ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ʻಗಾಂಧೀಜಿʼ ಹೆಸರಿನ ಪುರಸ್ಕಾರ ಕನ್ನಡ ಸಾಹಿತ್ಯ ಪರಿಷತ್ತಿನ ಮಂದಿರದಲ್ಲಿ ನೀಡುತ್ತಿರುವುದು  ಅರ್ಥಗರ್ಭಿತ – ನಾಡೋಜ ಡಾ. ಮಹೇಶ ಜೋಶಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಇರುವ ಈ ಪವಿತ್ರ ಜಾಗದಲ್ಲಿ ಸ್ವಾತಂತ್ರ ಹೋರಾಟದ ಕಲಿಗಳು ಸೇರುತ್ತಿದ್ದ ಪಾವನ ಜಾಗವಾಗಿತ್ತು. ಈ ಜಾಗಕ್ಕೆ ʻಗಾಂಧೀ ಮೈದಾನʼ ಎಂದು ಕರೆಯಲಾಗುತ್ತಿತ್ತು. ಸ್ವತಃ ಗಾಂಧೀಜಿ ಅವರು ಇದೇ ಜಾಗದಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿದ್ದರು. ಆಗ ಗಾಂಧೀ ಮೈದಾನವೆಂದು ಗುರುತಿಸಿಕೊಂಡ ಈ ಜಾಗದಲ್ಲಿಯೇ ಇಂದು ಕನ್ನಡ ಸಾಹಿತ್ಯ ಪರಿಷತ್ತು ಇದ್ದು, ಇಲ್ಲಿ ಗಾಂಧೀಜಿ ಅವರ ಹೆಸರಿನ ಪುರಸ್ಕಾರವನ್ನು ಪರಿಷತ್ತಿನ ಮಂದಿರದಲ್ಲಿ  ನೀಡುವುದರಲ್ಲಿ ಅರ್ಥವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಅಭಿಪ್ರಾಯಪಟ್ಟರು.

 ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಳ್ಳಲಾದ  ಶ್ರೀ ಎ. ಆರ್.‌ ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧೀ ಪುರಸ್ಕಾರ ಪುದವಟ್ಟು ದತ್ತಿ, ರಾಜ್ಯಸಭಾ ಭೂಷಣ ಶ್ರೀ ಕರ್ಪೂರ ಶ್ರೀನಿವಾಸರಾವ್‌ ದತ್ತಿ ಹಾಗೂ ಕರ್ಪೂರ ರಾಮರಾವ್‌ ಜನ್ಮ ಶತಾಬ್ದಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಹಿಂದೆ ಶಿಕ್ಷಣ ಮೌಲ್ಯಾಧಾರಿತವಾಗಿತ್ತು, ಆದರೆ ಈಗ ಶಿಕ್ಷಣ ವ್ಯಾಪಾರೀಕರಣವಾಗಿದೆ. ಬಾಳಿಗೆ ದೀಪವಾಗಬೇಕಿದ್ದ ಶಿಕ್ಷಣ ಇಂದು ಕೆಲವರ ತೋರ್ಪಡೆಯ  ದೀಪದ ಕಂಭದಂತಾಗುತ್ತಿದೆ. ಶಾಲೆಗಳಲ್ಲಿ ಕಲಿಯುವುದಕ್ಕಿಂತ ಕಳೆದುಕೊಳ್ಳುವುದೇ ಜಾಸ್ತಿಯಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ಕಳವಳ ವ್ಯಕ್ತ ಪಡಿಸಿದರು.

 ಇಂದು ಶಿಕ್ಷಕರ ದಿನಾಚರಣೆಯಾಗರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ದೇಶ ಕಂಡ ಶ್ರೇಷ್ಟ ತತ್ವಜ್ಞಾನಿ ಸರ್ವಪಲ್ಲಿ ರಾಧಾಕೃಷ್ಣ ಅವರ ಸ್ಮರಿಸಿಕೊಂಡ ನಾಡೋಜ ಡಾ. ಮಹೇಶ ಜೋಶಿ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸರ್ವಪಲ್ಲಿ ಅವರು ತತ್ವಶಾಸ್ತ್ರದ ಉಪನ್ಯಾಸಕರಾಗಿದ್ದ ಕಾಲದಲ್ಲಿ ಅರ್ಥಪೂರ್ಣ ವಿದ್ಯಾರ್ಥಿಗಳನ್ನು ರೂಪುಗೊಸಿದ್ದರು ಎಂದರು.

