ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಇನ್ಮುಂದೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ದಂಡ ಖಚಿತ- ಜಿಲ್ಲಾ ಎಸ್ಪಿ ಮಿಥುನ್ ಕುಮಾರ್ ಎಚ್ಚರಿಕೆ

ಶಿವಮೊಗ್ಗ: ಇನ್ಮುಂದೆ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ದಂಡ ಖಚಿತ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‍ಕುಮಾರ್ ಹೇಳಿದರು.
ಅವರು ಇಂದು ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಸುಧಾರಿತ ಐಟಿಎಂಎಸ್ ತಂತ್ರಾಂಶದ ಮೂಲಕ ಕ್ಯಾಮೆರಾ ಅಳವಡಿಸಲಾಗಿದೆ. ನಗರದಲ್ಲಿರುವ ಎಲ್ಲಾ ಕ್ಯಾಮರಾಗಳ ಮೂಲಕ ಕೇಂದ್ರೀಕೃತವಾಗಿ ಕಂಬೈಂಡ್ ಅಂಡ್ ಕಂಟ್ರೋಲ್ ಸೆಂಟರ್‍ಗೆ ಅಳವಡಿಸಲಾಗಿದ್ದು ಈ ತಂತ್ರಾಂಶದ ಮೂಲಕ ಯಾರೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದರೂ ಕೂಡ ತಕ್ಷಣ ತಿಳಿಯುವುದಲ್ಲದೆ ಅದು ರೆಕಾರ್ಡ್ ಆಗುತ್ತದೆ ಎಂದರು.
ವಾಹನ ಚಾಲಕರು ಸಿಗ್ನಲ್ ಜಂಪ್ ಮಾಡಿದಾಗ ವಾಹನದ ಫೋಟೊ ಮತ್ತು ವೀಡಿಯೋ ತುಣುಕನ್ನು ಎಸ್‍ವಿಡಿ ಕ್ಯಾಮೆರಾಗಳು ಸೆರೆಹಿಡಿಯುತ್ತವೆ. ಇದಲ್ಲದೆ ಹೆಲ್ಮೆಟ್ ಧರಿಸದೆ ಇದ್ದರೆ, ಮೂವರು ಕುಳಿತು ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದರೆ, ಮೊಬೈಲ್‍ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುತ್ತಿದ್ದರೆ, ಒನ್‍ವೇ, ನೋ ಎಂಟ್ರಿ, ನೋ ಪಾರ್ಕಿಂಗ್, ಕಾರಿನ ಚಾಲಕರು ಸೀಟ್ ಬೆಲ್ಟ್ ಹಾಕಿಕೊಳ್ಳುವುದು, ಹೀಗೆ ಯಾವುದೇ ರೀತಿಯ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ತಕ್ಷಣವೇ ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಎಸ್‍ಎಂಎಸ್ ಮೂಲಕ ಮತ್ತು ಮಾಲೀಕರ ವಿಳಾಸಕ್ಕೆ ಅಂಚೆ ಮೂಲಕ ನೋಟೀಸ್ ಕಳಿಸಲಾಗುತ್ತದೆ ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯ ಮಾಡಿದ್ದು, ಮೀಟರ್ ಹಾಕದೆ ಇದ್ದಲ್ಲಿ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಒಬ್ಬ ವ್ಯಕ್ತಿಯ ನೋಟೀಸ್ ವಿವರಗಳು ಇ-ಚಲನ್ ತಂತ್ರಾಂಶಕ್ಕೆ ಸಂಯೋಜಿಸಲಾಗಿದ್ದು, ಆ ವಾಹನಕ್ಕೆ ಸಂಬಂಧಿಸಿದ ಉಲ್ಲಂಘನೆ ಪ್ರಕರಣಗಳ ವಿವರ ದೊರೆಯಲಿದೆ. ಅಂತಹ ಸಂದರ್ಭದಲ್ಲಿ ದಂಡದ ಮೊತ್ತವನ್ನು ಸ್ಥಳದಲ್ಲಿಯೇ ಪಾವತಿಸಿ ನೋಟೀಸನ್ನು ಮುಕ್ತಾಯ ಮಾಡಲು ಅವಕಾಶ ನೀಡಲಾಗಿದೆ. ವಾಹನಗಳ ಮಾಲೀಕರು ತಮಗೆ ಎಸ್‍ಎಂಎಸ್ ಬಂದಾಗ ನೋಟೀಸಿನಲ್ಲಿ ನಮೂದಿಸಿರುವ ದಂಡವನ್ನು ಹತ್ತಿರದ ಸಂಚಾರಿ ಪೊಲೀಸ್ ಠಾಣೆಗೆ ಹೋಗಿ ಅಥವಾ ಕರ್ತವ್ಯನಿರತ ಸಂಚಾರಿ ಪೊಲೀಸ್ ಅಧಿಕಾರಿಗಳ ಬಳಿ ಹೋಗಿ ಕಟ್ಟಬಹುದಾಗಿದೆ ಎಂದರು.
ಈ ನೂತನ ವ್ಯವಸ್ಥೆಯು ಆ.28ರಿಂದ ಕಡ್ಡಾಯವಾಗಿ ಜಾರಿಗೆ ಬರಲಿದೆ. ಆದ್ದರಿಂದ ವಾಹನ ಸವಾರರು ಯಾವುದೇ ಕಾರಣಕ್ಕೂ ನಿಯಮಗಳನ್ನು ಉಲ್ಲಂಘಿಸಬಾರದು. ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ನಗರದ ಪ್ರಮುಖ 13 ಸಿಗ್ನಲ್ ವೃತ್ತಗಳಲ್ಲಿ ಬೇರೆ ಬೇರೆ ರೀತಿಯ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹಾಗಾಗಿ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚಾರಿ ನಿಯಮಗಳನ್ನು ಪಾಲಿಸಿ ದಂಡ ಕಟ್ಟದಂತೆ ಜಾಗರೂಕರಾಗಿರಬೇಕು ಎಂದರು.
ದುರ್ಗಿಗುಡಿ ಸೇರಿದಂತೆ ಎಲ್ಲಾ ಏಕಮುಖ ರಸ್ತೆಯಲ್ಲಿ ಕೂಡ ಕ್ಯಾಮೆರಾ ಅಳವಡಿಸಲಾಗಿದೆ. ಅದರೆ ವಿರುದ್ಧ ದಿಕ್ಕಿನಿಂದ ಬಂದವರಿಗೆ ಕೂಡ ದಂಡ ವಿಧಿಸಲಾಗುವುದು.

