ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಕಾವೇರಿ ನದಿ ನೀರು ವಿವಾದ: ಕೇಂದ್ರ ಜಲಶಕ್ತಿ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ.

ಬೆಂಗಳೂರು :  ಕಾವೇರಿ ನೀರಿನ ಮೇಲೆ ಅವಲಂಬಿತರಾಗಿರುವ  ರೈತರು , ಕುಡಿಯುವ  ನೀರಿಗಾಗಿ ಅವಲಂಬಿತರಾಗಿರುವ ಜಾನುವಾರು ಹಾಗೂ ಮಾನವರ ಹಿತಾಸಕ್ತಿಯನ್ನು  ಸಂಕಷ್ಟಕ್ಕೆ ದೂಡಿ  ಕಾವೇರಿ ನೀರು ನಿಯಂತ್ರಣ ಸಮಿತಿಯ ತೀರ್ಪನ್ನು ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್  ಶೇಖಾವತ್ ಅವರಿಗೆ ಪತ್ರ ಬರೆದಿದ್ದಾರೆ.

ಕಾವೇರಿ ನೀರು ನಿಯಂತ್ರಣ ಸಮಿತಿ ನಿರ್ಧರಿಸಿರುವಂತೆ 15 ದಿನಗಳ ಕಾಲ ಕೆ.ಆರ್.ಎಸ್.ಹಾಗೂ ಕಬಿನಿಯಿಂದ 5000 ಕ್ಯೂಸೆಕ್ಸ್ ನೀರನ್ನು ಬಿಳಿಗುಂಡ್ಲುವಿನಿಂದ ಹರಿಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ  ಸಿಎಂ ಸಿದ್ಧರಾಮಯ್ಯ, ಕರ್ನಾಟಕದ ಮನವಿಯನ್ನು ಪರಿಗಣಿಸಿ ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿದ್ದಾರಲ್ಲದೆ, ಬರಪೀಡಿತವಾಗಿರುವ ರಾಜ್ಯದ ಜನತೆ ಹಾಗೂ ಜಾನುವಾರುಗಳ ಹಿತಾಸಕ್ತಿಯನ್ನು ಕಾಪಾಡಲು ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಸಮಿತಿಯ ಹಿಂದಿನ ನಿರ್ದೇಶನವನ್ನು  ಪಾಲಿಸಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಬಹುತೇಕ ತಾಲ್ಲೂಕುಗಳು ಮುಂಗಾರು ವೈಫಲ್ಯದಿಂದ  ತೀವ್ರ ಬರಕ್ಕೆ ತುತ್ತಾಗಿವೆ ಎಂದು ವಿವರಿಸಿದ್ದಾರೆ.

ಜೂನ್ ಮಾಹೆಯಿಂದ ಸೆಪ್ಟೆಂಬರ್ ಮಧ್ಯದವರೆಗೂ 92 ದಿನಗಳ ಕಾಲ 100 ಟಿಎಂಸಿ ನೀರನ್ನು ತಮಿಳುನಾಡು ಬಳಸಿಕೊಂಡಿದ್ದು, ಇದು ಹಿಂದೆ 1987-88, 2002-03, 2012-13, 2016-17 ಹಾಗೂ 2017-18 ರ ಬರಪರಿಸ್ಥಿತಿಯಲ್ಲಿ ಬಳಕೆಯಾದ ನೀರಿಗಿಂತಲೂ ಹೆಚ್ಚಾಗಿದೆ. ಕರ್ನಾಟಕದ ಜಲಾಶಯಗಳಲ್ಲಿ ಸಂಕಷ್ಟದ ಸ್ಥಿತಿಯಿದ್ದರೂ ತಮಿಳುನಾಡು ಭತ್ತವನ್ನು ವ್ಯಾಪಕವಾಗಿ ಬೆಳೆಯುತ್ತಿದೆ ಎಂದು ಪತ್ರದಲ್ಲಿ ಸಿಎಂ ಸಿದ್ಧರಾಮಯ್ಯ ವಿವರಿಸಿದ್ದಾರೆ.

ಸೆಪ್ಟೆಂಬರ್ 12 ಹಾಗೂ 24 ವರೆಗೆ ಐಎಂಡಿ ಹವಾಮಾನ ಮುನ್ಸೂಚನೆಯಂತೆ ಮಳೆಯಾಗುವ ಲಕ್ಷಣಗಳಿಲ್ಲ.  ಮೆಟ್ಟೂರು ಜಲಾಶಯದಲ್ಲಿ ಡಿ: 12.09.2023 ರಂದು 24.233 ಟಿಎಂಸಿ  ಸಂಗ್ರಹವಿದ್ದು (live storage)   ಪ್ರಸ್ತುತ ಬಿಡುಗಡೆಯಾಗಿರುವ ನೀರನ್ನು ಪರಿಗಣಿಸಿದರೆ, ತಮಿಳುನಾಡಿನ ಅವಶ್ಯಕತೆ ಯನ್ನು ಪೂರೈಸಲು ಸಾಕಾಗುವಷ್ಟು ನೀರು ಲಭ್ಯವಿದೆ. .

ಕರ್ನಾಟಕದ ಬೆಳೆಗಳ ರಕ್ಷಣೆಗೆ 70 ಟಿಎಂಸಿ, ಕುಡಿಯುವ ನೀರಿಗೆ 33 ಹಾಗೂ ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಅಗತ್ಯವಿದೆ. ನಮ್ಮ ಸಂಗ್ರಹ 53 ಟಿಎಂಸಿ ಮಾತ್ರವಿದ್ದು, ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಈ ಸಂಗ್ರಹ ಸಾಕಾಗುವುದಿಲ್ಲ ಎಂದು  ಸಿಎಂ ಸಿದ್ಧರಾಮಯ್ಯ ಪತ್ರದಲ್ಲಿ ವಿವರಿಸಿದ್ದಾರೆ.

Related posts

ಬೆಳ್ಳಂಬೆಳಿಗ್ಗೆ ಉದ್ಯಮಿ ಅಧಿಕಾರಿಗಳಿಗೆ ಐಟಿ ಶಾಕ್:  10ಕ್ಕೂ ಹೆಚ್ಚು ಕಡೆ  ದಾಳಿ, ದಾಖಲೆ ಪರಿಶೀಲನೆ.

ಕನ್ನಡ ರಾಜ್ಯೋತ್ಸವ: ಕನ್ನಡದ 5 ಗೀತೆಗಳ ಗಾಯನ ಕಡ್ಡಾಯ.

ಆದಿತ್ಯ L-1​​​​ ನೌಕೆ ಉಡಾವಣೆ ಹಿನ್ನೆಲೆ: ಇಸ್ರೋಗೆ ಶುಭಕೋರಿದ ಡಿಸಿಎಂ ಡಿಕೆ ಶಿವಕುಮಾರ್.