ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ನವರಾತ್ರಿ ಹಬ್ಬ ಮುಗಿಯುತ್ತಿದ್ದಂತೆ ಗಗನಕ್ಕೇರಿದ ಈರುಳ್ಳಿ ಬೆಲೆ: ದರ ನಿಯಂತ್ರಣಕ್ಕೆ ಸರಕಾರದ ಕಸರತ್ತು.

ಬೆಂಗಳೂರು: ದೇಶದಲ್ಲಿ ನವರಾತ್ರಿ ಹಬ್ಬ ದಸರಾ ಮುಗಿಯುತ್ತಿದ್ದಂತೆ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ವಾರದ ಹಿಂದೆ ಕೆ.ಜಿ. ಈರುಳ್ಳಿಗೆ 30-40 ರೂ. ಬೆಲೆ ಇದ್ದರೆ ಈಗ 80-90ರೂ.ಗಳಿಗೆ ಏರಿಕೆಯಾಗಿದೆ.

ರಾಜ್ಯದಲ್ಲೂ ಸಹ ಈರುಳ್ಳಿ ಬೆಲೆ ಕೆ.ಜಿ.ಗೆ 80-85 ರೂ.ಗೆ ಏರಿಕೆಯಾಗಿದೆ.  ಮಾರುಕಟ್ಟೆಗೆ ಬೇಡಿಕೆಗೆ ತಕ್ಕಷ್ಟು ಈರುಳ್ಳಿ ಪೂರೈಕೆಯಾಗದಿರುವುದರಿಂದ ಬೆಲೆಯಲ್ಲಿ ಈ ಹೆಚ್ಚಳ ಕಂಡುಬಂದಿದೆ. ಹೊಸ ಋತುವಿನ ಬೆಳೆ ಇನ್ನಷ್ಟೇ ಮಾರುಕಟ್ಟೆ ಪ್ರವೇಶಿಸಬೇಕಿರುವುದರಿಂದ ಬೆಲೆ ಏರಿಕೆಯ ಈ ಪ್ರಕ್ರಿಯೆ ಮುಂದುವರಿಯಲಿದ್ದು ಮುಂದಿನ ಒಂದೆರಡು ದಿನಗಳಲ್ಲಿ ಈರುಳ್ಳಿ ಬೆಲೆ ಶತಕದ ಗಡಿ ದಾಟುವುದು ಬಹುತೇಕ ಖಚಿತವಾಗಿದೆ.

ದೀಪಾವಳಿ ಹಬ್ಬಕ್ಕೆ ಹತ್ತು ದಿನಗಳಷ್ಟೇ ಉಳಿದಿದ್ದು ಈರುಳ್ಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಲಿದೆ. ಇನ್ನು ಎರಡು ತಿಂಗಳ ಕಾಲ ಈರುಳ್ಳಿ ಬೆಲೆ ಏರಿಕೆ ಸ್ಥಿತಿಯಲ್ಲೇ ಇರುವ ಸಾಧ್ಯತೆ ಇದೆ. ಮುಂಗಾರು ವಿಳಂಬ, ಮಳೆ ಕೊರತೆ, ರೋಗಬಾಧೆ ಮತ್ತಿತರ ಕಾರಣ ಗಳಿಂದಾಗಿ ಹಾಲಿ ಋತುವಿನ ಬೆಳೆ ಇನ್ನೂ ಮಾರುಕಟ್ಟೆ ಪ್ರವೇಶಿಸಿಲ್ಲ. ಈರುಳ್ಳಿ ಉತ್ಪಾದನೆಯ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ಮಧ್ಯ ಪ್ರದೇಶದಲ್ಲಿ ಈ ಬಾರಿ ಈರುಳ್ಳಿ ಬಿತ್ತನೆ ಕಾರ್ಯ ತಡವಾಗಿದ್ದರಿಂದ ಇನ್ನಷ್ಟೇ ಕೊಯ್ಲು ನಡೆಯಬೇಕಿದೆ. ಅಷ್ಟು ಮಾತ್ರವಲ್ಲದೆ ಈ ಬಾರಿ ನಿರೀಕ್ಷಿತ ಪ್ರಮಾಣ ದಲ್ಲಿ ಇಳುವರಿ ಲಭಿಸುವ ಸಾಧ್ಯತೆ ತೀರಾ ಕಡಿಮೆ ಇದೆ.

