ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಅಜ್ಞಾನ, ಮೌಢ್ಯ, ಷೋಷಣೆ, ಜಾತೀಯತೆ, ಲಿಂಗತಾರತಮ್ಯ ದೂರ ಮಾಡಿ ಸಮಸಮಾಜ ನಿರ್ಮಿಸಿದವರು ಬಸವಣ್ಣ-

ಶಿವಮೊಗ್ಗ : ಡಾ. ಕಾಶೀನಾಥ್ ಗಾಣೇಕರ್ ಸಭಾಗೃಹ, ಮುಂಬಯಿನ ಠಾಣೆಯಲ್ಲಿ ಸಂಗಮ ಸಮಾವೇಶ ಕನ್ನಡ ಕಲಾ ಕೇಂದ್ರದವರು ಆಯೋಜಿಸಿದ್ದ “ತುಮಾರೆ ಸಿವಾ ಔರ್ ಕೋಯಿ ನಹೀ” ವಚನ ಸಂಸ್ಕøತಿ ಅಭಿಯಾನದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಸಮಾಜದಲ್ಲಿರುವ ಅಜ್ಞಾನ, ಮೌಢ್ಯ, ಷೋಷಣೆ, ಜಾತೀಯತೆ, ಲಿಂಗತಾರತಮ್ಯ ಇವುಗಳನ್ನು ದೂರ ಮಾಡಿ ಸಮಸಮಾಜವನ್ನು ಬಸವಣ್ಣನವರು ನಿರ್ಮಾಣ ಮಾಡಿದರು. ಸ್ಥಾವರವನ್ನು ನಿರಾಕರಿಸಿ ಜಂಗಮವನ್ನು ಅಪ್ಪಿಕೊಂಡರು. ಕಾಯಕವೇ ಕೈಲಾಸ ಅಂತ ಕಾಯಕಕ್ಕೆ ವಿಶೇಷ ಮನ್ನಣೆಯನ್ನು ತಂದುಕೊಟ್ಟವರು. ಬಿಜ್ಜಳನ ರಾಜ್ಯದಲ್ಲಿ ಪ್ರಧಾನಿಯಾಗಿ ಒಬ್ಬ ರಾಜಕಾರಣಿ ಹೇಗೆ ಇರಬೇಕು ಎಂಬುದನ್ನು ತೋರಿಸಿಕೊಟ್ಟವರು. ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್ ‘ಅನುಭವ ಮಂಟಪ’ ಎನ್ನುವುದನ್ನು ಜಗತ್ತಿಗೆ ಸಾರಿದರು.
ಭಾರತದ ಪ್ರಧಾನಿ ಮೋದಿಜಿಯವರು ಪಾರ್ಲಿಮೆಂಟಿನ ಅಸ್ಥಿತ್ವವನ್ನು ಭದ್ರಗೊಳಿಸಿದ ಮಹಾನ್ ಚೇತನ ಬಸವಣ್ಣನವರು ಅಂತ ಪದೇ ಪದೇ ಹೇಳ್ತಾರೆ. ಬಸವಣ್ಣನವರು 12ನೆಯ ಶತಮಾನದಲ್ಲಿ ಮಾಡಿದ ಕಾರ್ಯಗಳನ್ನು ಇವತ್ತು ನಮ್ಮ ಜನರು ಮುಂದುವರಿಸಿಲಿಕ್ಕೆ ಸಾಧ್ಯ ಆಗ್ತಾ ಇಲ್ಲ. ಇವತ್ತಿನ ಪಾರ್ಲಿಮೆಂಟಿಗೂ ಅವತ್ತಿನ ಅನುಭವ ಮಂಟಪಕ್ಕೂ ಹೋಲಿಕೆ ಮಾಡ್ಲಿಕ್ಕೆ ಸಾಧ್ಯವಿಲ್ಲ. ಕಾರಣ 12ನೆಯ ಶತಮಾನದಲ್ಲಿ ಪ್ರಾಮಾಣಿಕ ಜನರಿದ್ದರು. ಸತ್ಯಸಂಧರಾಗಿದ್ದರು. ಕಾಯಕಶೀಲರಾಗಿದ್ದರು. ಎಲ್ಲ ರೀತಿಯ ಲಂಚವಂಚನೆಯಿಂದ ದೂರ ಇದ್ದವರಾಗಿದ್ದರು. ಇವತ್ತು ಇವೆಲ್ಲವೂ ನಮ್ಮ ಸಾಮಾಜಿಕ, ರಾಜಕೀಯ ನೇತಾರದಲ್ಲಿ ಮೈಗೂಡಿಸಿಕೊಳ್ಳದಿರುವುದು ವಿಷಾದನೀಯ. ಹಾಗಾಗಿ ಸಮಾಜ ಭೌತಿಕವಾಗಿ ಬೆಳೀತಾ ಇದೆ. ನೈತಿಕವಾಗಿ ಕುಸಿಯುತ್ತಿದೆ. ಬೇಕಾಗಿರುವಂಥದ್ದು ಕೇವಲ ಭೌತಿಕ ಬೆಳವಣಿಕೆಯಲ್ಲ. ನೈತಿಕ, ಧಾರ್ಮಿಕ, ಆಧ್ಯಾತ್ಮಿಕ ಬೆಳವಣಿಗೆ.  ಇದೆಲ್ಲದಕ್ಕಿಂತ ಹೆಚ್ಚಾಗಿ ಆತ್ಮೋನ್ನತಿ. ಲೋಕಕಲ್ಯಾಣ.
ಬಸವಣ್ಣನವರ ಸಾಧನೆಗಳು ವಿಶ್ವಮಾನ್ಯವಾದವುಗಳು. ಹಾಗಾಗಿ ಬಸವಣ್ಣನವರನ್ನು ವಿಶ್ವಗುರು ಅಂತ ಸಮಾಜ ಗೌರವಿಸುತ್ತಿದೆ. ಅಂತಹ ವಿಶ್ವಗುರುವಿನ 44 ವಚನಗಳನ್ನು ಹಿಂದಿಯಲ್ಲಿ ಅನುವಾದಿಸಿ ರಾಗಸಂಯೋಜನೆ ಮಾಡಿಸಿ ಇವತ್ತು ನಮ್ಮ ಕಲಾವಿದರು ನಿಮ್ಮ ಮುಂದೆ ಅಭಿನಯಿಸಲಿದ್ದಾರೆ. 2019ರಲ್ಲಿ 100 ಜನ ಸಾಣೇಹಳ್ಳಿಯ ನಮ್ಮ ಶಾಲೆಯ ಮಕ್ಕಳು “ನೀನಲ್ಲದೆ ಮತ್ತಾರೂ ಇಲ್ಲವಯ್ಯ’ ಎನ್ನುವ ಶೀರ್ಷಿಕೆಯಡಿಯಲ್ಲಿ ಇದೇ ವಚನಗಳಿಗೆ ಹೆಜ್ಜೆ ಹಾಕಿದ್ದರು. ಆ ಸಂದರ್ಭದಲ್ಲಿ ಇಲ್ಲಿರುವ ರಾಜಪ್ಪ ಮತ್ತು ರುದ್ರಪ್ಪನವರು ನಮಗೆ ಹೇಳಿದ್ದು; ಸ್ವಾಮೀಜಿ ಇದು ಕನ್ನಡದಲ್ಲಿ ಮಾತ್ರ ನೃತ್ಯ ಮಾಡಿಸಿದರೆ ಕನ್ನಡಿಗರಿಗೆ ಮಾತ್ರ ಮುಟ್ಟುತ್ತೆ. ಬದಲಾಗಿ ಹಿಂದಿಯಲ್ಲಿ ಮಾಡಿಸಿದರೆ ಎಲ್ಲರಿಗೂ ಮುಟ್ಟಲಿಕ್ಕೆ ಸಾಧ್ಯ ಇದೆ. ಯಾಕೆ ತಾವು ಹಿಂದಿಯಲ್ಲಿ ಮಾಡಿಸಬಾರದು ಅಂತ ನಮಗೆ ಹೇಳಿದರು. ಆಗ ನಾವು ತಮಾಷೆಯಿಂದ ಹೇಳಿದ್ದು; ಅದಕ್ಕೆ ತಗಲುವ ವೆಚ್ಚವನ್ನು ನೀವು ಕೊಡೋದಾದರೆ ಖಂಡಿತಾ ಮಾಡಿಸುತ್ತೇವೆ ಅಂತ ಅವರಿಗೆ ಹೇಳಿದ್ವಿ. ಈ ಅಭಿಯಾನಕ್ಕೆ ಅಂದಾಜು 60 ಲಕ್ಷ ರೂಪಾಯಿ ಖರ್ಚಾಗುತ್ತೆ. ರಾಜಪ್ಪ ಮತ್ತು ರುದ್ರಪ್ಪನವರು ಅಷ್ಟೊಂದು ಹಣ ಇಬ್ಬರೇ ಕೊಡ್ತಾರೆ ಅಂತ ನಾವು ಭಾವಿಸಿಕೊಂಡಿಲ್ಲ. ಬರೀ ಅವರಿಬ್ಬರೇ ಕೊಡಬೇಕು ಎಂದೇನಿಲ್ಲ. ಬೇಕಾದಷ್ಟು ಜನ ಆರ್ಥಿಕ ಸ್ಥಿತಿವಂತರಿದ್ದೀರಿ. ಕಾಯಕವೇ ಕೈಲಾಸ ಅಂತ್ಹೇಳಿ ಕರ್ನಾಟಕವನ್ನು ಬಿಟ್ಟು ಮುಂಬೈಗೆ ಬಂದು ಸಾಕಷ್ಟು ದುಡಿಮೆ ಮಾಡಿದ್ದೀರಿ. ನಿಮ್ಮ ದುಡಿಮೆಯ ಸ್ವಲ್ಪ ಭಾಗವನ್ನಾದರೂ ಇಂತಹ ಸತ್ಕಾರ್ಯಗಳಿಗೆ ನೀಡುವಂಥ ಹೃದಯ ಶ್ರೀಮಂತಿಕೆಯನ್ನು ಜನ ಬೆಳೆಸಿಕೊಂಡರೆ ಇನ್ನು ಹೆಚ್ಚು ಹೆಚ್ಚು ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮಾಡಲಿಕ್ಕೆ ಸಾಧ್ಯ ಎಂದರು.
ಈ ಕಾರ್ಯಕ್ರಮದಲ್ಲಿ ಹೋಟೇಲ್ ಮಾಲಿಕ ಸಂಘದ ಅಧ್ಯಕ್ಷ ಪುಳ್ಯ ಉಮೇಶ್ ಶೆಟ್ಟಿ, ವರ್ತಕ ನಗರ ಠಾಣೆಯ ಅಧ್ಯಕ್ಷರಾದ ಜಯಂತ್‍ಶೆಟ್ಟಿ, ಮಂಗೇಶ್ ಅವ್ಲಿ ಮಾತನಾಡಿದರು. ರುದ್ರಪ್ಪ ಸ್ವಾಗತಿಸಿದರೆ ಮೋಹನ್ ರೈ ನಿರೂಪಿಸಿದರು. ಡಾ. ಲಲಿತಾ ಸ್ವಾಗತ ಗೀತೆಯನ್ನು ಹಾಡಿದರು. ಉಮಾಪತಿ ಕೆ ಆರ್, ಶ್ರೀನಿವಾಸ ಜಿ ಕಪ್ಪಣ್ಣ ಉಪಸ್ಥಿತರಿದ್ದರು. ಪ್ರೇಕ್ಷಕರು ಭಾಗವಹಿಸಿ ವಚನ ನೃತ್ಯ ಪ್ರದರ್ಶನ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ನೆರೆದಿದ್ದ ಪ್ರೇಕ್ಷಕರೆಲ್ಲ ಎದ್ದು ನಿಂತು ಅಭಿನಯಿಸಿದ ಕಲಾವಿದರಿಗೆಲ್ಲ ಚಪ್ಪಾಳೆ ಮೂಲಕ ಶ್ಲಾಘಿಸಿದರು.

Related posts

1ನೇ ವಾರ್ಡ್‍ನಲ್ಲಿ ಸ್ವಚ್ಛತೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆ: ಕೂಡಲೇ ಕ್ರಮಕ್ಕೆ ಆಗ್ರಹ.

ಕಾವ್ಯ ಕೇಡು ಸೇಡುಗಳಿಂದ ಮುಕ್ತವಾದುದು-ಕವಯಿತ್ರಿ ಸವಿತಾ ನಾಗಭೂಷಣ

ಡಿಕೆಶಿ ಮತ್ತೆ ಜೈಲಿಗೆ ಹೋಗ್ತಾರೆಂಬ ಹೆಚ್.ಡಿಕೆ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವ ಜಮೀರ್ ಅಹ್ಮದ್ ಖಾನ್