ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ವರ್ಷಾಂತ್ಯಕ್ಕೆ 4 ರಾಜ್ಯಗಳ ವಿಧಾನಸಭಾ ಚುನಾವಣೆ: ‘ಕೈ’ ಪರ ಸಮೀಕ್ಷೆಗಳು: ಬಿಜೆಪಿಗಿದು ಅಗ್ನಿಪರೀಕ್ಷೆಯೇ…?

ನವದೆಹಲಿ: ಈ ವರ್ಷಾಂತ್ಯದಲ್ಲಿ  ನಾಲ್ಕು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಗಾಗಲೇ ಈ ಕುರಿತಂತೆ ಸಮೀಕ್ಷೆಗಳು  ಹೊರಬಂದಿವೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಿರುವ ಕಾಂಗ್ರೆಸ್ ಈಗ ನಾಲ್ಕು ರಾಜ್ಯಗಳಲ್ಲೂ ಕಮಾಲ್ ಮಾಡಲಿದೆ ಎಂಬ ಅಂಶ ಸಮೀಕ್ಷೆಗಳಿಂದ ತಿಳಿದು ಬಂದಿದೆ.

ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಗಡ ರಾಜ್ಯಗಳು ಚುನಾವಣೆ ಎದುರಿಸಲಿದೆ. ಇದು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಭಾವಿಸಲಾಗುತ್ತಿದೆ. ಈ ವಿಧಾನಸಭೆ ಚುನಾವಣೆಯ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ಇವೆ. ಇದು ಬಿಜೆಪಿಗೆ ಅಗ್ನಿಪರೀಕ್ಷೆ ತಂದೊಡ್ಡಿದೆಯೇ ಎನ್ನಲಾಗುತ್ತಿದೆ.

ಈ ವರ್ಷದ ಮೇ ತಿಂಗಳಲ್ಲಿ ನಡೆದ ಕರ್ನಾಟಕ ಚುನಾವಣೆಯನ್ನ ಕಾಂಗ್ರೆಸ್ 136 ಸ್ಥಾನಗಳಲ್ಲಿ ಪ್ರಚಂಡ ಜಯಸಾಧಿಸಿ ಅಧಿಕಾರ ಹಿಡಿದಿದೆ. ಕರ್ನಾಟಕದ ಫಲಿತಾಂಶಗಳು ಆಡಳಿತಾರೂಢ ಬಿಜೆಪಿಗೆ ಆಘಾತ ನೀಡುವ ಮೂಲಕ ಕಾಂಗ್ರೆಸ್ಗೆ ಹೊಸ ಹುರುಪನ್ನು ತಂದಿದೆ. ಪ್ರಧಾನಿ ಮೋದಿ ಅವರ ಜನಪ್ರಿಯತೆಯನ್ನು ಬಳಸಿಕೊಳ್ಳಲು ಮುಂದಾಗಿದ್ದ ಬಿಜೆಪಿಗೆ ಕರ್ನಾಟಕದಲ್ಲಿ ಹಿನ್ನೆಡೆಯಾಗಿದೆ.

ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ ಆರೋಪಗಳು, ಬೆಲೆ ಏರಿಕೆ ಹಾಗೂ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳು ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿವೆ ಎಂದು ಹೇಳಲಾಗುತ್ತಿದೆ. ಇವೆಲ್ಲವೂ ಕಾರಣವಾಗಿದ್ದರೂ ಬಿಜೆಪಿಯೊಳಗಿನ ಆಂತರಿಕ ಕಲಹವೂ ಪಕ್ಷದ ಸೋಲಿಗೆ ಪ್ರಮುಖ ಕಾರಣವೆಂದು ಹೇಳಬಹುದು. ಒಟ್ಟಿನಲ್ಲಿ, ಕರ್ನಾಟಕದಲ್ಲಿ ಬಿಜೆಪಿಗೆ ಹೀನಾಯ ಸೋಲಾಗಿರುವುದು ಹೊಸ ರಾಜಕೀಯ ಬೆಳವಣಿಗೆಗೆ ಮುನ್ನುಡಿಯನ್ನಂತೂ ಬರೆದಿದೆ.

