ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ವನ್ಯಜೀವಿಗಳ ಸಂರಕ್ಷಣೆ, ನಾಗರಿಕ ಸಮಾಜದ ಹೊಣೆ: ಡಾ. ಸಂಜಯ್ ಗುಬ್ಬಿ

ಶಂಕರಘಟ್ಟ, : ಅರಣ್ಯಗಳು ಕೇವಲ ವನ್ಯಜೀವಿಗಳಿಗೆ ಮಾತ್ರ ಸೀಮಿತವಲ್ಲ. ವನ್ಯಜೀವಿ ಸಂಪತ್ತು ಭೂಮಂಡಲದ ಸಮತೋಲನವನ್ನು ಕಾಪಾಡಿಕೊಂಡುಬರುತ್ತಿರುವ ಜೀವಸೆಲೆ. ಆದ್ದರಿಂದ ವನ್ಯಜೀವಿಗಳ ಆವಾಸ ಸ್ಥಾನಗಳನ್ನು ಸಂರಕ್ಷಿಸಬೇಕಾದ ಹೊಣೆಗಾರಿಕೆ ನಾಗರಿಕ ಸಮಾಜದ ಮೇಲಿದೆ ಎಂದು ಖ್ಯಾತ ವನ್ಯಜೀವಿ ತಜ್ಞ ಡಾ. ಸಂಜಯ್ ಗುಬ್ಬಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ವನ್ಯಜೀವಿ ಮತ್ತು ನಿರ್ವಹಣೆ ವಿಭಾಗದ ವತಿಯಿಂದ ಅ. 03 ರಿಂದ 07 ರವರೆಗೆ ಆಯೋಜಿಸಲಾಗಿರುವ ವನ್ಯಜೀವಿ ಸಪ್ತಾಹವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ವನ್ಯಜೀವಿಗಳು, ಮರಗಿಡಗಳು, ಸರೀಸೃಪಗಳು, ಕ್ರಿಮಿಕೀಟಗಳು, ಹೀಗೆ ಒಟ್ಟಾರೆ ವನ್ಯಜೀವಿ ಸಂಪತ್ತು ನೀರಿನ ಶುದ್ಧೀಕರಣ, ಕಾರ್ಬನ್ ಹೀರುವಿಕೆ, ಪರಾಗಸ್ಪರ್ಷ ಕ್ರಿಯೆ ಮತ್ತಿತರ ಅತಿ ಮುಖ್ಯವಾದ ಪ್ರಕ್ರಿಯೆಯನ್ನು ನಡೆಸುವ ಮೂಲಕ ಜೀವವೈವಿಧ್ಯತೆಯನ್ನು ಉಳಿಸುವುದರ ಜೊತೆಗೆ ಮಾನವ ಜನಾಂಗದ ಆರೋಗ್ಯಕರ ಬದುಕಿಗೆ ಪೂರಕವಾದ ಕಾರ್ಯ ನಿರ್ವಹಿಸುತ್ತದೆ ಎಂದರು.
ಆದರೆ ದುರದೃಷ್ಟವಶಾತ್ ವನ್ಯಜೀವಿಗಳ ಆವಾಸ ಸ್ಥಾನಗಳನ್ನು ಅತಿಕ್ರಮಿಸುವ ಅಭಿವೃದ್ಧಿ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಅರಣ್ಯ ನಾಶ, ನಗರೀಕರಣ ಮತ್ತು ಕೈಗಾರಿಕೆಗಳ ವಿಸ್ತರಣೆಗೆ ಅರಣ್ಯ ಮತ್ತು ಅರಣ್ಯ ಸಂಪತ್ತನ್ನು ನಮಗರಿವಿಲ್ಲದಂತೆ ನಾಶಪಡಿಸುತ್ತಿದ್ದೇವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕನಿಷ್ಠಪಕ್ಷ ಸಂರಕ್ಷಿತ ಅರಣ್ಯ ಪ್ರದೇಶ, ವನ್ಯಜೀವಿ ಕಾರಿಡಾರ್‍ಗಳಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳಿಗೆ ಅನುಮತಿ ನೀಡಬಾರದು. ಸಂಶೋಧಕರು ಮತ್ತು ಸ್ಥಳೀಯ ಸಮುದಾಯಗಳ ಜಂಟಿ ಸಹಯೋಗದಲ್ಲಿ ವನ್ಯಜೀವಿ ಆವಾಸ ಸ್ಥಾನಗಳನ್ನು ಪುನರುಜ್ಜೀವನಗೊಳಿಸಬೇಕಾದ ಅಗತ್ಯತೆ ಇದೆ ಎಂದು ಸಲಹೆ ನೀಡಿದರು.
ವಿವಿಯಿಂದ ಅರಣ್ಯ, ವನ್ಯಜೀವಿಗಳ ರಕ್ಷಣೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಜೆ. ನಾರಾಯಣ, ಹದಿನೈದು ವರ್ಷಗಳ ಹಿಂದೆ ಭದ್ರಾ ಅಭಯಾರಣ್ಯ ಮತ್ತು ಇಲ್ಲಿನ ಜೀವವೈವಿಧ್ಯದ ರಕ್ಷಣೆಯ ಧ್ಯೇಯದೊಂದಿಗೆ ವಿಭಾಗ ಆರಂಭವಾಗಿತ್ತು. ಕೇವಲ ನೌಕರಿಗಾಗಿ ವಿದ್ಯಾಭ್ಯಾಸ ನೀಡದೆ, ತನ್ನ ಉದ್ದೇಶದಂತೆ ವನ್ಯಜೀವಿಗಳ ಉಳಿವು ಮತ್ತು ಸಂರಕ್ಷಣೆಗಾಗಿ ಉನ್ನತ ಅಧ್ಯಯನಗಳನ್ನು ವಿಭಾಗ ಕೈಗೊಂಡಿದೆ. ಆನೆ ಮತ್ತು ಮಾನವ ಸಂಘರ್ಷ, ಕೃಷ್ಣ ಮೃಗಗಳ ಸಮಸ್ಯೆ, ಹಾವುಗಳ ಜೀವ ವೈವಿಧ್ಯತೆ, ನೀರು ನಾಯಿಗಳು ಜೀವನ ವಿಧಾನ, ಕರಡಿಗಳ ಅಹಾರಕ್ರಮ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಂಶೋಧನೆಗಳು ನಡೆದಿವೆ ಎಂದರು.
ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ರಾಹುಲ್ ಆರಾಧ್ಯ ಮಾತನಾಡಿ, ಪರಿಸರ ಸಮತೋಲನವನ್ನು ಕಾಪಾಡುವ ನಿಟ್ಟಿನಲ್ಲಿ ಹಾವುಗಳು ಮತ್ತಿತರ ಸರೀಸೃಪಗಳು ಅತ್ಯಂತ ಮಹತ್ವವಾದ ಪಾತ್ರ ವಹಿಸಲಿದೆ. ಹಾವುಗಳಿಂದ ಭಯಭೀತರಾಗುವುದಕ್ಕಿಂತ, ಅವುಗಳೊಂದಿಗೆ ಸಹಬಾಳ್ವೆಯನ್ನು ನಡೆಸುವುದರತ್ತ ಗಮನಹರಿಸುವುದು ಸೂಕ್ತ ಎಂದು ಸಲಹೆಯಿತ್ತರು.
ವನ್ಯಜೀವಿ ನಿರ್ವಹಣಾ ವಿಭಾಗದ ಡಾ. ವಿಜಯ್‍ಕುಮಾರ, ಪ್ರೊ. ಬಿ. ತಿಪ್ಪೇಸ್ವಾಮಿ, ಜೀವ ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳು ಹಾಜರಿದ್ದರು.

