ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಡಿಸೆಂಬರ್ 4ರಿಂದ ಬೆಳಗಾವಿಯ ಚಳಿಗಾಲ ಅಧಿವೇಶನ.

ಬೆಂಗಳೂರು : ಬೆಳಗಾವಿಯ ಚಳಿಗಾಲ ಅಧಿವೇಶನ (Session) ಇದೇ ಡಿಸೆಂಬರ್ 4ರಿಂದ ಆರಂಭವಾಗಲಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಬಸವರಾಜ ಹೊರಟ್ಟಿ, ಬೆಳಗಾವಿ ಅಧಿವೇಶನದಲ್ಲಿ ಬರೀ ಪ್ರತಿಭಟನೆ ಆಗುತ್ತೆ ಅಂತ ಜನಪ್ರತಿನಿಧಿಗಳು ಅಂದುಕೊಳ್ಳುತ್ತಾರೆ. ಬೆಳಗಾವಿ ಅಧಿವೇಶನ ಅಂದರೆ ಸ್ಟ್ರೈಕ್ ಅಧಿವೇಶನ ಎಂದು ತಿಳಿದಿದ್ದಾರೆ. ಹೀಗಾಗಿ ಈ ರೀತಿ ಆಗಬಾರದು ಎಂದು ನಾಲ್ಕು ಜನ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಮಧು ಬಂಗಾರಪ್ಪ, ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ ಅವರಿಗೆ ಪತ್ರ ಬರೆದಿದ್ದೇನೆ. ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನೆ ಆಗಬಾರದು. ರೈತರ ಜೊತೆಗೆ ಸಚಿವರು ಸಭೆ ನಡೆಸಲು ಸೂಚನೆ ನೀಡಿದ್ದೇನೆ. ಈಗಾಗಲೇ ಸುವರ್ಣಸೌಧದ ಮುಂದೆ ಟೆಂಟ್ ಹಾಕಲು ತಯಾರಾಗಿದ್ದಾರೆ ಎಂದು ಹೇಳಿದರು.

 

2022ರಲ್ಲಿ ಅಧಿವೇಶನದ ಸಮಯದಲ್ಲಿ 102ಕ್ಕೂ ಹೆಚ್ಚು ಸಂಘಟನೆ ಪ್ರತಿಭಟನೆ ಮಾಡಿದ್ದವು. ಈ ಪ್ರತಿಭಟನೆಯಿಂದ 80 ಸಾವಿರ ಜನರು ಪಾಲ್ಗೊಂಡಿದ್ದರು. ಪ್ರತಿಭಟನೆ ಮಾಡಬೇಡಿ ಅಂತ ಹೇಳಲ್ಲ. ಆದರೆ ಪ್ರತಿಭಟನೆಗೆ ಸರ್ಕಾರವೇ ಸಹಕರಿಸುವ ರೀತಿ ಟೆಂಟ್ ಹಾಕಿ ಪ್ರತಿಭಟನೆಗೆ ವ್ಯವಸ್ಥೆ ಮಾಡುವುದು ಸರಿಯಲ್ಲ. ಇದಕ್ಕೆಲ್ಲ ದುಂದು ವೆಚ್ಚ ಆಗುತ್ತೆ, ಹೀಗಾಗಿ ಇದೆಲ್ಲ ಆಗಬಾರದು ಎಂದು ಎಚ್ಚರಿಕೆ ನೀಡಿದರು.

ಜಪ್ರತಿನಿಧಿಗಳು ಅಧಿವೇಶನದಲ್ಲಿ ಸರಿಯಾದ ರೀತಿಯಲ್ಲಿ ನಡೆಯಬೇಕು. ಇದು ಉತ್ತರ ಕರ್ನಾಟಕದ ಜನರ ಅಭಿಪ್ರಾಯ ಸಹ ಹೌದು. ರೈತರ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ಸಭೆ ಕರೆಯಿರಿ. ರೈತರ ಬೇಡಿಕೆ ಏನಿದೆ ಅಂತ ಸಭೆಯಲ್ಲಿ ಚರ್ಚೆ ಮಾಡಿ ಬಗೆಹರಿಸಬೇಕು. ಪ್ರತಿಭಟನೆ ಮಾಡಿದಾಗ ರೈತರಿಗೆ ಕೇವಲ ಶೇ 10 ರಷ್ಟು ಮಾತ್ರ ಸಮಸ್ಯೆ ಬಗೆಹರಿದಿದೆ. ಪ್ರತಿಭಟನೆ ಮಾಡುವಂತಹ ವಾತಾವರಣ ಸರ್ಕಾರ ನಿರ್ಮಾಣ ಮಾಡಬಾರದು. ಜಲ್ವಂತ ಸಮಸ್ಯೆಗಳನ್ನು ಬಗೆಹರಿಸಲು ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು.

