ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ವಿದ್ಯಾರ್ಥಿಗಳು ಸಾಮಾಜಿಕ ಅಧ್ಯಯನಗಳಲ್ಲಿ ತೊಡಗಿಸಿಕೊಳ್ಳಿ-ಡಾ.ವೈ.ಎಂ.ಉಪ್ಪಿನ್

ಶಿವಮೊಗ್ಗ : ಬದುಕಿಗೆ ಅನೇಕ ಅನುಭವಗಳನ್ನು ನೀಡುವ ಸಾಮಾಜಿಕ ಅಧ್ಯಯನಗಳನ್ನು ವಿದ್ಯಾರ್ಥಿಗಳು ನಿರಂತರವಾಗಿ ಅಳವಡಿಸಿಕೊಳ್ಳಿ ಎಂದು ಪ್ರಾಂತೀಯ ರಾಷ್ಟ್ರೀಯ ಸೇವಾ ಯೋಜನೆ ನಿರ್ದೇಶನಾಲಯದ ನಿರ್ದೇಶಕರಾದ ಡಾ.ವೈ.ಎಂ.ಉಪ್ಪಿನ್ ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಕುವೆಂಪು ವಿಶ್ವವಿದ್ಯಾಲಯ, ರಾಷ್ಟ್ರೀಯ ಶಿಕ್ಷಣ ಸಮಿತಿ, ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಏಳು ದಿನಗಳ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಶಿಬಿರದಲ್ಲಿ ಸಮಾರೋಪ ಮಾತುಗಳನ್ನಾಡಿದರು.
ವ್ಯಕ್ತಿತ್ವ ವಿಕಸನದ ಬದಲಾವಣೆಗಳಿಂದ ಮಾತ್ರ ಶಿಬಿರಗಳು ಸಾರ್ಥಕತೆ ಪಡೆಯಲಿದೆ. ಮುಂದಿನ ದಿನಗಳಲ್ಲಿ ಭಾರತ ಸರ್ಕಾರದಿಂದ ಹೆಣ್ಣು ಮಕ್ಕಳಿಗಾಗಿಯೇ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುವುದು. ಶಿಬಿರಗಳಲ್ಲಿ ಕಲಿತ ಅನೇಕ ಶಿಸ್ತಿನ ವಿಚಾರಗಳನ್ನು ಮನೆಯಲ್ಲಿ ಅನುಷ್ಟಾನಗೊಳಿಸಿ. ಕಲಿತ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವ ಕಲೆಯು ನಿಮ್ಮದಾಗಲಿ ಎಂದು ಆಶಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿ, ಮನುಷ್ಯ ಮನುಷ್ಯತ್ವದೊಂದಿಗೆ ಬದುಕುವುದನ್ನು ಮರೆತಿದ್ದಾನೆ. ಅಂತಹ ಮನುಷ್ಯತ್ವದ ಸೌಜನ್ಯತೆ ಪಡೆಯಲು ಹಾಗೂ ವ್ಯಕ್ತಿತ್ವ ಪರಿಪೂರ್ಣಗೊಳಿಸಲು ಇಂತಹ ಶಿಬಿರ ಅದ್ಭುತ ವೇದಿಕೆಯಾಗಿದೆ.
ಸೇವೆ ಮಾಡುವುದು ಜೀವನದ ರಕ್ತ ಕಣಗಳಲ್ಲಿ ಬರಬೇಕು. ಸೇವೆಯ ಮನೋಭಾವದಿಂದ ನಮ್ಮ ಸುತ್ತಲಿನ ಊರು ಪರಿಸರ ಅನೇಕ ಬದಲಾವಣೆಯನ್ನು ಪಡೆಯುತ್ತದೆ. ಶಿಬಿರಗಳೆಂದರೇ ಪ್ರಯೋಗಗಳ ಹೂರಣ. ಅಂತಹ ಪ್ರಯೋಗಗಳಿಂದ ಮತ್ತಷ್ಟು ಸಮಾಜಮುಖಿ ಚಿಂತನೆಗಳು ಹೊರಹೊಮ್ಮಲಿ ಎಂದು ಆಶಿಸಿದರು.
ಕುವೆಂಪು ವಿಶ್ವವಿದ್ಯಾಲಯ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ನಾಗರಾಜ ಪರಿಸರ ಮಾತನಾಡಿ, ಶಿಬಿರಗಳಲ್ಲಿ ಕಲಿತ ಮೌಲ್ಯಗಳ ಮೂಲಕ ದೇಶಕ್ಕೆ ಉತ್ತಮ ರಾಜಕಾರಣಿ ಅಧಿಕಾರಿಗಳಾಗುವ ಸಾಮರ್ಥ್ಯವನ್ನು ಶಿಬಿರ ನೀಡಲಿದೆ ಎಂದು ಹೇಳಿದರು.
ಎ.ಟಿ.ಎನ್.ಸಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪಿ.ಆರ್.ಮಮತಾ ಅಧ್ಯಕ್ಷತೆ ವಹಿಸಿದ್ದರು.  ಎನ್ಎಸ್ಎಸ್ ಶಿಬಿರಾಧಿಕಾರಿ ಪ್ರೊ‌.ಕೆ.ಎಂ.ನಾಗರಾಜ,  ಪ್ರೊ.ಮಲ್ಲಿಕಾರ್ಜುನ , ಸೌಮ್ಯ, ಹರ್ಷಾ, ಪ್ರೊ.ಹರ್ಷ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಎಸ್.ಜಗದೀಶ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸುಶ್ಮಿತಾ ಮತ್ತು ಕೃತಿಕ ಪ್ರಾರ್ಥಿಸಿದರು.

Related posts

ಅಖಿಲ ಭಾರತ ಕರಾಟೆ ಪಂದ್ಯಾವಳಿ: ಚಿನ್ನ, ಬೆಳ್ಳಿ, ಕಂಚು ಪದಕ ಗೆದ್ದು ಹೆಮ್ಮೆ ತಂದ ಕರಾಟೆಪಟುಗಳು

ನಾಳೆ ಆದಿತ್ಯ- ಎಲ್ 1′ ಉಡಾವಣೆಗೆ `ಇಸ್ರೋ’ ಸಜ್ಜು.

ಹೃದಯ ದಿನ: ಸೆ.25ರಿಂದ ಸೆ.29ರವರೆಗೆ ಬಾನುಲಿ ಸರಣಿ ಕಾರ್ಯಕ್ರಮ.