ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಶಿಕ್ಷಣದ ಜತೆಯಲ್ಲಿ ಮೌಲ್ಯಯುತ ಅಂಶಗಳ ಕಲಿಕೆ ಮುಖ್ಯ-ಬಿ.ಕೃಷ್ಣಪ್ಪ

ಶಿವಮೊಗ್ಗ: ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಯಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಅವಶ್ಯವಿರುವ ಮೌಲ್ಯಯುತ ಅಂಶಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೃಷ್ಣಪ್ಪ ಹೇಳಿದರು.
ಶಿವಮೊಗ್ಗ ನಗರದ ಡಿವಿಎಸ್ ರಂಗಮಂದಿರದಲ್ಲಿ ದೇಶಿಯ ವಿದ್ಯಾಶಾಲಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ 2023 ಹಾಗೂ ಸಾಂಸ್ಕೃತಿಕ ವೇದಿಕೆ ಉದ್ಘಾಟನಾ ಸಮಾರಂಭ 2023-24 ರಲ್ಲಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಕೆಲವು ವಿದ್ಯಾರ್ಥಿಗಳು ಖಿನ್ನತೆ ಹಾಗೂ ದುರ್ಬಲ ಮನಸ್ಥಿತಿ ಹೊಂದುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಇನ್ನೂ ಕಿರುಕುಳ, ಫಲಿತಾಂಶದಲ್ಲಿ ಹಿನ್ನಡೆ ವಿಚಾರ ಕಾರಣಕ್ಕೆ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಎಂತಹ ಪರಿಸ್ಥಿತಿ ಬಂದರೂ ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಣ್ಣ ವಯಸ್ಸಿನಲ್ಲೇ ಹೃದಯಾಘಾತದಿಂದ ವಿದ್ಯಾರ್ಥಿಗಳು ಸಾವನ್ನಪ್ಪುತ್ತಿದ್ದಾರೆ. ಸರಿಯಾದ ಜೀವನ ಶೈಲಿ ಪಾಲಿಸದೇ ಇರುವುದರಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ. ವಿದ್ಯಾರ್ಥಿಗಳು ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿ ದಿನ ವ್ಯಾಯಾಮ ಚಟುವಟಿಕೆಗಳನ್ನು ಮಾಡಬೇಕು. ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಸಚಿವ ಡಾ. ಕೆ.ಸಿ.ಶಶಿಧರ್ ಮಾತನಾಡಿ, ಪೋಷಕರು ವಿದ್ಯಾರ್ಥಿಗಳಿಗೆ ಅತಿಯಾದ ರೀತಿ ಒತ್ತಡ ಹಾಕಬಾರದು. ಉತ್ತಮ ಅಂಕ ಗಳಿಸಲು ಪ್ರೋತ್ಸಾಹಿಸಬೇಕು. ಆಗ ವಿದ್ಯಾರ್ಥಿಯು ಸ್ವಯಂಪ್ರೇರಿತರಾಗಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲು ಸಾಧ್ಯವಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಸಾಧನೆ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ಶಿಕ್ಷಕರು ವಿದ್ಯಾರ್ಥಿಗಳಿಗೆ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಸಲಹೆ ಸೂಚನೆಗಳನ್ನು ನೀಡಬೇಕು. ಅವರಲ್ಲಿ ಇರುವ ಪ್ರತಿಭೆ ಗುರುತಿಸಿ ಸೂಕ್ತ ವೇದಿಕೆಗಳನ್ನು ಕಲ್ಪಿಸಬೇಕು ಎಂದು ತಿಳಿಸಿದರು.
ಡಿವಿಎಸ್ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು. ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಿಷಯವಾರು 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್, ಸಹ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಶೆಟ್ಟಿ, ಖಜಾಂಚಿ ಬಿ.ಗೋಪಿನಾಥ್, ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಆರ್.ಲಕ್ಷ್ಮೀದೇವಿ ಉಪಸ್ಥಿತರಿದ್ದರು.

Related posts

ಗೃಹರಕ್ಷಕ ದಳದಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬಲು ಅರ್ಜಿ ಆಹ್ವಾನ/ ಹೊಲಿಗೆ ತರಬೇತಿ ನೀಡಲು ಆಸಕ್ತ ಸಂಸ್ಥೆಗಳಿಂದ ಅರ್ಜಿ ಆಹ್ವಾನ

ಸೆ.26ರಿಂದ ಆಕಾಶವಾಣಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಉಪನ್ಯಾಸ ಮಾಲಿಕೆ ಪ್ರಸಾರ.

ವಿದ್ಯೆಯೊಂದಿಗೆ ಸಂಸ್ಕಾರ ನೀಡುವ ಆದಿಚುಂಚನಗಿರಿ ಸಂಸ್ಥೆ- ಸಂಸದ ಬಿ.ವೈ.ರಾಘವೇಂದ್ರ ಇಂಗಿತ