ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ತಿಂಗಳಾಂತ್ಯದಲ್ಲಿ ಜಾತಿ ಗಣತಿ ವರದಿ ಸಲ್ಲಿಕೆ: ಪರ-ವಿರೋಧ ಚರ್ಚೆ ಮುನ್ನೆಲೆಗೆ..

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ವರದಿ ಇದೇ  ತಿಂಗಳಾಂತ್ಯದಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗುವ ನಿರೀಕ್ಷೆ ಇದ್ದು ಈ ಮಧ್ಯೆಯೇ, ಪರ-ವಿರೋಧದ  ಚರ್ಚೆ ಮುನ್ನೆಲೆಗೆ ಬಂದಿದೆ.

ಎಚ್.ಕಾಂತರಾಜು ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಮೀಕ್ಷೆಯ ವರದಿ 2018ರಲ್ಲೇ ಪೂರ್ಣಗೊಂಡಿತ್ತು. ವರದಿ ಬಿಡುಗಡೆಯಾದರೆ ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗಲಿದೆ ಎಂಬ ಕಾರಣಕ್ಕೆ ರಾಜಕೀಯವಾಗಿ ಪ್ರಬಲವಾಗಿರುವ ಒಕ್ಕಲಿಗರು ಮತ್ತು ಲಿಂಗಾಯತರು ವಿರೋಧ ವ್ಯಕ್ತಪಡಿಸಿದ್ದರು. ಈಗಲೂ ಅದೇ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಕಾಣಿಸುತ್ತಿದೆ.

ಈ ಬೆಳವಣಿಗೆಗಳ ಮಧ್ಯೆಯೇ, ವರದಿಯ ಪರ ಕೂಗೆದ್ದಿದೆ. ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಮುಖಂಡರು ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಲು ಒಂದು ತಿಂಗಳ ಗಡುವು ನೀಡಿದ್ದಾರೆ. ಪ್ರಬಲ ಸಮುದಾಯಗಳ ವಿರೋಧವನ್ನು ಗಟ್ಟಿಧ್ವನಿಯಲ್ಲಿ ಖಂಡಿಸಿದ್ದಾರೆ.

ಜಾತಿ ಗಣತಿ ವರದಿಯನ್ನು ತ್ವರಿತವಾಗಿ ಅಂಗೀಕರಿಸುವಂತೆ ಒಕ್ಕೂಟ ಒತ್ತಾಯಿಸುವುದಿಲ್ಲ. ಬಿಡುಗಡೆಯ ನಂತರ ಸದನದ ಹೊರಗೆ, ಒಳಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ವಿಸ್ತೃತ ಚರ್ಚೆಯ ನಂತರವಷ್ಟೇ ಅಂಗೀಕರಿಸುವ ಕುರಿತು ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು ಎಂದರು.

ಎರಡು ದಶಕಗಳಿಂದ ಹಿಂದುಳಿದ ವರ್ಗಗಳ ಪರಿಷ್ಕೃತ ಪಟ್ಟಿ ಪ್ರಕಟಿಸಿಲ್ಲ. ವೈಜ್ಞಾನಿಕ ಸಮೀಕ್ಷೆಯ ಅಂಕಿಅಂಶ ಇಲ್ಲದ ಕಾರಣ ಕೆಲ ಪ್ರಬಲ ಜಾತಿಗಳು ತಮ್ಮದೇ ಹೆಚ್ಚು ಜನಸಂಖ್ಯೆ ಎಂದು ಬಿಂಬಿಸುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಾ ಬಂದಿದ್ದಾರೆ. ಇಂತಹ ಗೊಂದಲಗಳಿಗೆ ತೆರೆ ಎಳೆಯಲು ಜಾತಿ ಗಣತಿಯ ವರದಿ ಬಿಡುಗಡೆಯೊಂದೇ ದಾರಿ ಎಂದರು.

