ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ರಾಜ್ಯವನ್ನು ಸಂಪೂರ್ಣ ಬರಗಾಲವೆಂದು ಘೋಷಿಸಿ: ರೈತ ಮುಖಂಡರಿಂದ ಧರಣಿ.

ಶಿವಮೊಗ್ಗ:ರಾಜ್ಯವನ್ನು ಸಂಪೂರ್ಣ ಬರಗಾಲವೆಂದು ಘೋಷಣೆ ಮಾಡಬೇಕು. ರೈತರ ಸಾಲ ಮನ್ನಾ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಅವರ ನೇತೃತ್ವದಲ್ಲಿ ಇಂದು ರೈತ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬರಗಾಲ ಇಡೀ ರಾಜ್ಯವನ್ನು ಬಾಧಿಸುತ್ತಿದೆ. ರೈತರ ಬೆಳೆ ನಾಶವಾಗಿದೆ. ಎಷ್ಟೋ ಕಡೆ ಬಿತ್ತನೆಯೇ ಆಗಿಲ್ಲ. ರೈತರು ಸಾಲದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಡಳಿತ ಮತ್ತು ವಿರೋಧ ಪಕ್ಷಗಳು ಮುಂಬರುವ ಚುನಾವಣೆಯ ಗುಂಗಿನಲ್ಲಿದ್ದಾರೆ. ರೈತರು ತಮ್ಮ ಉಳಿವಿಗಾಗಿ ಪರಿತಪಿಸುವಂತಾಗಿದೆ. ಕೃಷಿ ಪಂಪ್ಸೆಟ್ಟುಗಳಿಗೂ ವಿದ್ಯುತ್ ಇಲ್ಲವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ರೈತರ ನೆರವಿಗೆ ಬರಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
ಇಡೀ ರಾಜ್ಯವನ್ನು ಬರಗಾಲ ಎಂದು ಘೋಷಿಸಿ ರೈತರಿಗೆ ಬೆಳೆ ಪರಿಹಾರವಾಗಿ ಎಕರೆಗೆ 25 ಸಾವಿರ ನೀಡಬೇಕು. ಕೃಷಿ ಪಂಪ್‍ಸೆಟ್‍ಗಳಿಗೆ ಹಗಲು ಹೊತ್ತಿನಲ್ಲಿ 7 ಗಂಟೆ ವಿದ್ಯುತ್ ನೀಡಬೇಕು. ವಿದ್ಯುಚ್ಛಕ್ತಿಯನ್ನು ಖಾಸಗೀಕರಣ ಮಾಡಬಾರದು. ರೈತರ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು ಮತ್ತು ವಸೂಲಾತಿ ತಕ್ಷಣ ನೀಡಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಪಂಪ್‍ಸೆಟ್‍ಗಳಿ ಆರ್‍ಆರ್ ನಂಬರ್‍ಗಳಿಗೆ ಆಧಾರ್ ಜೋಡಣೆ ಕಡ್ಡಾಯ ಮಾಡಬಾರದು. ಬೆಳೆ ವಿಮೆ ನೀಡಬೇಕು. ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸಬಾರದು. ಬಗರ್‍ಹುಕುಂ ಸಾಗುವಳಿದಾರರಿಗೂ ಬರಗಾಲ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕಾಡುಪ್ರಾಣಿ ಮತ್ತು ಮಂಗಗಳ ಹಾವಳಿಯಿಂದ ರೈತನ ಬೆಳೆ ಹಾಳಾಗುತ್ತಿದ್ದು, ಮಂಗಗಳನ್ನು ಹಿಡಿದು ಹೊರಹಾಕಬೇಕು. ರಬ್ಬರ್ ಬೆಳೆಗೆ ನ್ಯಾಯುತ ಬೆಲೆ ನಿಗದಿ ಮಾಡಬೇಕು. ಶಿಕಾರಿಪುರ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಬೇಕು. ಪುರದಾಳು ಗ್ರಾಪಂನ ಗ್ರಾಮ ಠಾಣಾ ನಿವೇಶನಗಳಿಗೆ ಕಾನೂನು ಬಾಹಿರವಾಗಿ ಹಕ್ಕುಪತ್ರ ನೀಡಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಧರಣಿಯಲ್ಲಿ ರೈತಸಂಘದ ಪದಾಧಿಕಾರಿಗಳಾದ ಕೆ. ರಾಘವೇಂದ್ರ, ಪಿ.ಡಿ. ಮಂಜಪ್ಪ, ಟಿ.ಎಂ. ಚಂದ್ರಪ್ಪ, ಹಿಟ್ಟೂರು ರಾಜು, ಆರ್. ಚಂದ್ರಶೇಖರ್, ಹನುಮಂತಪ್ಪ, ಜ್ಞಾನೇಶ್, ಸಿ. ಚಂದ್ರಪ್ಪ, ಕಸೆಟ್ಟಿ ರುದ್ರೇಶ್ ಸುಗಂಧರಾಜು ಮತ್ತಿತರರು ಇದ್ದರು.

Related posts

ಪತ್ರಕರ್ತರ ಸಂಘ, ಪ್ರೆಸ್‌ ಟ್ರಸ್ಟ್‌ ವತಿಯಿಂದ ಪ್ರತಿಭಾ ಪುಸ್ಕಾರ- ಅ. 26 ರ ಒಳಗೆ ಅರ್ಜಿ ಸಲ್ಲಿಸಲು ಸೂಚನೆ.

ಸರಿಯಾದ ಕೈಗಳಲ್ಲಿ ಸಂವಿಧಾನವಿದ್ದರೆ ಅದರ ಉದ್ದೇಶಗಳು ಸಾರ್ಥಕ- ಸಿಎಂ ಸಿದ್ದರಾಮಯ್ಯ..

ನಗರದೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಅಲಂಕಾರ: ಮಹಿಳೆಯರಿಂದ ಬಾಗಿನ ವಿನಿಮಯ.