ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಗಳ ತನಿಖೆಯಾಗಲಿ-ನಾಗರಿಕ ಹಿತರಕ್ಷಣಾ ಸಮಿತಿ ಆಗ್ರಹ

ಶಿವಮೊಗ್ಗ: ಕಳೆದ ಐದು ವರ್ಷಗಳ ಅವಧಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಗಳ ತನಿಖೆಯಾಗಬೇಕು ಯಾವುದೇ ಕಾರಣಕ್ಕೂ ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿಯನ್ನು ತನ್ನ ಸುಪರ್ದಿಗೆ ಅವಸರದಲ್ಲಿ ತೆಗೆದುಕೊಳ್ಳಬಾರದು ಎಂದು ನಾಗರಿಕ ಹಿತರಕ್ಷಣಾ ಸಮಿತಿ ಬಲವಾಗಿ ಆಗ್ರಹಿಸಿದೆ.
ಮೀಡಿಯಾ ಹೌಸ್‍ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ವಿ. ವಸಂತಕುಮಾರ್ ಕಳೆದ ಐದು ವರ್ಷಗಳಲ್ಲಿ ಸ್ಮಾರ್ಟ್ ಸಿಟಿಗಾಗಿ ಸಾವಿರ ಕೋಟಿ ಹಣ ¨ಬಿಡುಗಡೆ ಮಾಡಲಾಗಿದೆ. ಆದರೆ ಯಾವ ಕಾಮಗಾರಿಗಳೂ ಕೂಡ ಇದುವರೆಗೂ ಪೂರ್ಣವಾಗಿಲ್ಲ. ಮತ್ತು ಕಳಪೆಯಾಗಿವೆ. ಆದರೆ ಪಾಲಿಕೆ ಅದರ ನಿರ್ವಹಣೆಯನ್ನು ತಾನೇ ವಹಿಸಿಕೊಳ್ಳುವಂತೆ ಹೇಳುತ್ತಿದೆ. ನಿಯಮದ ಪ್ರಕಾರ ಸ್ಮಾರ್ಟ್ ಸಿಟಿಯೇ ತನ್ನ ಗುತ್ತಿಗೆದಾರರ ಮೂಲಕ ಮುಂದಿನ ಐದು ವರ್ಷಗಳ ವರೆಗೆ ನಿರ್ವಹಣೆ ಮಾಡಬೇಕಾಗುತ್ತದೆ. ಆದರೆ ಈಗ ಈ ನಿರ್ವಹಣೆಯ ನಿಯಮವನ್ನೇ ತೆಗೆದುಹಾಕಲಾಗಿದೆ. ಅವಸರದಲ್ಲಿ ಪಾಲಿಕೆ ತನ್ನ ವಶಕ್ಕೆ ತೆಗೆದುಕೊಂಡು ಜನರ ತೆರಿಗೆ ಹಣದಲ್ಲಿ ನಿರ್ವಹಣೆ ಮಾಡಲು ಹೊರಟಿದೆ ಎಂದು ದೂರಿದರು.
ವಿವಿಧ ಪ್ಯಾಕೇಜ್ ಅಡಿ ಕಾಮಗಾರಿಗಳು ನಡೆದಿವೆ. ರಸ್ತೆ, ಚರಂಡಿ, ಫುಟ್ಪಾತ್, ಪಾರ್ಕ್, ಬಸ್ ಶೆಲ್ಟರ್, ಕನ್ಸರ್ವೆನ್ಸಿ, ಸರ್ಕಲ್ ಆಭಿವೃದ್ಧಿ ಶೌಚಲಾಯಲ ಅಲ್ಲದೆ, ಮೆಸ್ಕಾಂ ಜೊತೆಗೂಡಿ ಯುಜಿ ಕೇಬಲ್ ಅಳವಡಿಕೆ ಕಾಮಗಾರಿಗಳನ್ನು ಕೂಡ ನಡೆಸಲಾಗಿದೆ. ಈ ಎಲ್ಲಾ ಕಾಮಗಾರಿಗಳು ಸಂಪೂರ್ಣ ಲೋಪದಿಂದ ಕೂಡಿವೆ. ಹಿಂದಿನ ಶಾಸಕರಿಗೆ ಹಲವು ಬಾರಿಈ ಬಗ್ಗೆ ದೂರು ನೀಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಸುಮಾರು 60 ದೂರುಗಳನ್ನು ನಾವೇ ಅಧಿಕೃತವಾಗಿ ನೀಡಿದ್ದೇವೆ. ಇಷ್ಟಾದರೂ ಲೋಪದೋಷ ಸರಿಪಡಿಸದೆ ಪಾಲಿಕೆ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿರುವುದು ಖಂಡನಿಯ ಎಂದರು.
ಈ ಹಿಂದೆಯೇ ನಾವು ಸ್ಮಾಟ್ ಸಿಟಿ ಎಂಡಿ ಚಿದಾನಂದ ವಠಾರೆ ವಿರುದ್ಧ ಪ್ರತಿಭಟನೆ ಮಾಡಿದ್ದೆವು.ವಠಾರೆ ಹಠಾವೋ ಸ್ಮಾರ್ಟ್ ಸಿಟಿ ಬಜಾವೋ ಎಂದು ಹೋರಾಟ ನಡೆಸಿದ್ದೆವು. ಆದರೆ ಅವರು ಈಗ ವರ್ಗಾವಣೆಗೊಂಡು ಪಲಾಯನಗೈದಿದ್ದಾರೆ. ಅವರ ಅವಧಿಯಲ್ಲಿ ನೂರಾರು ಕೋಟಿ ರೂ. ಅವ್ಯವಹಾರವಾಗಿದೆ. ಈ ಎಲ್ಲಾ ಅವ್ಯವಹಾರಗಳ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಈಎಲ್ಲಾ ಹಿನ್ನೆಲೆಯಲ್ಲಿ ಒಕ್ಕೂಟವು ಕಾಮಗಾರಿಗಳ ಲೋಪದೋಷ ಆಲಿಸಲು ಮತ್ತು ದೂರು ಸ್ವೀಕರಿಸಲು ಸಾರ್ವಜನಿಕ ಸಭೆ ಕರೆಯಲು ಒತ್ತಾಯಿಸಿದ್ದೆವು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗು ಅಂಕಿ ಅಂಶ ದಾಖಲೆ ಸಮೇತ ಭ್ರಷ್ಟಾಚಾರದ ಬಗ್ಗೆ ತಿಳಿಸಿದ್ದೇವೆ. ತನಿಖೆ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.
ಈಗ ತಾನೆ ಬಂದ ಸುದ್ದಿಯಂತೆ ಸೆ.12ರಂದು ಮಧ್ಯಾಹ್ನ 2.30ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ಕಾಮಗಾರಿಗಳ ಲೋಪದೋಷ ಆಲಿಸಲು ಮತ್ತು ದೂರು ಸ್ವೀಕರಿಸಲು ಸಾರ್ವಜನಿಕ ಸಭೆ ಕರೆಯಲಾಗಿದೆ. ಸಾರ್ವಜನಿಕರು ತಮ್ಮ ತಮ್ಮ ಬಡಾವಣೆಗಳಲ್ಲಿ ಕಾಮಗಾರಿಗಳಲ್ಲಿ ಕಂಡುಬಂದಿರುವ ಲೋಪದೋಷಗಳನ್ನು ಬರವಣಿಗೆ ಅಥವಾ ಫೋಟೋಗಳ ಮೂಲಕ ಸಭೆಗೆ ತರುವಂತೆ ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಸತೀಶ್‍ಕುಮಾರ್ ಶೆಟ್ಟಿ, ಎಸ್.ಬಿ. ಅಶೋಕ್‍ಕುಮಾರ್, ಚನ್ನವೀರಪ್ಪ ಗಾಮನಕಟ್ಟೆ, ರಂಗಪ್ಪ, ಜನಾರ್ಧನ ಪೈ, ವಿನೋದ ಪೈ,. ಸೀತಾರಾಮ್, ಕೆ.ಜೆ. ಮಿತ್ರ, ಎಸ್. ರಾಜು, ಮಲ್ಲಪ್ಪ ಕೆ.ಎಂ., ಸೇರಿದಂತೆ ಹಲವರಿದ್ದರು.

Related posts

ಮಾಡುವ ಕೆಲಸದಲ್ಲಿ ದೈವತ್ವವನ್ನು ಕಂಡ ಸಂಸ್ಕೃತಿ-ಜ್ಞಾನರಶ್ಮಿ ಮುಖ್ಯಸ್ಥ ನಂದಕುಮಾರ್ ಅಭಿಮತ

ಸತ್ಯದ ಪ್ರತೀಕವಾಗಿ ರಂಗಭೂಮಿ ಉಳಿಯ ಬೇಕು: ಟಿ.ಎಸ್.ನಾಗಾಭರಣ ಅಭಿಮತ

ಸರ್ಕಾರಿ ಶಾಲೆಗಳಲ್ಲಿ LKG, UKG ಆರಂಭಕ್ಕೆ ಕ್ರಮ- ಶಿಕ್ಷಣ ಸಚಿವ ಮಧು ಬಂಗಾರಪ್ಪ.