ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆ ಸ್ವಾಗತಿಸಿದ ಕಾಂಗ್ರೆಸ್ ಮುಖಂಡರು.

ಶಿವಮೊಗ್ಗ: ಕಳೆದ 32 ವರ್ಷಗಳಿಂದ ನಡೆಯುತ್ತಿರುವ ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಯು ಆ.9ರಂದು ತಮಿಳು ನಾಡಿನ ಪೆರಂಬತ್ತೂರಿನಿಂದ ಆರಂಭಗೊಂಡಿದ್ದು, ಈ ಯಾತ್ರೆ ಇಂದು ಶಿವಮೊಗ್ಗಕ್ಕೆ ಆಗಮಿಸಿದಾಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ಜ್ಯೋತಿಯನ್ನು ಸ್ವಾಗತಿಸಿದರು.
ನಂತರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಯಾತ್ರಾ ಸಮಿತಿಯ ಉಪಾಧ್ಯಕ್ಷ ಎ.ಗೋಮತೀಶನ್ ಮಾತನಾಡಿ, ಭಯೋತ್ಪಾದನೆ ವಿರುದ್ಧ ಸಂದೇಶವನ್ನು ಹರಡಲು ಮತ್ತು ರಾಷ್ಟ್ರವನ್ನು ಉಳಿಸಲು ಹಾಗೂ ದೇಶದ ಏಕತೆ ಬಲಪಡಿಸಲು ರಾಜೀವ್ ಗಾಂಧಿಯವರ ಕೊಡುಗೆ ಹರಡಲು ಈ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದರು.


ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಯು ಸಹೋದರತ್ವ, ಏಕತೆ, ಮತ್ತು ಭಯೋತ್ಪಾದನೆ ವಿರುದ್ದ ದೃಢವಾದ ಕ್ರಮದ ಸಂದೇಶ ಸಾರಲಿದೆ. ಜನರಲ್ಲಿ ಜಾಗೃತಿ ಮೂಡಿಸುತ್ತದೆ. ಹಾಗೂ ನಮ್ಮ ದೇಶದಲ್ಲಿ ಭಯೋತ್ಪಾದಕರ ಅಪಾಯಕಾರಿ ಚಟುವಟಿಕೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಪ್ರಪಂಚದಲ್ಲಿ ಶಾಂತಿ ನೆಲಸಬೇಕು ಎಂಬ ಕಾರಣಕ್ಕೆ ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯದ ಜೊತೆಗೆ ಪರಸ್ಪರ ಮಿಲಿಟರಿ ಸಹಕಾರ ನೀಡಿ ಶ್ರೀಲಂಕಾದಲ್ಲಿ ತಲೆದೋರಿದ್ದ ಆಂತರಿಕ ದಂಗೆಯನ್ನು ಭಾರತದ ಶಾಂತಿ ಪಾಲನಾ ಪಡೆಯುವ ಮೂಲಕ ಸದೆಬಡಿದು ಅಲ್ಲಿ ಶಾಂತಿ ನೆಲೆಸುವಂತೆ ಮಾಡಿದ ಕಾರಣಕ್ಕಾಗಿ 1991ರ ಮೇ 21ರಂದು ಮಾನವ ಬಾಂಬ್‍ಗೆ ಸಿಲುಕಿ ರಾಜೀವ್ ಗಾಂಧಿ ಪ್ರಾಣತ್ಯಾಗ ಮಾಡಬೇಕಾಯಿತು. ಎಂದರು.
ತಾಯಿ ಇಂದಿರಾಗಾಂಧಿಯವರ ಮರಣದ ನಂತರ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ರಾಜೀವ್‍ಗಾಂಧಿಯವರು ದೇಶವನ್ನು ವಿಜ್ಞಾನ, ತಂತ್ರಜ್ಞಾನದ ಮೂಲಕ ಮುನ್ನಡೆಸುವ ಕನಸು ಕಂಡಿದ್ದರು. ಅದರ ಭಾಗವಾಗಿಯೇ ಹೊಸ ಸ್ಯಾಟಲೈಟ್ ಹಾರಿಬಿಟ್ಟ ಪರಿಣಾಮ ಇಂದು ಪ್ರತಿ ಮನೆಯಲ್ಲೂ ಟಿ.ವಿ., ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಕಾಣಲು ಸಾಧ್ಯವಾಗಿದೆ. ವಿಜ್ಞಾನದ ಆವಿಷ್ಕಾರ ಒಂದಕ್ಕೆ ಬಲಿಯಾಗಿದ್ದು ವಿಪರ್ಯಾಸ ಎಂದರು.
1991ರಲ್ಲಿ ರಾಜೀವ್‍ಗಾಂಧಿಯವರು ಮರಣ ಹೊಂದಿದ ಪೆರಂಬತ್ತೂರು ಇಂದು ಬೃಹತ್ ಯಾತ್ರಾ ಸ್ಥಳವಾಗಿದೆ. ಈ ಯಾತ್ರಾ ಸ್ಥಳದಿಂದಲೇ ಪ್ರತಿ ವರ್ಷ ರಾಜೀವ್ ಜ್ಯೋತಿ ಸದ್ಭಾವನಾಯಾತ್ರೆ ಆರಂಭಗೊಳ್ಳುತ್ತಿದೆ. ಈ ಯಾತ್ರೆಯು ಕರ್ನಾಟಕ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣದ ಮೂಲಕ ಸಾಗಿ ಆ.20ರಂದು ನವದೆಹಲಿಯ ವೀರಭೂಮಿ ತಲುಪಿ ಅಗಲಿದ ನಾಯಕ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 79ನೇ ಜನ್ಮ ದಿನದಂದು ನಮನ ಸಲ್ಲಿಸಲಿದ್ದು, ಜ್ಯೋತಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ಸ್ವೀಕರಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸದ್ಭಾವನಾ ಯಾತ್ರಾ ಸಮಿತಿ ಅಧ್ಯಕ್ಷ ಆರ್. ದೊರೈ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್, ಮುಖಂಡರಾದ ಬಲ್ಕಿಷ್‍ಬಾನು, ಮಂಜುನಾಥಬಾಬು, ಕಲೀಂ ಪಾಶಾ, ಸಿ.ಎಸ್. ಚಂದ್ರಭೂಪಾಲ, ಚಂದನ್, ಎಸ್.ಕೆ. ಮರಿಯಪ್ಪ, ಡಿ.ಸಿ. ನಿರಂಜನ್, ಚಿನ್ನಪ್ಪ, ಆಂತೋಣಿ ವಿಲ್ಸನ್, ಇನ್ನಿತರರು ಉಪಸ್ಥಿತರಿದ್ದರು.

Related posts

ಎಲ್ಲಾ ಕನ್ನಡಿಗರೂ ಮನೆಮನೆಯಲ್ಲಿ ಕಡ್ಡಾಯವಾಗಿ ಕನ್ನಡ ಮಾತನಾಡಲೇಬೇಕು-ಎಸ್.ಎಸ್. ಜ್ಯೋತಿಪ್ರಕಾಶ್

ರಸಗೊಬ್ಬರಕ್ಕೆ ಸಬ್ಸಿಡಿ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿ- ರಾಜ್ಯ ಸರ್ಕಾರಕ್ಕೆ ಆಗ್ರಹ.

ಮೇರಾ ಮಿಟ್ಟಿ ಮೇರಾ ದೇಶ್’ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್.ಎನ್, ಚನ್ನಬಸಪ್ಪ