ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಗೊಂದಲದ ಗೂಡಾಗಿರುವ ಜಾತಿಗಣತಿ ವರದಿ ಸ್ವೀಕಾರವಾಗುತ್ತಾ…?

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ  ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಎಂದೇ  ಕರೆಯಲ್ಪಡುವ ಜಾತಿಗಣತಿ ವರದಿ ಸದ್ಯ ಸರ್ಕಾರದ ಕೈಗೆ ಸೇರುವ ಮುನ್ನವೇ ಅವೈಜ್ಞಾನಿಕ, ಅಪ್ರಸ್ತುತ ಎಂಬ ಟೀಕೆಗೆ ಗುರಿಯಾಗಿದ್ದು, ಪರ ವಿರೋಧ  ಚರ್ಚೆಗಳು ಈಗಾಗಲೇ  ಹುಟ್ಟಿಕೊಂಡಿವೆ.

ಹಿಂದೆ ಸಿದ್ಧರಾಮಯ್ಯ ಸಿಎಂ ಆಗಿದ್ದಾಗ  ರಚಿಸಿದ್ದ ಎಚ್.ಕಾಂತರಾಜು ಆಯೋಗ 2016ರಲ್ಲಿ ಜಾತಿಗಣತಿ ವರದಿ ಸಿದ್ಧಪಡಿಸಿತ್ತು. ಆದರೆ ವರದಿ ಅಂದು ಸ್ವೀಕಾರವಾಗಲಿಲ್ಲ.  2018ರಲ್ಲಿ ಚುನಾವಣೆ ನಡೆದು ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೇರಿದ  ನಂತರ ಮೈತ್ರಿ ಸರ್ಕಾರ ಪತನಗೊಂಡು ಬಂದ ಬಿಜೆಪಿ ಸರ್ಕಾರದಲ್ಲೂ ಸಹ ವರದಿ ಸ್ವೀಕಾರವಾಗಲಿಲ್ಲ.

ಈಗ ಕಾಂಗ್ರೆಸ್ ಸರ್ಕಾರವೇ ಇದ್ದು ಆಯೋಗ ರಚಿಸಿದ್ದ ಸಿದ್ಧರಾಮಯ್ಯಅವರೇ ಸಿಎಂ ಆಗಿದ್ದಾರೆ. ಆದರೆ ಪ್ರಸ್ತುತ ವಿವಾದದ ಗೂಡಾಗಿರುವ ಜಾತಿಗಣತಿ ವರದಿ ಅವೈಜ್ಞಾನಿಕವಾದುದು ಅದನ್ನ ತಿರಸ್ಕರಿಸಿಬೇಕು  ಮತ್ತೆ ಮರುಸಮೀಕ್ಷೆಯಾಗಬೇಕು ಎಂಬ ಆಗ್ರಹ ಬಲವಾಗಿ ಕೇಳಿ ಬಂದಿದೆ. ಈ ನಡುವೆಯೂ ವರದಿ ಸ್ವೀಕರಿಸಲೇಬೇಕೆಂಬುದು ಸಿಎಂ ಸಿದ್ಧರಾಮಯ್ಯನವರ ಅಚಲ  ನಿರ್ಧಾರ.  ಇತ್ತ ಬಿಜೆಪಿ ಜೆಡಿಎಸ್ ಇರಲಿ  ತಮ್ಮ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಭಾಗಿಗಳಾಗಿರುವ ಸಂಪುಟ ಕೆಲ  ಸದಸ್ಯರೂ ಕೂಡ ಈ ವರದಿ ಬಗ್ಗೆ ಅಪಸ್ವರ ಎತ್ತಿದ್ದಾರೆ. ಕಳೆದೆರೆಡು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವ ವರದಿ ವಿರುದ್ದದ ಆಕ್ಷೇಪ ಪತ್ರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ , ಸಚಿವರಾದ ಚಲುವರಾಯಸ್ವಾಮಿ, ಎಂಸಿ ಸುಧಾಕರ್ ಅವರ ಸಹಿ ಹಾಕಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ.

