ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಸೆ.16ರಂದು ಕಾಗೋಡು ತಿಮ್ಮಪ್ಪನವರ ಅಭಿನಂದನಾ ಸಮರ್ಪಣಾ ಸಮಾರಂಭ.

ಶಿವಮೊಗ್ಗ: ನಾಡು ಕಂಡ ಕಣ್ಮಣಿ ಶತಮಾನದ ಹೋರಾಟಗಾರ ಕಾಗೋಡು ತಿಮ್ಮಪ್ಪನವರ ಅಭಿನಂದನಾ ಸಮರ್ಪಣಾ ಸಮಾರಂಭ ಸೆ.16ರಂದು ಬೆಳಿಗ್ಗೆ 10-30ಕ್ಕೆ ಕುವೆಂಪು ರಂಗಮಂದಿರದಲ್ಲಿ ಪಕ್ಷಾತೀತವಾಗಿ ಜಾತ್ಯತೀತವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಕಾಗೋಡು ತಿಮ್ಮಪ್ಪ ಅಭಿನಂದನಾ ಸಮಿತಿ ತಿಳಿಸಿದೆ.
ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಕಾಗೋಡು ತಿಮ್ಮಪ್ಪ ಅವರು ಈ ನಾಡು ಕಂಡ ಅಪರೂಪದ ವ್ಯಕ್ತಿ. ಶೋಷಿತರ ಪರವಾಗಿ ಹೋರಾಡಿದವರು. ಗೇಣಿದಾರರ ಪರವಾಗಿ ಬಗರ್‍ಹುಕುಂ ರೈತರ ಪರವಾಗಿ, ಮುಳುಗಡೆ ಸಂತ್ರಸ್ತರ ಪರವಾಗಿ ಹೋರಾಟ ಮಾಡಿದ ಅವರು ಒಂದು ಸಾಮಾಜಿಕ ಕ್ರಾಂತಿಯನ್ನೇ ಮಾಡಿದವರು. ದೇವರಾಜ ಅರಸುರವರ ಪ್ರತಿರೂಪವೇ ಆಗಿದ್ದ ಅವರಿಗೆ ದೇವರಾಜ ಅರಸು ಪ್ರಶಸ್ತಿ ಬಂದಿದ್ದು ಪ್ರಶಸ್ತಿಗೆ ಗೌರವ ತಂದುಕೊಟ್ಟಂತಾಗಿದೆ ಎಂದರು.
ಇಂತಹ ಮಹಾನ್ ವ್ಯಕ್ತಿಗೆ ಅಭಿನಂದನೆ ಸಮರ್ಪಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ಅಲ್ಲದೆ ಕಾಗೋಡು ತಿಮ್ಮಪ್ಪನವರನ್ನು ಎಲ್ಲಾ ಪಕ್ಷದ ಮುಖಂಡರು ಎಲ್ಲಾ ಜಾತಿಯ ಬಾಂಧವರು ಅತ್ಯಂತ ಪ್ರೀತಿಯಿಂದ ಮೆಚ್ಚಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿನಂದನಾ ಕಾರ್ಯಕ್ರಮವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುವುದು ಎಂದರು.
ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಅಭಿನಂದನಾ ಭಾಷಣ ಮಾಡುವರು. ಮಾಜಿ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹಿರಿಯ ಪತ್ರಕರ್ತ ದಿನೇಶ್ ಅಮೀನ್‍ಮಟ್ಟು ಮುಖ್ಯ ಭಾಷಣ ಮಾಡುವರು. ಸಮಾರಂಭದಲ್ಲಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಡಾ. ಜಿ.ಡಿ. ನಾರಾಯಣಪ್ಪ, ಸಂಸದ ಬಿ.ವೈ. ರಾಘವೇಂದ್ರ, ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಜನಪ್ರತಿನಿಧಿಗಳು ವಿವಿಧ ಪಕ್ಷಗಳ ಜಿಲ್ಲಾಧ್ಯಕ್ಷರು, ಮುಖಂಡರು, ಮೇಯರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸಮಿತಿಯ ಉಪಾಧ್ಯಕ್ಷ ವಿ. ರಾಜು ಮಾತನಾಡಿ, ಕಾಗೋಡು ತಿಮ್ಮಪ್ಪ ವಿವಿಧ ಇಲಾಖೆಯ ಸಚಿವರಾಗಿ ಅನುಭವ ಹೊಂದಿದ್ದಾರೆ. ಅದರಲ್ಲೂ ವಿಧಾನಸಭಾ ಅಧ್ಯಕ್ಷರಾಗಿ ನಾಡು ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಇತಿಹಾಸ ಕಂಡ ಅಪರೂಪದ ಸ್ಪೀಕರ್ ಎಂದು ಖ್ಯಾತಿ ಗಳಿಸಿದ್ದಾರೆ. ರೈತರ ಪರ, ಬಡವರ ಪರ, ಹೋರಾಟ ಮಾಡುತ್ತಾ ಬಂದವರು. ಇತಿಹಾಸ ಪುರುಷರಾಗಿ ದಾಖಲಾಗಿದ್ದಾರೆ ಎಂದರು.
ಅಭಿನಂದನಾ ಸಮಿತಿಯ ಉಪಾಧ್ಯಕ್ಷ ತೀ.ನ. ಶ್ರೀನಿವಾಸ್ ಮಾತನಾಡಿ, ಭೂಮಾಲೀಕರ ವಿರುದ್ಧ ಹೋರಾಟ ಮಾಡಿದ ತಿಮ್ಮಪ್ಪನವರು ಭೂ ಸುಧಾರಣಾ ಕಾಯ್ದೆಯ ಯಶಸ್ಸಿಗೆ ಕಾರಣರಾದವರು. ಜೆ.ಹೆಚ್. ಪಟೇಲ್, ಎಸ್. ಬಂಗಾರಪ್ಪ. ದೇವರಾಜ ಅರಸ್ ಜಾರ್ಜ್ ಫೆರ್ನಾಂಡಿಸ್, ಶಾಂತವೇರಿ ಗೋಪಾಲಗೌಡ ಹೀಗೆ ಹಲವು ಮುಖಂಡರ ಜೊತೆ ಕೆಲಸ ಮಾಡಿದವರು. ಸಾಮಾಜಿಕ ಕ್ರಾಂತಿಯ ಹರಿಕಾರರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪಿ. ಪುಟ್ಟಯ್ಯ, ಪ್ರೊ. ಹೆಚ್. ರಾಚಪ್ಪ, ಪಿ.ಆರ್. ಗಿರಿಯಪ್ಪ, ಆರ್.ಟಿ. ನಾಗರಾಜ್, ಎಸ್.ಬಿ. ಅಶೋಕ್‍ಕುಮಾರ್, ಉಮೇಶ್, ಲೋಕೇಶ್, ಸುಮಿತ್ರ ಸೇರಿದಂತೆ ಹಲವರಿದ್ದರು.

Related posts

ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ.

ಹೊಸ ಪಡಿತರ ಚೀಟಿಗೆ ಬಂದಿವೆ 2.95 ಲಕ್ಷ ಅರ್ಜಿಗಳು. ಶೀಘ್ರ ವಿತರಣೆ..

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಆಯ್ಕೆ:ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಂಭ್ರಮ.