 

ಈ ನಡುವೆ ಮುಂಬರುವ ವಿಧಾನಮಂಡಳ ಚಳಿಗಾಲ ಅಧಿವೇಶನಕ್ಕೆ ಸಂದರ್ಭದಲ್ಲಿ ವಸತಿ, ಊಟೋಪಹಾರ, ಸಾರಿಗೆ ಸೇರಿದಂತೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ಪ್ರತಿಯೊಂದು ಸಿದ್ಧತೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ(ನ.20) ನಡೆದ ಅಧಿವೇಶನ ಪೂರ್ವಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಧಿವೇಶನ ವೇಳೆ ಸಚಿವರು, ಗಣ್ಯರು, ಉನ್ನತಮಟ್ಟದ ಅಧಿಕಾರಿಗಳು ನಗರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಇದಲ್ಲದೇ ಸುವರ್ಣ ವಿಧಾನಸೌಧ ಬಳಿ ವಿವಿಧ ಸಂಘ-ಸಂಸ್ಥೆಗಳು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿವೆ. ಆದ್ದರಿಂದ ಪ್ರತಿವರ್ಷದಂತೆ ಪ್ರತಿಭಟನಾ ಸ್ಥಳಗಳಲ್ಲಿ ಕುಡಿಯುವ ನೀರು ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ತಿಳಿಸಿದರು.

ಅಂತರ್ಜಾಲ ಸಂಪರ್ಕ, ವಿದ್ಯುತ್ ಸಂಪರ್ಕ, ಶಾಮಿಯಾನಾ, ಬ್ಯಾರಿಕೇಡ್, ಪಾರ್ಕಿಂಗ್ ಮತ್ತಿತರ ವ್ಯವಸ್ಥೆಗಳು ಸಮರ್ಪಕವಾಗಿರಬೇಕು. ಸಂಬಂಧಿಸಿದ ಸಮಿತಿಯ ಅಧಿಕಾರಿಗಳು ಮುಂಚಿತವಾಗಿಯೇ ಪ್ರತಿಯೊಂದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅನಧಿಕೃತ ಜಾಹೀರಾತು ಫಲಕ ತೆರವುಗೊಳಿಸಲು ಸೂಚನೆ: ಬೆಳಗಾವಿ ನಗರದ ಪ್ರಮುಖ ವೃತ್ತಗಳು ಮತ್ತು ರಸ್ತೆಗಳಲ್ಲಿರುವ ವಿದ್ಯುತ್ ಕಂಬಗಳು, ಮರ-ಗಿಡಗಳು, ಗೋಡೆಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ಹಾಕಲಾಗಿರುತ್ತದೆ. ಅಂತಹ ಅನಧಿಕೃತ ಜಾಹೀರಾತು ಫಲಕಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

 

Related posts

ಹೈಕೋರ್ಟ್ ನಿಂದ ರಾಜ್ಯ ಸರ್ಕಾರಕ್ಕೆ 5 ಲಕ್ಷ ರೂ. ದಂಡ.

ಮನಕ್ಕೆ ಬಾರೆದೆ ಪಕ್ಷದಲ್ಲಿ‌ ಏನು ನಡೆದಿಲ್ಲ: ತೆವಲಿಗೋಸ್ಕರ ಮಾತನಾಡಬಾರದು – ಸಿಎಂ ಇಬ್ರಾಹಿಂ ವಿರುದ್ದ ಜೆಡಿಎಸ್ ಶಾಸಕ ಗುಡುಗು.

ಭಾವನಾತ್ಮಕ ಹೃದಯದಿಂದ ಭಾವನೆಗಳ ಅಭಿವ್ಯಕ್ತಿ : ಡಾ.ಧನಂಜಯ ಸರ್ಜಿ