ಇನ್ನು ಜಾತಿಗಣತಿ ವರದಿಗೆ ಪಕ್ಷತೀತವಾಗಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೆ ಈ ಬಗ್ಗೆ ನಿನ್ನೆಯಷ್ಟೆ ಮಾತನಾಡಿ ಖುದ್ದು ಸ್ಪಷ್ಟನೆ ನೀಡಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಅವರು, ವರದಿ ನೋಡದೇ ಅವೈಜ್ಞಾನಿಕ ಎನ್ನೋದು ಸರಿಯಲ್ಲ. ನಾನು ಕೊಟ್ಟ ಜಾತಿಗಣತಿ ವರದಿ ನೈಜ ಮತ್ತು ವೈಜ್ಞಾನಿಕ.  40 ದಿನಗಳ ಕಾಲ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಲಾಗಿದ್ದು, ಕೂಲಂಕಷವಾಗಿ ಅಂಕಿ ಅಂಶಗಳ ಸಮೇತ ವರದಿ ಸಿದ್ಧ ಮಾಡಲಾಗಿದೆ. ಅದ್ದರಿಂದ ರಾಜ್ಯ ಸರ್ಕಾರ ವರದಿ ನೋಡಿದ ಬಳಿಕ ಮುಂದಿನ ತೀರ್ಮಾನ  ಕೈಗೊಳ್ಳಲಿ ಎಂದಿದ್ದರು.

ಈ ಮಧ್ಯೆ ಜಾತಿ ಗಣತಿ ವರದಿಯ ಮೂಲಪ್ರತಿಗಳು ಆಯೋಗದ ಕಚೇರಿಯಿಂದಲೇ ನಾಪತ್ತೆಯಾಗಿವೆ ಎಂದು 2021ರಲ್ಲಿ ರಾಜ್ಯ ಹಿಂದುಳಿದ ವರ್ಗ ಆಯೋಗದ ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು, ಸರ್ಕಾರಕ್ಕೆ ಪತ್ರ ಬರೆದಿದ್ದ ವಿಚಾರ ಮುನ್ನೆಲೆಗೆ ಬಂದು ಚರ್ಚೆಗೀಡಾಗಿದೆ.  ಇದನ್ನ ಅಸ್ತ್ರವನ್ನಾಗಿಸಿಕೊಂಡ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್  ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಮುಗಿ ಬಿದ್ದಿದ್ದು, ಈ ಎಲ್ಲಾ ಗೊಂದಲ, ಟೀಕೆ ಟಿಪ್ಪಣಿಗಳ ಮಧ್ಯೆ ರಾಜ್ಯ ಸರ್ಕಾರ ವರದಿಯನ್ನ ಸ್ವೀಕರಿಸುತ್ತದೆಯೇ ಅಥವಾ ವಿರೋಧಕ್ಕೆ ಮಣಿದು ಮತ್ತೆ ಹೊಸ ಸಮೀಕ್ಷೆಗೆ ಮುಂದಾಗುತ್ತದೆಯೇ ಎಂಬುದನ್ನ ಇನ್ನಷ್ಟೇ ಕಾದು ನೋಡಬೇಕಿದೆ.

 

Related posts

ನಾನು ನೀಡಿದ ಲಿಸ್ಟ್ ​​ನದ್ದು ಮಾತ್ರ ಮಾಡಿ:  ಮಾಜಿ ಶಾಸಕ  ಡಾ.ಯತೀಂದ್ರ ಸಿದ್ಧರಾಮಯ್ಯ ದೂರವಾಣಿ ಕರೆ ವಿಡಿಯೋ ವೈರಲ್

ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಿ- ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ.

ಉದ್ಯಮಿಗೆ ವಂಚನೆ ಪ್ರಕರಣ: 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಅಭಿನವ ಹಾಲಶ್ರೀ .