ಇಂದು ನಾಡಿನ ಹಿರಿಯ ಕಾದಂಬರಿಕಾರ ಶ್ರೀ ಕೃಷ್ಣಮೂರ್ತಿ ಪುರಾಣಿಕ, ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ ಎಂದು ಗುರುತಿಸಿಕೊಂಡ ಹಾಗೂ ತಾತಯ್ಯ ಎಂದು ಕರೆಸಿಕೊಂಡ ಶ್ರೀ ಮೈಸೂರು ವೆಂಕಟಕೃಷ್ಣರಾಯರ, ನಾಡಿನ ಖ್ಯಾತ ಚಿತ್ರಗಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿಗೆ ತಾಯಿ ಭುವನೇಶ್ವರಿಮಾತೆಯ ಚಿತ್ರವನ್ನು ರಚಿಸಿಕೊಟ್ಟ ಶ್ರೀ ಬಿ.ಕೆ.ಎಸ್‌ ವರ್ಮ ಆವರ ಜನ್ಮದಿನವೂ ಇಂದೇ ಆಗಿರುವುದರಿಂದ ಎಲ್ಲ ಗಣ್ಯರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ನೆನಪು ಮಾಡಿ ಕೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಸದಸ್ಯರಾದ ಶ್ರೀ ಕರ್ಪೂರ ಶ್ರೀನಿವಾಸರಾಯರನ್ನು ವಿಶೇಷವಾಗಿ ನೆನಪು ಮಾಡಿಕೊಂಡ ಅವರು  ಆ ಕಾಲದಲ್ಲಿಯೇ ೫೦೦ ರೂ. ಕೊಟ್ಟು ಪರಿಷತ್ತಿನ ಮೊದಲ ಸದಸ್ಯರಾಗಿದ್ದರು. ೧೯೨೦ರಿಂದ ೧೯೩೨ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಅವರು ನೀಡಿದ ಕೊಡುಗೆ ಅಪಾರ.೧೩ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿದ ಹೆಗ್ಗಳಿಕೆ ಅವರದ್ದು ಎಂದು ನಾಡೋಜ ಡಾ. ಮಹೇಶ ಜೋಶಿಯವರು ನೆನಪು ಮಾಡಿಕೊಂಡರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಜಯಕರ ಎಂ.ಎಸ್.‌ ಅವರು ಮಾತನಾಡಿ ಭಾರತ ಇಂದು ಎಲ್ಲಾ ಕ್ಷೇತ್ರದಲ್ಲಿ ಮುಂದುವರೆದಿದೆ. ಕಾರಣ ನಮ್ಮವರ ಎದೆಯಲ್ಲಿ ಗುರುಗಳ ಸ್ಥಾನದಲ್ಲಿ ಇದ್ದವರು ಸಮರ್ಥವಾಗಿ ಅಕ್ಷರವನ್ನು ಬಿತ್ತಿರುವುದು ಎನ್ನುವದರಲ್ಲಿ ಎರಡು ಮಾತಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ದೇಶದಲ್ಲಿ ಭಾಷೆ, ಸಾಹಿತ್ಯ, ಕಲೆ ಆಧಾರದಲ್ಲಿ ಇರುವ ಏಕೈಕ ಮಾದರಿ ಸಂಸ್ಥೆ. ನಾಡಿನ ನೆಲ-ಜಲ, ಸಾಹಿತ್ಯ, ಕನ್ನಡ-ಕನ್ನಡಿಗ-ಕರ್ನಾಟಕದ ವಿಷಯಬಂದಾಗ ಸಮರ್ಥವಾಗಿ ಹೊರಾಟಮಾಡಿ ಕನ್ನಡದ ಹೆಮ್ಮೆಯನ್ನು ಪ್ರಪಂಚಕ್ಕೆ ಸಾರುತ್ತಿರುವ ಸಂಸ್ಥೆ ಇದು ಎಂದು ಹೆಮ್ಮೆ ವ್ಯಕ್ತಪಡಿಸಿದರು.

