ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಮೈಸೂರು ಗ್ರಾಮಾಂತರಮೈಸೂರು ನಗರ

ಮೈಸೂರಿನಲ್ಲಿ ಮೆಣಸಿನಕಾಯಿ ಬೆಳೆ ಬೇಸಾಯದ ಕ್ಷೇತ್ರೋತ್ಸವ

ಹುಣಸೂರು :  ತೋಟಗಾರಿಕೆ ಇಲಾಖೆ ವತಿಯಿಂದ ತಾಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದ ಕರಕನಹಳ್ಳಿ ಬಡಾವಣೆಯಲ್ಲಿನ ಪುಟ್ಟರಾಜು ಅವರ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಬೇಸಾಯದ ಕ್ಷೇತ್ರೋತ್ಸವ ಏರ್ಪಡಿಸಲಾಗಿತ್ತು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ನೇತ್ರಾವತಿ ಮಾತನಾಡಿ, ರೈತರು ಯಾವುದೇ ಬೆಳೆಗಳಿಗೆ ತಮ್ಮ ಜಮೀನಿನಲ್ಲಿ ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಸುವುದು ಸೂಕ್ತವಲ್ಲ. ಇದರ ಬದಲು ನಿಮ್ಮ ಭೂಮಿಯ ಮಣ್ಣನ್ನು ಪರೀಕ್ಷೆ ಮಾಡಿಸಿಕೊಂಡು ಆ ಮಣ್ಣಿಗೆ ಯಾವ ರಾಸಾಯನಿಕ ಅಂಶ ಕಡಿಮೆ ಇದೆ ಎಂದು ತಿಳಿದುಕೊಂಡು ಕೊರತೆ ಇರುವ ಗೊಬ್ಬರ ಬಳಸುವುದು ಸೂಕ್ತ ಎಂದು ತಿಳಿಸಿದರು.

ಬಳಿಕ ಬೆಳೆಯನ್ನು ಬೆಳೆದರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಜೊತೆಗೆ ರೈತರು ಹೆಚ್ಚಾಗಿ ರಾಸಾಯನಿಕ ಗೊಬ್ಬರದ ಬದಲು ತಿಪ್ಪೆ ಗುಂಡಿ ಗೊಬ್ಬರ ಬಳಸಿ ಬೆಳೆ ಬೆಳೆಯಿರಿ ಎಂದರು.

ಉತ್ತರ ಕರ್ನಾಟಕದಲ್ಲಿ ರೈತರು ಮೆಣಸಿನ ಕಾಯಿಯನ್ನು ಹವಾಮಾನದ ಅನುಗುಣವಾಗಿ ಮುಂಗಾರಿನಲ್ಲಿ ಕೆಂಪು ಮೆಣಸಿನ ಕಾಯಿ ಬೆಳೆದರೆ ದಕ್ಷಿಣ ಕರ್ನಾಟಕದಲ್ಲಿ ಹಿಂಗಾರಿನಲ್ಲಿ ಮಳೆಯ ಪ್ರಮಾಣ ನೋಡಿಕೊಂಡು ಹಸಿ ಮೆಣಸಿನ ಕಾಯಿಯನ್ನು ಬೆಳೆಯುತ್ತಾರೆ. ರೈತರು ಯಾವುದೇ ತರಕಾರಿ ಬೆಳೆಯ ಗಿಡಗಳನ್ನು ನರ್ಸರಿಗಳಲ್ಲಿ ಪಡೆಯುವಾಗ ಹಿಂಗಾರು ಮತ್ತು ಮುಂಗಾರು ಬೆಳೆಯ ಅನುಗುಣವಾಗಿ ಕೇಳಿ ಸಸಿಗಳನ್ನು ಪಡೆಯುವುದು ಸೂಕ್ತ ಎಂದರು.

