ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನಾವು ಸಂವಿಧಾನ ರಕ್ಷಣೆ ಮಾಡಿದರೆ ಮಾತ್ರ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ-ಮಾವಳ್ಳಿ ಶಂಕರ್

ಶಿವಮೊಗ್ಗ,ಡಿ.02: ಸಂವಿಧಾನದ ರಕ್ಷಣೆಯನ್ನು ನಾವೆಲ್ಲರೂ ಮಾಡಿದರೆ ಮಾತ್ರ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂದು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಹೇಳಿದ್ದಾರೆ.
ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಶಿವಮೊಗ್ಗ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನದ ರಕ್ಷಣೆಗಾಗಿ, ಸಂವಿಧಾನದ ಉಳಿವಿಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
2008ರಲ್ಲಿ 30 ಜಿಲ್ಲೆಗಳಲ್ಲಿ ಇದೇ ರೀತಿ ಸಂವಿಧಾನ ಸಂಕಲ್ಪ ಸಮಾವೇಶ ಮಾಡಿದ್ದೆವು ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸರ್ವ ಜನರ ಸಂವಿಧಾನ ಕಾರ್ಯಕ್ರಮವನ್ನು ಮಾಡಿದ್ದೆವು. ತಳಸಮುದಾಯಗಳಲ್ಲಿ, ಶೋಷಿತ ಸಮುದಾಯಗಳಲ್ಲಿ ನಿರಂತರ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ಸಮಾವೇಶ ಮಾಡಲಾಗುತ್ತಿದೆ. ಶಿವಮೊಗ್ಗ ಹಿಂದಿನಿಂದಲೂ ಎಲ್ಲಾ ಹೋರಾಟಗಳ ಕೇಂದ್ರ ಬಿಂದುವಾಗಿದೆ. ಪ್ರೊ.ಕೃಷ್ಣಪ್ಪನವರು ಚಂದ್ರಗುತ್ತಿಯ ಬೆತ್ತಲೆ ಸೇವೆಯಂತಹ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಅಂದು ಹೋರಾಟ ಮಾಡಿದ್ದರು. “ಧರ್ಮೋರಕ್ಷತಿ ರಕ್ಷಿತಃ” ಎಂದ ಆಗೆ ಈಗ ಸಂವಿಧಾನ ರಕ್ಷತಿ ರಕ್ಷಿತಃ ಎನ್ನಬೇಕು. ಒಳ್ಳೆಯತನ ಇದ್ದರೆ ಧರ್ಮ ತನ್ನಿಂದತಾನೇ ರಕ್ಷಣೆಗೆ ಒಳಗಾಗುತ್ತದೆ ಎಂದರು. 5 ಜನ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಸಂವಿಧಾನ ಗಂಡಾಂತರಲ್ಲಿ ಇದೆ ಎಂದಿದ್ದರು, ಆಗ ನಾವ್ಯಾರು ಅದನ್ನು ಗಂಭೀರವಾಗಿ ಗ್ರಹಿಸಲಿಲ್ಲ. ವಿದ್ಯಾವಂತರು ಸರಿಯಾಗಿ ಯೋಚನೆ ಮಾಡಿದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ. ತಳ ಸಮುದಾಯಗಳ ಅರಿವಿನ ಕೊರತೆಯನ್ನು ಸ್ವಾರ್ಥಕ್ಕಾಗಿ ದುರಪಯೋಗಪಡಿಸುತ್ತಾ ಬಂದಿದ್ದಾರೆ. ಈಗಿನ ಕೇಂದ್ರ ಸರ್ಕಾರ ಸ್ವಾರ್ಥಕ್ಕಾಗಿ ಸಂವಿಧಾನದ ರೆಕ್ಕೆಯನ್ನು ಕತ್ತರಿಸುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಕೋಮುಜ್ವಾಲೆ ಹಚ್ಚಿ ಆ ಮೂಲಕ ಸಮಾಜವನ್ನು ಆಶಾಂತಿ ಕಡೆಹೊಯ್ಯುವ ಹುನ್ನಾರ ನಡೆಯುತ್ತಿದೆ. ಸಂವಿಧಾನದ ಆಶಯವನ್ನು ಅನುಷ್ಠಾನಗೊಳಿಸುವ ಜಾಗದಲ್ಲಿ ದೂರ್ತರು ವಂಚಕರು ಸೇರಿದ್ದಾರೆ. ಸಂವಿಧಾನದ ಬದಲಾವಣೆಯ ಮಾತುಗಳನ್ನಾಡುತ್ತಿದ್ದಾರೆ.