ಬಾಕ್ಸ್:
ಹೊಳೆಹೊನ್ನೂರಿನಲ್ಲಿ ಗಾಂಧಿಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳ ಮಾಹಿತಿ ಸಿಕ್ಕಿದೆ. ಅವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ, ಶಿರಾಳಕೊಪ್ಪದಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ ಕೂಡ ಸಂಪೂರ್ಣ ಮಾಹಿತಿ ಲಭ್ಯವಾಗಿದ್ದು, ಆರೋಪಿಯನ್ನು ಶೀಘ್ರದಲ್ಲೆ ಬಂಧಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‍ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಸುರೇಶ್ ಟ್ರಾಫಿಕ್ ಪಿಐ ಸಂತೋಷ್ ಕುಮಾರ್, ಸ್ಮಾರ್ಟ್ ಸಿಟಿ ಅಧಿಕಾರಿ ಕೃಷ್ಣಪ್ಪ ಇದ್ದರು.

Related posts

ಪ್ರತಿಯೊಬ್ಬರಿಂದಲೂ ನಾಯಕತ್ವ ಗುಣದ ಕಲಿಕೆ-ಬಿ.ವಸಂತ ನಾಯಕ

ರಾಜ್ಯದ ಎರಡು ಕಡೆ ಆರ್ & ಡಿ ಕೇಂದ್ರ ತೆರೆಯಲು ಆಪ್ಟೀವ್ ಕಂಪನಿಗೆ ಆಹ್ವಾನ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಬಂದ್ ಮಾಡಿದ ಸರ್ಕಾರ