ಕೆಂಪು ಮೆಣಸಿನ ಕಾಯಿ ಬೆಳೆಯಲು ಮೂರುವರೆ ಅಡಿ ಸಾಲು ಇರಬೇಕು. ಹಸಿ ಮೆಣಸಿನ ಕಾಯಿ ಬೆಳೆಯಲು ಎರಡುವರೆ ಅಡಿ ಅಂತರದಲ್ಲಿ ಸಾಲು ಇರಬೇಕು. ಭೂಮಿಗೆ ಅವಶ್ಯಕತೆ ಇರುವ ಗೊಬ್ಬರ ನೀಡಬೇಕು. ಭೂಮಿಯಲ್ಲಿ ಇಂಗಾಲ ಹೆಚ್ಚಾಗುತ್ತದೆ. ಶೇ. 25ರಷ್ಟು ಉಷ್ಣಾಂಶವಿರುವ ಪ್ರದೇಶ ಸಾವಯುವ ಗೊಬ್ಬರದಲ್ಲಿರುವ ಇಂಗಾಲ ಹೀರಿಕೊಳ್ಳುಲು ಕೊಟ್ಟಿಗೆ ಗೊಬ್ಬರ ಇರಬೇಕು. ಇದರಿಂದ ಇಳುವರಿಗೆ ಸಹಾಯವಾಗುವುದರ ಜೊತೆಗೆ ಮಣ್ಣಿನಲ್ಲಿ ಪೋಷಕಾಂಶ ಹೀರಿಕೊಳ್ಳಲು ನೆರವಾಗುತ್ತದೆ ಎಂದರು.

ಜೊತೆಗೆ ತರಕಾರಿಗೆ ದುಂದು ವೆಚ್ಚ ಕಡಿವಾಣ ಹಾಕಲು ರೈತರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ನಮ್ಮ ತೋಟಗಾರಿಕೆ ಇಲಾಖೆಯಿಂದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಸೂಕ್ಷ್ಮ ಹನಿ ನೀರಾವರಿ ಯೋಜನೆ (ಪಿಎಂಕೆಎಸ್ ವೈ) ಯೋಜನೆಯಲಿ ಸಾಮಾನ್ಯ ರೈತರಿಗೆ ಶೇ. 75ರಷ್ಟು ಸಬ್ಸಿಡಿ, ಪ.ಜಾತಿ, ಪ.ಪಂಗಡದವರಿಗೆ ಶೇ. 90ರಷ್ಟು ಸಬ್ಸಿಡಿ ದರದಲ್ಲಿ ಹನಿ ನೀರಾವರಿ ಪದ್ಧತಿಗೆ ಸಹಾಯಧನ ನೀಡಲಿದೆ. ಹನಿ ನೀರಾವರಿ ಪದ್ಧತಿ ಮಾಡಿದರೆ ಕಳೆ ಬರುವುದು ಖರ್ಚು ಕಡಿಮೆಯಾಗುವುದು, ಡ್ರಿಪ್ ಪೈಪ್ ಮೂಲಕ ಗೊಬ್ಬರವನ್ನು ಗಿಡಗಳಿಗೆ ನೀಡುವುದರಿಂದ ರೈತರು ಹೆಚ್ಚು ಆದಾಯಗಳಿಸಲು ಹನಿ ನೀರಾವರಿ ಪದ್ಧತಿ ಅನಿವಾರ್ಯ ಎಂದರು.

ಸಹಾಯಕ ತೋಟಗಾರಿಕಾಧಿಕಾರಿ ನಿತಿನ್ ರೈತರಿಗೆ ಮೆಣಸಿನ ಕಾಯಿ ಬೆಳೆಗೆ ತಗಲುವ ರೋಗ ಲಕ್ಷಣ ಹಾಗೂ ಅದನ್ನು ಹೋಗಲಾಡಿಸುವ ಬಗ್ಗೆ ಸವಿವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ರುಕ್ಮಿಣಿ, ಪ್ರಗತಿಪರ ರೈತ ಪುಟ್ಟರಾಜು, ಗಾವಡಗೆರೆ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಫಯಾಜ್ ಪಾಷ, ತೋಟಗಾರಿಕಾ ಅಧಿಕಾರಿ ದ್ರಾಕ್ಷಾಯಿಣಿ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ಇದ್ದರು.

Related posts

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ  ತಲೆಕೆಡಿಸಿಕೊಳ್ಳುವುದಿಲ್ಲ-ಸಿಎಂ ಸಿದ್ದರಾಮಯ್ಯ

ಕನ್ನಡ ಚಲನಚಿತ್ರಗಳು ಗೆಲ್ಲಲು ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗಬೇಕಿದೆ-ನಿರ್ಮಾಪಕ ಹಾಗೂ ನಿರ್ದೇಶಕ ಪನ್ನಗಾಭರಣ

ಕಾವೇರಿ ಪ್ರತಿಭಟನೆ: ಮಾಜಿ ಸಿಎಂ ಬಿಎಸ್ ವೈ, ಬೊಮ್ಮಾಯಿ ಸೇರಿ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ..