೊಗ್ಗ: ನಾಟಕಕ್ಕೆ ತನ್ನದೇ ಆದ ಒಂದು ವಿಶೇಷ ಗಮ್ಮತ್ತಿದೆ ಎಂದು ಚಲನಚಿತ್ರ ನಟ ದೊಡ್ಡಣ್ಣ ಹೇಳಿದರು.
ಅವರು ಇಂದು ಕುವೆಂಪು ರಂಗಮಂದಿರದಲ್ಲಿ ದಸರಾ ಅಂಗವಾಗಿ ಆಯೋಜಿಸಿದ್ದ ರಂಗದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಟಕಕ್ಕೆ ತನ್ನದೇ ಆದ ಶಕ್ತಿ ಇದೆ. ಅದು ಕಲಿತವರನ್ನು, ಕಲಿಯದವರನ್ನೂ ಕರೆಯುತ್ತದೆ. ಹೃದಯ ತಟ್ಟುತ್ತದೆ. ಅದಕ್ಕೊಂದು ಸಮ್ಮೋಹನ ಶಕ್ತಿ ಇದೆ. ಕಾವ್ಯಗಳಲ್ಲಿಯೇ ನಾಟಕ ಅತಿ ರಮ್ಯವಾದುದು. ನಾವು ನಾಟಕಗಳಿಂದಲೇ ಬೆಳೆದು ಈ ಮಟ್ಟಕ್ಕೆ ಬಂದಿದ್ದೇವೆ. ರಂಗಭೂಮಿ ಪ್ರೀತಿ, ಸಾಮರಸ್ಯ, ಸಮಾನತೆಯನ್ನು ಕಲಿಸುತ್ತದೆ ಎಂದರು.
ಬಡತನ ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾನಿಲಯವೂ ಕಲಿಸುವುದಿಲ್ಲ. ಎಲ್ಲದಕ್ಕೂ ಸಂಸ್ಕಾರವೇ ತಳಹದಿಯಾಗಿರುತ್ತದೆ. ನಮ್ಮ ಹೆಣ್ಣು ಮಕ್ಕಳು ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಏಕೆಂದರೆ ನಾನು ಈ ಮಟ್ಕಕ್ಕೆ ಬಂದಿದ್ದೇನೆ ಎಂದರೆ ನನ್ನ ತಾಯಿಯೇ ಕಾರಣ ಎಂದರು.
ಶಿವಮೊಗ್ಗದಲ್ಲಿ ನಡೆಯುವ ದಸರಾ ಅತ್ಯಂತ ಸಂಭ್ರಮದ್ದಾಗಿದೆ. ಅದರಲ್ಲೂ ರಂಗದಸರಾವನ್ನು ವಿಶೇಷವಾಗಿ ಮಾಡಿರುವುದು ಅತ್ಯಂತ ಶ್ಲಾಘನೀಯವಾದುದು. ಈ ದಸರಾ ಹೀಗೆಯೇ ಮುಂದುವರಿದು ಮೈಸೂರು ದಸರಾದಂತೆ ವಿಶ್ವ ವಿಖ್ಯಾತಿ ಪಡೆಯಲಿ ಎಂದ ಅವರು, ಭದ್ರಾವತಿಯ ವಿಐಎಸ್‍ಎಲ್ ಕಾರ್ಖಾನೆಗೆ 100 ವರ್ಷ ತುಂಬಲಿದೆ. ಮೈಸೂರು ಮಹಾರಾಜರ ಕೊಡುಗೆ ಅದು. ನಾನು ಇಲ್ಲಿ ನಾಲ್ಕನೇ ದರ್ಜೆ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ ಎಂಬುದೇ ನನಗೆ ಹೆಮ್ಮೆಯಾಗಿದೆ. ಮೈಸೂರು ಮಹಾರಾಜರು ಕೇವಲ ದಸರಾವನ್ನು ನೀಡಲಿಲ್ಲ. ಸಣ್ಣಕ್ಕಿ ತಿನ್ನಲು ಅವಕಾಶ ಮಾಡಿಕೊಟ್ಟವರು ಎಂದರು.
ಇದಕ್ಕೂ ಮುನ್ನ ಮಹಾನಗರ ಪಾಲಿಕೆ ಆವರಣದಿಂದ ಶಿವಪ್ಪನಾಯಕ ವೃತ್ತ, ನೆಹರೂ ರಸ್ತೆ ಮಾರ್ಗವಾಗಿ ಕುವೆಂಪು ರಂಗಮಂದಿರದವರೆಗೆ ರಂಗಜಾಥಾ ನಡೆಯಿತು. ಮೆರವಣಿಗೆಯಲ್ಲಿ ರಂಗಕಲಾವಿದರು ವಿವಿಧ ವೇಷಭೂಷಣದೊಂದಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದರು. ಡೊಳ್ಳು ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ರಂಗಜಾಥಾಕ್ಕೆ ಚಾಲನೆ ನೀಡಿದ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಕಾಂತೇಶ್ ಕದರಮಂಡಲಗಿ, ಶಾಸಕ ಎಸ್.ಎನ್. ಚನ್ನಬಸಪ್ಪ, ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದ ಅಧ್ಯಕ್ಷ ಕೊಟ್ರಪ್ಪ ಜಿ. ಹಿರೇಮಾಗಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಉಮೇಶ್ ಹಾಲಾಡಿ, ರಂಗದಸರಾ ಸಮಿತಿ ಅಧ್ಯಕ್ಷ ಎಸ್.ಜಿ. ರಾಜು ಸೇರಿದಂತೆ ಹಲವರಿದ್ದರು.

ಬಾಕ್ಸ್:
ದೊಡ್ಡಣ್ಣ ಕೋಪಗೊಂಡಿದ್ದೇಕೆ
ಚಲನಚಿತ್ರ ನಟ ದೊಡ್ಡಣ್ಣ ರಂಗದಸರಾ ಉದ್ಘಾಟನೆಗೆ ಬಂದು ಕುವೆಂಪು ರಂಗಮಂದಿರದಲ್ಲಿ ಶಾಸಕರಿಗಾಗಿ ಕಾಯುತ್ತಿದ್ದರು. ಸಕ್ರೆಬೈಲಿನ ಕಾರ್ಯಕ್ರದಲ್ಲಿದ್ದ ಶಾಸಕ ಚನ್ನಬಸಪ್ಪ ಅವರಿಗೆ ದೊಡ್ಡಣ್ಣನವರ ಫೋನ್ ರಿಸೀವ್ ಮಾಡಲು ಆಗಿರಲಿಲ್ಲ. ಇದರಿಂದ ಕ್ಷಣ ಕಾಲ ಸಿಟ್ಟಿಗೆದ್ದ ದೊಡ್ಡಣ್ಣ ಅದೆಲ್ಲ ನನಗೆ ಗೊತ್ತಿಲ್ಲ. ಶಾಸಕರು ಈ ಕೂಡಲೇ ಬರಬೇಕು. ನಾವೇಕೆ ಬಂದಿದ್ದೇವೆ ಎಂದು ಸಿಡುಕಿದರು. ಅಲ್ಲಿದ್ದವರು ಅವರನ್ನು ಸಮಾಧಾನ ಪಡಿಸಿ ವೇದಿಕೆಗೆ ಕರೆದೊಯ್ದರು. ಅಷ್ಟರಲ್ಲಿ ಶಾಸಕರು ವೇದಿಕೆಗೆ ಆಗಮಿಸಿದ್ದರು. ಅವರನ್ನು ಕಂಡ ದೊಡ್ಡಣ್ಣನ ಕೋಪ ಶಾಂತವಾಗಿ, ಶಾಸಕರು ಬಂದಿದ್ದಾರೆ. ಅವರಿಗೆ ಅಭಿನಂದನೆ. ಅವರು 100 ವರ್ಷ ಚೆನ್ನಾಗಿರಲಿ ಎಂದು ಹಾರೈಸಿದರು.

Related posts

ಆರ್​ಎಸ್​ಎಸ್​ ತತ್ವ ನಂಬಿ ಯಾರು ಉದ್ಧಾರ ಆಗಿದ್ದಾರೆ ತೋರಿಸಿ-ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ.

ಇನ್ನೂ 10 ಲಕ್ಷ ಮಹಿಳೆಯರಿಗೆ ಸಿಗದ ಗೃಹಲಕ್ಷ್ಮೀ ಭಾಗ್ಯ

ಇಸ್ರೇಲ್ ವಿರುದ್ಧ ಭಾರತ ಮತ ಚಲಾವಣೆ: ಅಚ್ಚರಿ ಮೂಡಿಸಿದ ಪ್ರಧಾನಿ ಮೋದಿ’ ನಡೆ!