ಆಗಸ್ಟ್ ಮಧ್ಯ ಭಾಗದಿಂದಲೇ ಗೋದಾಮುಗಳಿಂದ ಈರುಳ್ಳಿ ದಾಸ್ತಾನನ್ನು ಮಾರುಕಟ್ಟೆಗೆ ಪೂರೈಸಲಾರಂಭಿಸಿದ್ದರಿಂದ ಗೋದಾಮುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಕೂಡ ಇಲ್ಲ. ಹೀಗಾಗಿ ದೇಶಾದ್ಯಂತ ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ವಾರದ ಅಂತರದಲ್ಲಿ ದುಪ್ಪಟ್ಟಾಗಿದೆ.

ಈರುಳ್ಳಿ ಬೆಲೆ ಹೆಚ್ಚಳವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ ಈರುಳ್ಳಿಯ ರಫ್ತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಲವೊಂದು ಕಠಿನ ಕ್ರಮಗಳನ್ನು ಕೈಗೊಂಡಿದೆ. ಅದರಂತೆ ಈ ವರ್ಷದ ಅಂತ್ಯದವರೆಗೆ ಕನಿಷ್ಠ ರಫ್ತು ಬೆಲೆಯನ್ನು ನಿಗದಿಪಡಿಸಿದೆ. ಸರಕಾರದ ಈ ಎಲ್ಲ ಕ್ರಮಗಳ ಹೊರತಾಗಿಯೂ ಈರುಳ್ಳಿ ಧಾರಣೆ ಒಂದೇ ಸಮನೆ ಹೆಚ್ಚುತ್ತಲೇ ಸಾಗಿದ್ದು ಗ್ರಾಹಕರು ಈರುಳ್ಳಿ ಖರೀದಿ ಸಂದರ್ಭದಲ್ಲಿಯೇ ಕಣ್ಣೀರು ಸುರಿಸುವಂತಾಗಿದೆ. ಮುಂದಿನ ತಿಂಗಳು ದೇಶದ ಐದು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈರುಳ್ಳಿ ಸಹಿತ ತರಕಾರಿ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಕೇಂದ್ರ ಸರಕಾರದ ಪಾಲಿಗೆ ಬಲು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಟ್ಟಾರೆ ಈರುಳ್ಳಿ ಬೆಲೆ ಏರಿಕೆಯ ಬಿಸಿ ಕೇವಲ ಜನಸಾಮಾನ್ಯರನ್ನು ಮಾತ್ರವಲ್ಲದೆ ಸರಕಾರಕ್ಕೂ ತಟ್ಟತೊಡಗಿರುವುದಂತೂ ಸುಳ್ಳಲ್ಲ.

 

Related posts

ಕತ್ತಲೆಯಲ್ಲಿ ಮೊಬೈಲ್ ಫೋನ್ ನೋಡೋ ಅಭ್ಯಾಸವಿದ್ರೆ ಎಚ್ಚರ: ಬ್ರೈನ್ ಟ್ಯೂಮರ್ ಬರುತ್ತೆ ಹುಷಾರ್.

ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್ ಹುಟ್ಟುಹಬ್ಬ: ಕೇಕ್ ಕತ್ತರಿಸಿ ಸಂಭ್ರಮಾಚರಣೆ; ರೋಗಿಗಳು ಹಣ್ಣು ವಿತರಣೆ ಮತ್ತು ರಕ್ತದಾನ ಶಿಬಿರ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ, ಬಿಡುಗಡೆ