ದತ್ತಿ ದಾನಿಗಳ ಪರವಾಗಿ  ಹಿರಿಯ ಗಾಂಧಿವಾದಿ  ಶ್ರೀ ಎ.ಆರ್‌. ನಾರಾಯಣಘಟ್ಟ ಅವರು ಮಾತನಾಡಿ ಎಲ್ಲರ ಕಲ್ಯಾಣದಲ್ಲಿ ನನ್ನ ಕಲ್ಯಾಣ ಇದೆ ಎಂದು ಹೇಳಿದ ಗಾಂಧೀಜಿ ಅವರ ಆಶಯದಂತೆ ನಮ್ಮ ದೇಶ ನಡೆಯಬೇಕಿದೆ. ʻಸತ್ಯಾಗ್ರಹʼ ಮತ್ತು ʻಸರ್ವೋದಯʼ ಎನ್ನುವ ಎರಡು ಮಾಹಾ ಮಂತ್ರವನ್ನು ನೀಡಿದ ಗಾಂಧೀ ಅವರ ತತ್ವಾರ್ದಶದಲ್ಲಿ ದೇಶ ಮುನ್ನಡೆಯಬೇಕು ಎಂದು ಕರೆ ನೀಡಿದರು.

೨೦೨೦ನೆಯ, ೨೦೨೧ನೆಯ, ೨೦೨೨ನೆಯ ಹಾಗೂ ೨೦೨೩ನೆಯ ಸಾಲಿನ ʻ ಡಾ ಶ್ರೀ ಎ. ಆರ್.‌ ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧೀ ಪುರಸ್ಕಾರ ಪುದವಟ್ಟು ದತ್ತಿ ಪ್ರಶಸ್ತಿʼಯನ್ನು ಕ್ರಮವಾಗಿ ಬೆಂಗಳೂರಿನ ಶಿಕ್ಷಕರಾದ ಶ್ರೀ ಡಿ.ಕೆ.ಕೋದಂಡರಾಮ, ಧಾರವಾಡ ಜಿಲ್ಲೆಯ ಗರಗದ ಧಾರವಾಡ ತಾಲೂಕು ಗರಗ ಕ್ಷೇತ್ರೀಯ ಸೇವಾ ಸಂಘ, ತುಮಕೂರಿನ ಶ್ರೀ ಎಲ್‌. ನರಸಿಂಹಯ್ಯ ತೊಂಡೋಟಿ ಹಾಗೂ ಹುಬ್ಬಳ್ಳಿಯ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಅವರಿಗೆ ಪ್ರದಾನ ಮಾಡಲಾಯಿತು. ೨೦೧೯ನೆಯ,೨೦೨೦ನೇಯ, ೨೦೨೧ನೆಯ, ೨೦೨೨ನೆಯ ಹಾಗೂ ೨೦೨೩ನೆಯ ಸಾಲಿನ ರಾಜ್ಯಸಭಾ ಭೂಷಣ ಶ್ರೀ ಕರ್ಪೂರ ಶ್ರೀನಿವಾಸರಾವ್‌ ದತ್ತಿ ಪ್ರಶಸ್ತಿಯನ್ನು ಕ್ರಮವಾಗಿ ಶ್ರೀಮತಿ ಸುಮಾ, ಶ್ರೀಮತಿ ಸಹನಾ ಡಿ. ಶ್ರೀ ಗಣೇಶ್‌ಮೂರ್ತಿ ಜಿ.ಎಸ್‌ ಹಾಗೂ ಶ್ರೀ ರಾಜೇಶ ಎ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ೨೦೧೯ನೆಯ, ೨೦೨೦ನೆಯ ಹಾಗೂ ೨೦೨೧ನೆಯ ಸಾಲಿನ ಕರ್ಪೂರ ರಾಮರಾವ್‌ ಜನ್ಮ ಶತಾಬ್ದಿ ದತ್ತಿ ಪ್ರಶಸ್ತಿಯನ್ನು ಕ್ರಮವಾಗಿ  ಶ್ರೀಮತಿ ಸ್ಪೂರ್ತಿ ಗೋಪಾಲ ಕೊಂಡ್ಲಿ, ಶ್ರೀಮತಿ ಶ್ವೇತಾ ಆರ್‌. ಮತ್ತು ಶ್ರೀಮತಿ ಅರ್ಪಿತಾ ಕೆ. ಎಸ್‌. ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಧಾರವಾಡ ಜಿಲ್ಲೆಯ ಗರಗದ ಧಾರವಾಡ ತಾಲೂಕು ಗರಗ ಕ್ಷೇತ್ರೀಯ ಸೇವಾ ಸಂಘ ಬಸವ ಪ್ರಭು ಹೊಸಕೆರೆ ಅವರು  ಖಾದಿಯನ್ನು ಕೇವಲ ಬಟ್ಟೆಯಾಗಿ ನೋಡಬೇಡಿ, ಬದಲಿಗೆ ಅದೊಂದು ಜೀವನ ಪದ್ಧತಿ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಖಾದಿಗೆ ಕೊಡುವ ಪ್ರತಿ ರೂಪಾಯಿಯನ್ನೂ ಸೂಕ್ತ ವಿನಿಯೋಗವಾಗುತ್ತದೆ. ನಮ್ಮದೇಶದಲ್ಲಿ ಖಾದಿ ತುಂಡು ಬಟ್ಟೆಯಲ್ಲ ಬದಲಿಗೆ ಇದು ಜೀವನ. ಹಳ್ಳಿಗಳು ನಮ್ಮ ಜೊತೆಗೆ ಇರಬೇಕು ಎಂದಾಗಲೇ ಅಲ್ಲಿನ ಕಲೆ ಸಂಸ್ಕೃತಿ ಇರುವುದಕ್ಕೆ ಸಾಧ್ಯ ಎಂದರು.

