ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯಶಿವಮೊಗ್ಗ

ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಕೆಎಸ್ ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಎಸ್ಪಿಗೆ ಮನವಿ.

ಶಿವಮೊಗ್ಗ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಕಠಿಣಕ್ರಮ ತೆಗೆದುಕೊಳ್ಳಬೇಕು ಎಂದು ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಹಾಗೂ ಕೆಪಿಸಿಸಿ ರಾಜ್ಯ ಸಂಯೋಜಕ ಆರ್. ಮೋಹನ್ ಅವರ ನೇತೃತ್ವದಲ್ಲಿ ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.
ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ನಿಯಮಗಳನ್ನು ಪಾಲಿಸುತ್ತಿದೆ. ಕೆ.ಎಸ್. ಈಶ್ವರಪ್ಪ ಜಲಸಂಪನ್ಮೂಲ ಸಚಿವರೂ ಆಗಿದ್ದವರು. ಅವರಿಗೆ ಇದರ ಅರ್ಥವಾಗದೇ ಡಿ.ಕೆ. ಶಿವಕುಮಾರ್ ಅವರನ್ನು ನೀರಿನ ಕಳ್ಳ ಎಂದು ಅವಮಾನಿಸಿದ್ದಾರೆ. ಆದ್ದರಿಂದ ಈಶ್ವರಪ್ಪ ಅವರ ವಿರುದ್ಧ ಕಠಿಣಕ್ರಮ ತೆಗೆದುಕೊಳ್ಳಬೇಕೆಂದು ಮನವಿದಾರರು ತಿಳಿಸಿದ್ದಾರೆ.
ರಾಜ್ಯದಲ್ಲಿ ಬರಗಾಲ ಇರುವುದು ನಿಜ. ಜಲಾಶಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೀರು ಇಲ್ಲ ಎಂಬುದೂ ನಿಜ. ಆದರೆ, ಡಿ.ಕೆ. ಶಿವಕುಮಾರ್ ಅವರ ಪಾತ್ರ ಇದರಲ್ಲಿ ಏನಿದೆ? ನ್ಯಾಯಾಲಯದ ಆದೇಶಗಳನ್ನು ಗೌರವಿಸಬೇಕು. ಅದಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಸಲಹೆ ಕೊಡಬಹುದಿತ್ತು. ಆದರೆ, ನೀರಿನ ಕಳ್ಳ ಎಂದು ಹೀಯಾಳಿಸಿರುವುದು ಸರಿಯಲ್ಲ ಎಂದು ತಿಳಿಸಿದರು.
ಈಶ್ವರಪ್ಪ ತನ್ನ ಇರುವಿಕೆಗಾಗಿ ಇಂತಹ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಅವರು ತಮ್ಮ ಹಿಂದಿನ ಜೀವನ ನೋಡಿಕೊಳ್ಳಲಿ. ಗುತ್ತಿಗೆದಾರನ ಆತ್ಮಹತ್ಯೆಯ ಹಿನ್ನಲೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಈಶ್ವರಪ್ಪನವರ ಯೋಗ್ಯತೆ ಬಿಜೆಪಿ ಹೈಕಮಾಂಡ್ ಗೇ ತಿಳಿದಿದೆ. ಆ ಕಾರಣಕ್ಕಾಗಿಯೇ ಅವರಿಗೆ ಟಿಕೆಟ್ ನೀಡಿಲ್ಲ. ಮತ್ತು ಕೆ.ಎಸ್. ಈಶ್ವರಪ್ಪ ಅವರಂತೆ ಡಿ.ಕೆ. ಶಿವಕುಮಾರ್ ಮನೆಯಲ್ಲಿ ನೋಟು ಎಣಿಸುವ ಯಂತ್ರ ಇಟ್ಟುಕೊಂಡಿಲ್ಲ. ಯಾರು ಕಳ್ಳರು? ಯಾರು ಸುಳ್ಳರು? ಎಂದು ಈ ನಾಡಿನ ಜನಕ್ಕೆ ಗೊತ್ತಿದೆ. ಇನ್ನಾದರೂ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಒ. ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಶೆಟ್ಟಿ ಶಂಕರಘಟ್ಟ,  ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಘಟಕದ ಸಂಯೋಜಕರಾದ ಜಿ.ಡಿ.ಮಂಜುನಾಥ್, ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಪ್ರಮುಖರಾದ ರಂಗಸ್ವಾಮಿ ಗೌಡ, ಟಾಕ್ರಾನಾಯ್ಕ್, ಸಿದ್ದಪ್ಪ, ಗಣೇಶ್, ಶ್ರೀಕಾಂತ್, ಮಂಜು ನಾಯ್ಕ್, ಸುರೇಶ್ ಕಲ್ಮನೆ, ಮುತ್ತಣ್ಣ ಶಿಕಾರಿಪುರ, ಅಮರ್, ಕುರುವಳ್ಳಿ ನಾಗರಾಜ್, ಗಾಜನೂರು ಸುದೀಪ್, ರಾಮಚಂದ್ರನಾಯ್ಕ್, ಸತ್ಯನಾರಾಯಣ್, ಗಾಜನೂರು ನಾಗರಾಜ್, ಲೋಕೇಶ್ ಮೊದಲಾದವರಿದ್ದರು.

Related posts

ಇಂದು ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ  ಘೋಷಣೆ.

ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಇಲ್ಲ-ಡಿಸಿಎಂ ಡಿಕೆ ಶಿವಕುಮಾರ್ ಕಿಡಿ.

ಸರ್ಕಾರದ ಹಿಂದೂ ವಿರೋಧಿ ಧೋರಣೆ ಖಂಡಿಸಿ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನಾ ಸಭೆ: ಹಲವು ನಾಯಕರು ಭಾಗಿ.