ತೆಲಂಗಾಣದಲ್ಲಿ ಸತತ ಎರಡು ಬಾರಿ ಸರ್ಕಾರ ರಚಿಸಿರುವ ಚಂದ್ರಶೇಖರ್ ರಾವ್ ಅವರ ಬಿಆರ್ಎಸ್ ಪಕ್ಷವು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ, ತೆಲಂಗಾಣದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ತೆಲಂಗಾಣ ಕಾಂಗ್ರೆಸ್ನ ರಾಜ್ಯ ಘಟಕದ ಅಧ್ಯಕ್ಷ ರೇವಂತ್ ರೆಡ್ಡಿ ಅವರ ಜನಪ್ರಿಯತೆ ದಿನೇದಿನೇ ಹೆಚ್ಚಾಗುತ್ತಿದೆ.

ಕರ್ನಾಟಕದಂತೆ ತೆಲಂಗಾಣದಲ್ಲೂ ಕಾಂಗ್ರೆಸ್ ಪಕ್ಷವು ಗ್ಯಾರಂಟಿಗಳನ್ನು ಘೋಷಿಸಿದೆ. ಕರ್ನಾಟಕದ ಫಲಿತಾಂಶಗಳು ತೆಲಂಗಾಣದ ಮೇಲೆ ಪರಿಣಾಮ ಉಂಟು ಮಾಡುವ ಸಾಧ್ಯತೆಗಳಿವೆ. ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವಾಗಲೇ ಬಿಆರ್ಎಸ್ ಹಾಗೂ ಬಿಜೆಪಿ ನಾಯಕರು ‘ಕೈ’ ಹಿಡಿಯುತ್ತಿರುವುದು ಕಾಂಗ್ರೆಸ್ನ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ ಎಂದು ಹೇಳಬಹುದು.

ರಾಜಸ್ಥಾನದ ಬಿಜೆಪಿಯಲ್ಲಿ ಆಂತರಿಕ ಕಲಹ ಜೋರಾಗಿ ಸದ್ದು ಮಾಡುತ್ತಿದೆ. ಮಾಜಿ ಸಿಎಂ ವಸುಂದರಾ ರಾಜೇ ಹಾಗೂ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆದಿದೆ. ಇವರಿಬ್ಬರ ನಡುವಿನ ಅಸಮಾಧಾನ ಬಹಿರಂಗ ವೇದಿಕೆಗಳಲ್ಲೇ ವ್ಯಕ್ತವಾಗಿರುವುದು ಕೇಸರಿ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ.

ರಾಜಸ್ಥಾನದ ಆಡಳಿತರೂಢ ಕಾಂಗ್ರೆಸ್ ಪಕ್ಷವು ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಹಾಗೂ ಸಚಿನ್ ಪೈಲಟ್ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಶಮನ ಮಾಡುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದೆ. ಕರ್ನಾಟಕದಂತೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಮುಂದಾಗಿದೆ. ಪ್ರಮುಖವಾಗಿ ಕಾಂಗ್ರೆಸ್ ಗ್ಯಾರಂಟಿಗಳು ಇಲ್ಲಿಯೂ ಪ್ರಭಾವ ಬೀರಬಹುದು ಎಂದು ಹೇಳಲಾಗುತ್ತಿದೆ.

ಲೋಕಸಭೆ ಚುನಾವಣೆಗೂ ಮುನ್ನವೇ ಈ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಸಮೀಕ್ಷೆಯಂತೆ ಈ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ಗೆ ಬಹುಮತ ದೊರೆತರೆ ದೇಶದಲ್ಲಿ ಹೊಸ ಅಲೆ ಏಳುವ ನಿರೀಕ್ಷೆ ಇದೆ.

 

Related posts

ಜ್ಞಾನದೀಪ ಶಾಲೆ ಮಕ್ಕಳಿಂದ ಸೇವಾ ಕಾರ್ಯ-ವಾಣಿ ಕೃಷ್ಣಪ್ರಸಾದ್

ಹೊಸಮನೆ ಬಡಾವಣೆಯಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಕನ್ಸರ್ವೆನ್ಸಿ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ

ಮಹಿಳಾ ಮೀಸಲಾತಿ ಬಿಲ್ ಗೆ ಕಾಂಗ್ರೆಸ್ ಬೆಂಬಲ -ಲೋಕಸಭೆಯಲ್ಲಿ ಸೋನಿಯಾ ಗಾಂಧಿ ಮಾತು.