ಪ್ರಶಸ್ತಿ ಪುರಸ್ಕತರಾದ ಗಣೇಶ್‌ಮೂರ್ತಿ ಜಿ.ಎಸ್‌ ಹಾಗೂ ಶ್ರೀಮತಿ ಶ್ವೇತಾ ಆರ್‌.  ಸಾಂದರ್ಭಿಕವಾಗಿ ಮಾತನಾಡಿ ದತ್ತಿ ಪ್ರಶಸ್ತಿ ತಮ್ಮ ಜೀವನದಲ್ಲಿ ಜವಾಬ್ದಾರಿ ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟರು.

  ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿದರು, ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್‌.ಪಟೇಲ್‌ ಪಾಂಡು ಅವರು ಕಾರ್ಯಕ್ರಮ ನಿರೂಪಿಸಿದರು, ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ. ಎನ್‌.ಎಸ್‌. ಶ್ರೀಧರ ಮೂರ್ತಿ ಅವರು ಪ್ರಶಸ್ತಿ ಪುರಸ್ಕೃತರ ವಿವರಣೆ ನೀಡಿದರು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಅವರು ವಂದಿಸಿದರು.

Related posts

ವಯೋವೃದ್ಧರೊಬ್ಬರ ನ್ಯಾಯಾಂಗ ಹೋರಾಟ: ಸರ್ಕಾರಿ ನೌಕರರ ವಿರುದ್ಧ ಕಿಡಿ ಕಾರಿದ ಹೈಕೋರ್ಟ್

ಎಸ್ ಎಸ್ ಎಲ್ ಸಿ ಮತ್ತು ಪಿಯು ಪರೀಕ್ಷೆ: ಫೇಲ್ ಆದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಮೂರು ಅವಕಾಶ- ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ

ಬೆಂಗಳೂರು ಜಿಲ್ಲೆ  ಮರುನಾಮಕರಣ ಮಾಡ್ತೇವೆ:  ಇನ್ಮುಂದೆ ರಾಮನಗರ ಜಿಲ್ಲೆ ಇರಲ್ಲ – ಡಿಸಿಎಂ ಡಿ.ಕೆ ಶಿವಕುಮಾರ್