ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ವಿದ್ಯಾರ್ಥಿಗಳಲ್ಲಿರುವ ಅಗಾಧ ಶಕ್ತಿ ಪರಿಚಯಿಸುವ ಕಾರ್ಯ ಅಗತ್ಯ- ಡಾ. ಎಂ.ಎಸ್.ಕೃಷ್ಣಪ್ರಸಾದ್

ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ಅಡಗಿರುವ ಅಗಾಧ ಶಕ್ತಿ ಪರಿಚಯಿಸುವ ಜತೆಯಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನವನ್ನು ಶಿಕ್ಷಕರು ಹಾಗೂ ಪೋಷಕರು ಒದಗಿಸಬೇಕು ಎಂದು ಸುಬ್ಬಯ್ಯ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಡೀನ್ ಡಾ. ಎಂ.ಎಸ್.ಕೃಷ್ಣಪ್ರಸಾದ್ ಹೇಳಿದರು.
ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವತಿಯಿಂದ ಡಿವಿಎಸ್ ರಂಗಮಂದಿರದಲ್ಲಿ ಆಯೋಜಿಸಿದ್ದ “ಪ್ರತಿಭಾ ಪುರಸ್ಕಾರ 2023” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಕಷ್ಟು ಸಂಪನ್ಮೂಲ ಲಭ್ಯವಿದ್ದು, ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶ ಹಾಗೂ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಪೋಷಕರ ಸಂಪೂರ್ಣ ಸಹಕಾರದಿಂದ ಯಶಸ್ಸು ಸಾಧಿಸಬೇಕು ಎಂದು ತಿಳಿಸಿದರು.
ಬದುಕಿನಲ್ಲಿ ಸ್ಪಷ್ಟ ಗುರಿ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಿದೆ. ಜೀವನದಲ್ಲಿ ಗುರಿ ಆಯ್ಕೆ ಮಾಡಿಕೊಂಡ ಕ್ಷಣದಿಂದಲೇ ಗುರಿ ಸಾಧಿಸುವ ಮಾರ್ಗದಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು. ಹಂತ ಹಂತವಾಗಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಏರಬೇಕು ಎಂದರು.
ಕುವೆಂಪು ವಿವಿ ಸ್ನಾತಕೋತ್ತರ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾಗರಾಜ್ ಮಾತನಾಡಿ, ಡಿವಿಎಸ್ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿದ್ದು, ಸಾವಿರಾರು ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ಡಿವಿಎಸ್ ಶಿಕ್ಷಣ ಸಂಸ್ಥೆ ಮಹತ್ತರ ಪಾತ್ರ ವಹಿಸಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ಪಡೆದ ಹಾಗೂ ವಿಭಾಗವಾರು ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ತರಗತಿ ಮಟ್ಟದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ.ಎಂ. ವೆಂಕಟೇಶ್ ಮಾತನಾಡಿ, 87 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. 158ಕ್ಕೂ ಅಧಿಕ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುತ್ತಿದೆ ಎಂದು ತಿಳಿಸಿದರು.
ದೇಶಿಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್, ಕಾರ್ಯದರ್ಶಿ ಎಸ್.ರಾಜಶೇಖರ್, ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ ಶೆಟ್ಟಿ, ಖಜಾಂಚಿ ಬಿ.ಗೋಪಿನಾಥ್, ಐಕ್ಯೂಎಸಿ ಸಂಚಾಲಕ ಪ್ರೊ. ಕುಮಾರಸ್ವಾಮಿ.ಎನ್., ಮಾರ್ಗದರ್ಶಕ ಎಚ್.ಎನ್. ಸುಧಾಕರ್, ಪ್ರತಿಭಾ ಪುರಸ್ಕಾರ ಸಮಿತಿ ಸಂಚಾಲಕ ಎಸ್.ಡಿ.ಉಮೇಶ್ ಉಪಸ್ಥಿತರಿದ್ದರು.

Related posts

ದಿವ್ಯ ಪ್ರವೀಣ್ ಅವರಿಗೆ `ಕನಕಶ್ರೀ ಚೇತನ ಪತಂಜಲಿ ರತ್ನ’ ರಾಜ್ಯ ಪ್ರಶಸ್ತಿ.

ಸರ್ಕಾರದಿಂದ “ಪೆಹಲಾ ಓಟ್” ಅಭಿಯಾನಕ್ಕೆ ಚಾಲನೆ: ಏನಿದು ಪೆಹಲಾ ಓಟ್..?

ಅಮೆರಿಕದಲ್ಲಿ ಅತಿದೊಡ್ಡ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ನಿರ್ಮಾಣ: ಅನಾವರಣಕ್ಕೆ ಸಜ್ಜು.