ಜಂತರ್‍ಮಂತರ್ ಮುಂಭಾಗ ಸಂವಿಧಾನದ ಪ್ರತಿಗಳನ್ನು ಸುಡುವ ಕಾರ್ಯವು ನಡೆಯಿತು. ಇದು ತಮಾಷೆಯ ಮಾತಲ್ಲ. ಅಮೇರಿಕ ಪ್ರಧಾನಿ ಬರಕ್ ಒಬಮಾ ಭಾರತಕ್ಕೆ ಬಂದಾಗ ಭಾರತ ವಿಶ್ವದಲ್ಲಿ ಇಷ್ಟೊಂದು ಗೌರವ ಪಡೆಯಲು ಭಾರತದ ಸಂವಿಧಾನವೇ ಕಾರಣ ಎಂದಿದ್ದರು. ಅದನ್ನು ರಚಿಸಿದ ಅಂಬೇಡ್ಕರ್‍ಗೆ ನಾವೆಲ್ಲರು ಋಣಿಯಾಗಬೇಕು ಎಂದು ಸಂವಿಧಾನದ ಸಮಿತಿಯಲ್ಲಿ ಓರ್ವರಾದ ಪಿ.ಟಿ. ಕೃಷ್ಣಾಮಚಾರ್‍ರವರು ಕೂಡ ಅಂಬೇಡ್ಕರ್‍ರವರನ್ನು ಹೊಗಳಿದ್ದರು.
ಆದರೆ, ದೇಶದ ಪ್ರಧಾನಿಗೆ ಸಂವಿಧಾನದ ಮೇಲೆ ಗೌರವವಿಲ್ಲ. ಮೇಲ್ವರ್ಗದ ಕೆಲವು ಶಕ್ತಿಗಳು ಅವರನ್ನು ನಿಯಂತ್ರಿಸುವ ಕಾರ್ಯ ಮಾಡುತ್ತಿದೆ. ಆಗಾಗಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ, ಸಹ್ಯಾದ್ರಿ ಕಲಾ ಕಾಲೇಜಿನ ಪತ್ರಿಕೋದ್ಯಮದ ವಿಭಾಗದ ಮುಖ್ಯಸ್ಥರಾದ ಡಾ. ಮಹಾದೇವ ಸ್ವಾಮಿ ಮಾತನಾಡಿ, ಸಂವಿಧಾನದ ಹಕ್ಕುಗಳನ್ನು ಅರಿಯಲೇಬೇಕು. ಸ್ವಾಭಿಮಾನವನ್ನು ಎಚ್ಚರಿಸುವ ಕೆಲಸವಾಗಬೇಕಾಗಿದೆ. ಕೆಲವೊಂದು ಸಂಪರ್ಕ ಸಾಧನಗಳು ದುರಾಭಿಮಾನವೇ ಸ್ವಾಭಿಮಾನ ಎಂದು ಬಿಂಬಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ನಮ್ಮೆಲ್ಲರ ಹೃದಯದಲ್ಲಿ ಸಂವಿಧಾನ ಇರಬೇಕು. ಮನುಷ್ಯತ್ವ ಉಳಿಯಬೇಕು. ಸಂವಿಧಾನ ಧರ್ಮ ಉಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಟಿ.ಹೆಚ್. ಹಾಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಎಂ. ರಾಮಚಂದ್ರಪ್ಪ, ಹೆಚ್. ಆರ್. ಬಸವರಾಜಪ್ಪ, ಎಣ್ಣೇಗೆರೆ ವಂಕಟರಾಮಯ್ಯ, ಶಿವಕುಮಾರ್ ಅಸ್ತಿ, ಎಂ.ಡಿ. ಆನಂದ್, ಎಂ. ಮಂಜುನಾಥ್, ವಿಶ್ವಾನಾಥ್ ಹಾರೋಗುಳಿಗೆ, ಜಗ್ಗು ಮತ್ತಿತರರು ಇದ್ದರು.

Related posts

ಕಾರ್ಮಿಕ’ರಿಗೆ ಗಣೇಶ ಹಬ್ಬದ ಭರ್ಜರಿ ಗಿಫ್ಟ್: ಕನಿಷ್ಠ ವೇತನ 31,000ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧಾರ

ಜಲ ವಿವಾದ: ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ: ಸರ್ವರ ಸಹಕಾರ ಕೋರಿದ ಸಿಎಂ ಸಿದ್ದರಾಮಯ್ಯ

ದೇಶದ ಹೆಸರು ಭಾರತ ಎನ್ನುವುದು ಸರಿಯಾದ ನಿರ್ಧಾರ- ಶಾಸಕ ಅರಗ ಜ್ಞಾನೇಂದ್ರ.