ಬಿಹಾರ, ಕರ್ನಾಟಕದ ಮಾದರಿಯಲ್ಲಿ ದೇಶದ ಎಲ್ಲ ರಾಜ್ಯಗಳಲ್ಲೂ ಜಾತಿ ಗಣತಿ ನಡೆಯಬೇಕು. ಪ್ರಸ್ತುತ ಕೆಲವೇ ಪ್ರಬಲ ಜಾತಿಗಳು ಪ್ರಾಬಲ್ಯ ಹೊಂದಿವೆ. ರಾಜ್ಯದಲ್ಲೂ ಅಂತಹ ವರ್ಗಗಳ ಜನರೇ ಮುಖ್ಯಮಂತ್ರಿಗಳಾಗಿದ್ದಾರೆ. ದೇಶದ ಸಂಪತ್ತು, ಅಧಿಕಾರ, ಅವಕಾಶಗಳು ಸಮಾನವಾಗಿ ಹಂಚಿಕೆಯಾಗಬೇಕು. ಆಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ. ಈಗ ಹಿಂದುಳಿದ ವರ್ಗಗಳಲ್ಲೂ ಜಾಗೃತಿ ಮೂಡಿದೆ. ಮೋಸಗೊಳಿಸಲು ಸಾಧ್ಯವಿಲ್ಲ ಎಂದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ಇತ್ತೀಚೆಗೆ ಸಭೆ ನಡೆಸಿದ್ದ ಒಕ್ಕಲಿಗ ಸಮುದಾಯದ ಪ್ರಮುಖರು, ಈ ವರದಿಯನ್ನು ತಿರಸ್ಕರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡುವ ತೀರ್ಮಾನ ಕೈಗೊಂಡಿದ್ದರು.  ವರದಿಯ ಬಗ್ಗೆ ಆರಂಭದಿಂದಲೂ ವಿರೋಧದ ನಿಲುವು ಹೊಂದಿರುವ ವೀರಶೈವ-ಲಿಂಗಾಯತ ಸಮುದಾಯದ ನಾಯಕರು, ಈ ಕುರಿತು ಮೊದಲ ಸುತ್ತಿನ ಸಭೆ ನಡೆಸಿದ್ದರು. ವರದಿಯನ್ನು ಒಪ್ಪದಿರುವ ಬಗ್ಗೆ ಚರ್ಚೆ ನಡೆದಿತ್ತು.

ಜಾತಿ ಗಣತಿ ವರದಿಯನ್ನು ಇದೇ ತಿಂಗಳು ಬಿಡುಗಡೆ ಮಾಡಬೇಕು ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಮುಖಂಡರು ಆಗ್ರಹಿಸಿದರು.

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಕುರಿತು ನಡೆದಿದ್ದ ಹೋರಾಟ ವೀರಶೈವ-ಲಿಂಗಾಯತ ಸಮುದಾಯದ ಶಾಸಕರನ್ನೇ ವಿಭಜಿಸಿತ್ತು. ಸಮುದಾಯ ಇಬ್ಭಾಗವಾಗುವ ಹಂತ ತಲುಪಿತ್ತು. ಹಾಗಾಗಿ, ಜಾತಿ ಗಣತಿ ವಿಷಯದಲ್ಲಿ ಎಚ್ಚರಿಕೆ ಹೆಜ್ಜೆ ಇಡಲು ನಿರ್ಧರಿಸಿರುವ ನಾಯಕರು, ಅಪಸ್ವರಕ್ಕೆ ಆಸ್ಪದ ನೀಡದೇ, ಎಲ್ಲ ಪಕ್ಷಗಳ ಶಾಸಕರು, ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟು ಮೂಡಿಸುವಂತಹ ಒಮ್ಮತದ ನಿರ್ಧಾರಗಳನ್ನು ತೆಗೆದುಕೊಳ್ಳಲು ಒತ್ತು ನೀಡಲಿದ್ದಾರೆ ಎನ್ನಲಾಗಿದೆ.

 

Related posts

ಸಂವಿಧಾನದ ಮೌಲ್ಯವನ್ನು ತನ್ನ ಮೌಲ್ಯವಾಗಿ ಆಚರಿಸುತ್ತಿರುವ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್- ಸಿಎಂ ಸಿದ್ಧರಾಮಯ್ಯ ನುಡಿ

ಕಾವೇರಿ ನದಿ ನೀರಿಗೆ ತಮಿಳುನಾಡು ಕ್ಯಾತೆ: ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ ಕರ್ನಾಟಕ

ಛಾಯಾಗ್ರಹಣದಲ್ಲಿ ಡಿಜಿಟಲ್ ಯುಗ ಪ್ರವೇಶ: ಎಲ್ಲಾ ಜೀವ ವೈವಿಧ್ಯ, ಪರಿಸರದ ಮಾಹಿತಿ ಒಂದು ಛಾಯಾಚಿತ್ರಗಳಿಂದ ಲಭ್ಯ-ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