ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಪ್ರತಿಯೊಬ್ಬರಲ್ಲಿಯೂ ಸ್ವಚ್ಛತಾ ಜಾಗೃತಿ ಅವಶ್ಯಕ-ಸಿ.ರಾಜು

ಶಿವಮೊಗ್ಗ: ಉತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ ಎಲ್ಲರ ಪಾತ್ರವು ಮುಖ್ಯವಾಗಿದ್ದು, ಪ್ರತಿಯೊಬ್ಬರೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರಾಮುಖ್ಯತೆ ನೀಡಬೇಕು ಎಂದು ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಅಧ್ಯಕ್ಷ ಸಿ.ರಾಜು ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಪ್ರಯುಕ್ತ ಶಿವಮೊಗ್ಗದ ಶೆಟ್ಟಿಕೆರೆಯಲ್ಲಿ ಆಯೋಜಿಸಿದ್ದ ಸ್ವಚ್ಛತಾ ಜಾಗೃತಿ ಹಾಗೂ ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಚ್ಛತೆ ಬಗ್ಗೆ ಹೆಚ್ಚಿನ ಅರಿವು ಹೊಂದಿದ್ದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಲು ಸಾಧ್ಯ. ಇದರಿಂದ ಸುಂದರ ಪರಿಸರ ನಿರ್ಮಿಸಬಹುದಾಗಿದೆ ಎಂದು ತಿಳಿಸಿದರು.
ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಎಲ್ಲೆಂದರಲ್ಲಿ ಕಸ ಎಸೆಯದೇ ಕಸ ಸಂಗ್ರಹ ಡಬ್ಬಿಗಳಲ್ಲೇ ಹಾಕಬೇಕು. ಇದರಿಂದ ಶಾಲಾ ಪರಿಸರ ಚೆನ್ನಾಗಿರುವ ಜತೆಯಲ್ಲಿ ವಿದ್ಯಾರ್ಥಿಗಳು ಆಟೋಟ ಚಟುವಟಿಕೆ ನಡೆಸಲು ಸುಂದರ ವಾತಾವರಣ ಇರುತ್ತದೆ ಎಂದರು.
ಶಾಲಾ ಮಕ್ಕಳಿಗೆ ನಮ್ಮ ಸಂಸ್ಥೆಯಿಂದ ಕ್ರೀಡಾ ಸಮವಸ್ತ್ರ ವಿತರಿಸುತ್ತಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಜತೆಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಶಾಲಾ ಮಟ್ಟದ, ತಾಲೂಕು ಮಟ್ಟದ, ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾಗಬೇಕು. ಕ್ರೀಡಾ ಕ್ಷೇತ್ರದಲ್ಲೂ ಯಶಸ್ವಿಯಾಗಲು ಹಂತ ಹಂತವಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.
ವಿಶೇಷ ಕಾರ್ಯಕ್ರಮದಲ್ಲಿ ಮಕ್ಕಳು ವೇಷಭೂಷಣ ಧರಿಸಿ ಪಾಲ್ಗೊಂಡಿದ್ದರು. ಮಕ್ಕಳು ಭಾಷಣ ಮಾಡುವ ಜತೆಯಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡಿದರು. ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು.
ಇದೇ ಕಾರ್ಯಕ್ರಮದಲ್ಲಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಕಸ ಸಂಗ್ರಹ ಡಬ್ಬಿಗಳನ್ನು ನೀಡಲಾಯಿತು. ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಸಂಸ್ಥೆಯ ಮಂಜುಳಾ ರಾಜು, ಎಸ್‌ಡಿಎಂಸಿ ಅಧ್ಯಕ್ಷರಾದ ವೆಂಕಟೇಶ್, ದೇವೆಂದ್ರಪ್ಪ, ಸುರೇಶ್, ಪಾರ್ವತಮ್ಮ ರಾಜಪ್ಪ, ಮುಖ್ಯ ಶಿಕ್ಷಕಿ ಶೈಲಜಾ, ಪಾಲಾಕ್ಷಪ್ಪ ಹಾಗೂ ಚನ್ನಬಸಪ್ಪ ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Related posts

ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗೆ ಟಿಕೆಟ್ ನೀಡಿದ್ರೆ ಪತ್ರಿಕೆಯ ಮೂಲಕ ಕಾರಣ ನೀಡಬೇಕು- ಕೇಂದ್ರ ಚುನಾವಣಾ ಆಯೋಗ

ಶಿವಮೊಗ್ಗ ದಸರಾ: ಅ.15 ಹಾಗೂ ಅ.17ರಿಂದ 21ರ ವರೆಗೆ ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮ.

ಹಬ್ಬ, ಮದುವೆ, ರಾಜಕೀಯ ಸಾರ್ವಜನಿಕ ಸಮಾರಂಭಗಳಲ್ಲಿ ಪಟಾಕಿ ಬಳಕೆ ನಿಷೇಧ.