ವನ್ಯ ಸಂಪತ್ತು ಉಳಿಸಿ ಜಾಥಾ
ಉದ್ಘಾಟನಾ ಕಾರ್ಯಕ್ರಮಕ್ಕೂ ಮೊದಲು ವಿಶ್ವವಿದ್ಯಾಲಯದ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ವಿಭಾಗಗಳ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಕರ್ಷಕ ಜಾಥಾ ಕೈಗೊಳ್ಳುವ ಮೂಲಕ ವನ್ಯಜೀವ ಸಂಪತ್ತು ಉಳಿಸುವ ಕುರಿತು ಅರಿವು ಮೂಡಿಸಿದರು.
ಜಾಥಾದಲ್ಲಿ ವನ್ಯಜೀವಿಗಳಿಗೆ ಬಂದಿರುವ ಅಪಾಯಗಳು, ಪರಿಹಾರ ಕ್ರಮಗಳು, ಕೊಡಗಿನ ಪ್ರಕೃತಿ ವಿಕೋಪ ಪರಿಸ್ಥಿತಿ, ಜಾಗಾತಿಕ ಹವಾಮಾನ ವೈಪರಿತ್ಯಗಳು ಸೇರಿದಂತೆ ವಿವಿಧ ಪರಿಸರ ಸಂಬಂಧಿ ಸಮಸ್ಯೆಗಳ ಭಿತ್ತಿಚಿತ್ರಗಳ ಪ್ರದರ್ಶಿಸಿದರು ಮತ್ತು ಘೋಷಣೆಗಳನ್ನು ಮೊಳಗಿಸಿದರು.
ಸತತ ಹತ್ತನೇ ವರ್ಷ ನಡೆಯುತ್ತಲಿರುವ ಒಂದು ವಾರಗಳ ಕಾಲದ ಈ ಕಾರ್ಯಕ್ರಮದಲ್ಲಿ ವನ್ಯಜೀವಿ ಸಂರಕ್ಷಣೆ ಕುರಿತ ಅಂತರ್ ವಿಭಾಗ ಮಟ್ಟದ ರಸಪ್ರಶ್ನೆ ಸ್ಪರ್ಧೆ, ಛಾಯಾಚಿತ್ರಗಳ ಸ್ಪರ್ಧೆ, ಚರ್ಚಾ ಸ್ಪರ್ಧೆ, ಕಿರುಚಿತ್ರ, ಸಾಕ್ಷ್ಯ ಚಿತ್ರಗಳ ಪ್ರದರ್ಶನ, ಪ್ರಬಂಧ ಸ್ಪರ್ಧೆ ಹಾಗೂ ವಿಚಾರ ಸಂಕಿರಣಗಳು ನಡೆಯಲಿವೆ.

Related posts

ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಿ- ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ.

ಕಾವೇರಿ ನೀರಿಗಾಗಿ ಹೋರಾಡುತ್ತಿರುವವರು ಮೇಕೆದಾಟು ಯೋಜನೆ ಅನುಮತಿಗೆ ಯಾಕೆ ಒತ್ತಾಯಿಸುತ್ತಿಲ್ಲ- ಡಿಸಿಎಂ ಡಿ.ಕೆ. ಶಿವಕುಮಾರ್

ಮಕ್ಕಳಿಗೆ ಸಂಸ್ಕಾರದ ಅರಿವು ಮೂಡಿಸುವುದು ಅಗತ್ಯ- ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