ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸಾಮರಸ್ಯ ಹರಡಲು ಗಣೇಶ ಸೃಷ್ಟಿಯ ರೂಪಕ-ಡಾ.ಪ್ರಶಾಂತ ನಾಯಕ್‌ 

ಶಿವಮೊಗ್ಗ: ಗಣಪನ ಕಥೆ ಸೃಷ್ಟಿಯಾಗಿದ್ದೆ ಮನುಷ್ಯ ಪ್ರಾಣಿಗಳ ಒಡನಾಟದ ಬದುಕನ್ನು ಕುರಿತು, ಈ ಮೂಲಕ ಗಣೇಶನ ಸೃಷ್ಟಿಯ ರೂಪಕ ನೋಡಿದಾಗ ಆತ ಜಗತ್ತಿಗೆ ಬರುವುದೇ ಸಾಮರಸ್ಯ ಹರಡುವ ಸಲುವಾಗಿ ಎಂದು ಪ್ರಾಧ್ಯಾಪಕರಾದ ಡಾ.ಪ್ರಶಾಂತ ನಾಯಕ್‌ ಅಭಿಪ್ರಾಯಪಟ್ಟರು.
 ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಶಂಕರಘಟ್ಟದ ದೀನಬಂಧು ಸೇವಾಟ್ರಸ್ಟ್ ಸಹಯೋಗದಲ್ಲಿ ಶಂಕರಘಟ್ಟದ ನಿಮಿಷಾಂಭ ಕನ್ವೆನ್ಷನ್ ಹಾಲ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮನೆ-ಮನ ಸಾಹಿತ್ಯ ಕಾರ್ಯಕ್ರಮದಲ್ಲಿ ಸಾಹಿತ್ಯ ಹುಣ್ಣಿಮೆ 217 ನೇ ತಿಂಗಳ ಕಾರ್ಯಕ್ರಮ ಮತ್ತು ಗೌರಿ ಗಣೇಶ, ಈದ್ ಮಿಲಾದ್ ಸಂಭ್ರಮ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸರ್ವಜನಾಂಗದ ಶಾಂತಿಯ ತೋಟವಾಗಬೇಕು ಎನ್ನುವ ನಾಡಗೀತೆಯ ಸಂದೇಶವೇ ಪ್ರೀತಿ, ಸಾಮರಸ್ಯ ಕಾಪಾಡುವುದಾಗಿದೆ.  ಧರ್ಮ ಸಮಾನತೆ ಆಗಬೇಕು ಎಂಬುದೇ ಸಾಹಿತ್ಯದ ಮೂಲ ಆಶಯ. ನಮ್ಮಲ್ಲಿರುವ ಜಾತಿಯ ಅಂಹಕಾರ ತೊಡೆದು ಹಾಕಲು ಸಾಹಿತ್ಯ ಬೇಕು. ಹುಟ್ಟಿನ ವಿಚಾರದಲ್ಲಿ ನಾಲ್ಕು ಜಾಗವನ್ನು ಹೇಳಿ ಶ್ರೇಣೀಕೃತ ವ್ಯಸ್ಥೆ ಹುಟ್ಟು ಹಾಕುತ್ತಾರೆ. ಆದರೆ ನಿಜವಾಗಿ ಅವರು ಹುಟ್ಟಬೇಕಾದ ಜಾಗದಲ್ಲಿ ಹುಟ್ಟಿಲ್ಲ ಅನ್ನುವುದು ಸತ್ಯ. ರಾಮಾಯಣ ಕುರಿತು ಅನೇಕರು ಅನೇಕ ರೀತಿಯಲ್ಲಿ ಹೇಳುತ್ತಾರೆ. ಅದನ್ನು ಓದದೇ ಅರಿಯದೆ ಮಾತನಾಡುವವರೇ ಹೆಚ್ಚಾಗಿದ್ದಾರೆ. ಆದರೆ ಮುನ್ನೂರಕ್ಕೂ ಹೆಚ್ಚು ರಾಮಾಯಣಗಳಿವೆ. ರಾಮಾಯಣ ನಮ್ಮದೇ ಕಥೆ. ಒಂದು ಅವಿಭಕ್ತ ಕುಟುಂಬದ ಕಥೆ ಅಲ್ಲಿದೆ. ಬಹುತ್ವದ ವ್ಯವಸ್ಥೆಯನ್ನೇ ಪ್ರತಿಪಾದಿಸಲಾಗಿದೆ ಎಂದು ವಿವರಿಸಿದರು.
ಸಾಹಿತ್ಯ ಹುಣ್ಣಿಮೆ ಎರಡು ನೂರ ಹದಿನೇಳು ತಿಂಗಳು ನಿರಂತರ ಸಾಗಿಬಂದಿದೆ ಎಂದರೆ ಅದು ಈ ನೆಲದ ಸಾಹಿತ್ಯ ಸಾಂಸ್ಕೃತಿಕ ತಾಕತ್ತು ಎಂದು ಬಣ್ಣಿಸಿದವರು ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಿ. ಮಂಜುನಾಥ ಅವರು. ಜನರ ನಡುವೆ ಹೋಗಿ ಪ್ರತಿಭೆಗಳನ್ನು ಗುರುತಿಸುವುದು,  ಜನಸಾಮಾನ್ಯರ ಅಂಗಳದಲ್ಲಿ ವೇದಿಕೆ ಕಲ್ಪಿಸಿ ಪ್ರತಿಭೆಗಳ ಅನಾವರಣ ಮತ್ತು ಸಾಹಿತ್ಯ, ಸಂಗೀತ, ವಿಚಾರಗಳ ಕಂಪನ್ನು ಭಿತ್ತುವ ಕೆಲಸ ಮಾಡುತ್ತಾ ಬಂದಿದ್ದೇವೆ. ಸಹಕರಿಸಿ ಹಾರೈಸಿದವರನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡರು.
 ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ರಘುರಾಮ ದೇವಾಡಿಗ ಮತ್ತು ಶಾಸಕರ ಪರವಾಗಿ ಅವರ ಸಹೋದರ ಬಿ. ಕೆ. ಜಗನ್ನಾಥ ಅವರನ್ನು ಸನ್ಮಾನಿಸಲಾಯಿತು.
ದೀನಬಂಧು ಸೇವಾ ಟ್ರಸ್ಟ್ ಅಧ್ಯಕ್ಷರಾದ ಶಂಕರಘಟ್ಟ ಎಂ. ರಮೇಶ್ ಅವರು ಸ್ವಾಗತಿಸಿದರು. ಕಳೆದ ಮೂರು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಲು ಪ್ರಯತ್ನ ಮಾಡಿದ್ದೆವು. ಈಗ ಸಾಕಾರಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸಾಹಿತಿಗಳಾದ ದಾಳೇಗೌಡರು, ಕಸಾಪ ತಾಲ್ಲೂಕು ಅಧ್ಯಕ್ಷರಾದ ಕೋಡ್ಲು ಯಜ್ಞಯ್ಯ, ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರಾದ ಮಹಾದೇವಿ, ಕಜಾಪ ತಾಲ್ಲೂಕು ಅಧ್ಯಕ್ಷರಾದ ರೇವಣಪ್ಪ, ಜೈ ಕರ್ನಾಟಕ ಸಂಘದ ಶಶಿಕುಮಾರ್, ಅಶ್ವಿನಿ ಶಶಿಕುಮಾರ್, ಗ್ರಾ.ಪಂ. ಸದಸ್ಯರಾದ ಪುನಿತ್, ಗರೀಶ್, ಲೋಕೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಾಯಕರಾದ ಪ್ರಸನ್ನ, ಆರ್. ನಾಗೇಶ್, ಮಹಾದೇವಿ ಹಾಡಿದರು. ಉಪನ್ಯಾಸಕ ಡಾ. ಜಿ. ಆರ್. ಲವ ಕಥೆ ಹೇಳಿದರು. ಕವಿಗಳಾದ ಗುಣ ಶಂಕರಘಟ್ಟ, ಸಂಪತ್, ಸಂದೀಪ ಎಲ್,ನಾಗರಾಜ್, ಕಾಂತಣ್ಣ ಸಿದ್ಧರಾಮ ಕವನಗಳನ್ನು ವಾಚಿಸಿದರು. ಗೋಣಿಬೀಡು ಭೈರಪ್ಪ ಬೇಂದ್ರೆ ಕವನ ಹಾಡಿದರು. ಮಹೇಶ್, ಡಿ. ಗಣೇಶ್ ನಿರೂಪಿಸಿ, ಕೆ.ಎಸ್. ಮಂಜಪ್ಪ ವಂದಿಸಿದರು.

Related posts

ಶ್ರೀ ಚೌಡೇಶ್ವರಿ ದೇವಿಗೆ ಸರಸ್ವತೀ ಅಲಂಕಾರ.

ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ ಮಾಡಿದ ಮಾಜಿ ಸಚಿವ ಶ್ರೀರಾಮುಲು.

ಶಿವಮೊಗ್ಗದಲ್ಲಿ ಕೈಗಾರಿಕೆ ಬೆಳೆಯುವ ಸಾಮಥ್ರ್ಯ ಇದೆ : ಸಚಿವ ಮಧು ಬಂಗಾರಪ್ಪ