ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ರೋಗಿಗಳಿಗೆ ಸರಿಯಾದ ಮಾಹಿತಿ ಪಡೆದು ಚಿಕಿತ್ಸೆ ನೀಡಿ : ನ್ಯಾಯಮೂರ್ತಿ ಸೋಮ.

ಚಿಕ್ಕಮಗಳೂರು: ಶುಶ್ರೂಷಕ ವಿದ್ಯಾರ್ಥಿಗಳು ಹಾಗೂ ಶುಶ್ರೂಷಕಿಯರು ಸರಿಯಾದ ಮಾಹಿತಿಯನ್ನು ತಿಳಿದುಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಬೇಕೆಂದು ಜಿಲ್ಲಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮ ಎ.ಎಸ್. ಹೇಳಿದರು.
ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಏಡ್ಸ್ ತಡೆಗಟ್ಟುವ ನಿಯಂತ್ರಣ ಘಟಕ, ಸರ್ಕಾರೇತರ ಸಂಘ ಸಂಸ್ಥೆಗಳು ಚಿಕ್ಕಮಗಳೂರು ಹಾಗೂ ಕರ್ನಾಟಕ ಏಡ್ಸ್ ನಿಯಂತ್ರಣ ಸಂಸ್ಥೆ, ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಡಾ. ಅಂಬೇಡ್ಕರ್ ಭವನದಲ್ಲಿ ನಡೆದ ವಿಶ್ವ ಏಡ್ಸ್ ದಿನ ೨೦೨೩ರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೋಗಿಗಳು ಮತ್ತೊಮ್ಮೆ ಆರೋಗ್ಯ ಸಮಸ್ಯೆ ಬಂದಾಗ ತಮ್ಮಲ್ಲಿಗೆ ಬರುವಂತೆ ನೋಡಿಕೊಳ್ಳಬೇಕು. ಹೆಚ್ ಐ ವಿ ಸೋಂಕಿತರಿಗೆ ಕಾನೂನಿನ ಬೆಂಬಲ ನೀಡಲು ಪ್ರತಿ ಶನಿವಾರ ಎಆರ್‌ಟಿ ಕೇಂದ್ರದಲ್ಲಿ ಕಾನೂನು ಸಲಹೆ ಏರ್ಪಡಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದ ಅವರು. ವಿಶ್ವದಲ್ಲಿ ೩೯ ಮಿಲಿಯನ್ ಜನರು ಹೆಚ್‌ಐವಿ ಸೋಂಕಿನೊಂದಿಗೆ ಬದುಕುತ್ತಿದ್ದಾರೆ ಹಾಗೂ ೬, ೩೦,೦೦೦ ಜನರು  ಏಡ್ಸ್ ರೋಗದಿಂದ ಮರಣ ಹೊಂದಿದ್ದರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ೨೦೨೨ ರಲ್ಲಿ ವರದಿ ಮಾಡಿದೆ. ಪ್ರಪಂಚದ ಭೌಗೋಳಿಕ ವಿಸ್ತೀರ್ಣದಲ್ಲಿ ಭಾರತವು ೨ನೇ ಸ್ಥಾನ ಹೊಂದಿದ್ದು, ಹೆಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಪ್ರಪಂಚದಲ್ಲಿ ಭಾರತವು ೩ನೇ ಸ್ಥಾನದಲ್ಲಿದೆ ಎಂದ ಅವರು ೨೦೨೩ರ ವಿಶ್ವ ಏಡ್ಸ್ ದಿನದ ಘೋಷ ವಾಕ್ಯ ಸಮುದಾಯಗಳು ಮುನ್ನಡೆಸಲಿ ಎಂಬುದಾಗಿದ್ದು, ಎಲ್ಲಾ ಸಮುದಾಯದ ಜನರು ನಿಯಂತ್ರಣ, ಆರೈಕೆ ಬೆಂಬಲ ನೀಡಿದ್ದಲ್ಲಿ ಮಾತ್ರ ನಗರ, ಜಿಲ್ಲೆ, ರಾಜ್ಯ ಮತ್ತು ದೇಶವನ್ನು ಹೆಚ್‌ಐವಿ ಮುಕ್ತಾ ಮಾಡಲು ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ. ಹರೀಶ್ ಬಾಬು ಮಾತನಾಡಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮವು ೨೦೨೬ರೊಳಗೆ ಸಮುದಾಯದಲ್ಲಿರುವ ಹೆಚ್ ಐ ವಿ ಸೋಂಕಿತರಲ್ಲಿ ಶೇಕಡಾ ೯೫ ರಷ್ಟನ್ನು ಗುರುತಿಸಬೇಕೆಂದು, ಪತ್ತೆ ಹಚ್ಚಿದವರಲ್ಲಿ ಶೇಕಡಾ ೯೫ ರಷ್ಟು ಜನರಿಗೆ ಎಆರ್‌ಟಿ ಚಿಕಿತ್ಸೆಯನ್ನು ಹಾಗೂ ಚಿಕಿತ್ಸೆ ಪ್ರಾರಂಭಿಸಿದವರಲ್ಲಿ ಶೇ. ೯೫ ರಷ್ಟು ಜನರಿಗೆ ವೈರಸ್‌ಗಳ ತಂತಿಯನ್ನು ಕುಂಠಿತಗೊಳಿಸುವ ೯೫-೯೫-೯೫ ಗುರಿಯನ್ನು ಹೊಂದಿದ್ದು, ಅದಕ್ಕೆ ಎಲ್ಲಾ ಸಮುದಾಯದವರು ಸಹಕರಿಸಬೇಕೆಂದು ತಿಳಿಸಿದರು.
ಎಸ್‌ಆರ್‌ಡಿಎಫ್ ನ ಅಧ್ಯಕ್ಷ ರಾಜು ನರಸಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ವಿಶ್ವ ಏಡ್ಸ್ ದಿನವನ್ನು ಮೊದಲಿಗೆ ೧೯೮೮ರ ಡಿಸೆಂಬರ್ ೦೧ ರಂದು ಪ್ರಥಮ ಬಾರಿಗೆ ಆಚರಿಸಲಾಯಿತು. ಇದರ ಉದ್ದೇಶ ಹೆಚ್ ಐ ವಿ ಹರಡುವುದನ್ನು ಅರಿವು ಮೂಡಿಸುವುದು ಹಾಗೂ ಸೋಂಕಿತರಿಗೆ ಸಮಾಜದಲ್ಲಿ ಬದುಕಲು ಬೆಂಬಲವಾಗಿ ನಿಲ್ಲುವುದನ್ನು ಸೂಚಿಸುತ್ತದೆ ಎಂದು ಹೇಳಿದರು.
ಲಲಿತ ನಿರೂಪಿಸಿದರು, ಜಲಜಾಕ್ಷಿ ಸ್ವಾಗತಿಸಿ ಕಿರಣ್ ಕುಮಾರ್ ವಂದಿಸಿದರು.
ಆಯುಷ್ ಅಧಿಕಾರಿ ಡಾ. ಗೀತಾ, ಆಡಳಿತಾ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಾಥಾ ಕಾರ್ಯಕ್ರಮವು ತಾಲ್ಲೂಕು ಕಛೇರಿ ಆವರಣದಿಂದ ಪ್ರಾರಂಭವಾಗಿ ಎಂ.ಜಿ. ರಸ್ತೆ ಮಾರ್ಗವಾಗಿ ಡಾ. ಅಂಬೇಡ್ಕರ್ ಸಭಾಂಗಣ ತಲುಪಿತು. ಜಾಥಾದಲ್ಲಿ ಹೆಚ್ ಐ ವಿ ಕುರಿತಾದ ಘೋಷಣೆಗಳು ಹಾಗೂ ಜಿಂಗಲ್ಸ್‌ಗಳ ಮೂಲಕ ಜನ ಸಾಮಾನ್ಯರಿಗೆ ಅರಿವು ಮೂಡಿಸಲಾಯಿತು.

Related posts

ಸ್ಕೀಲ್ ಅಕಾಡೆಮಿಗೆ ಸಚಿವರ ಸಕರಾತ್ಮಕ ಸ್ಪಂದನೆ.

 ನಮ್ಮ ರೈತರ ಹಿತ ಕಾಪಾಡುವ ಕೆಲಸ ನಮ್ಮದು- ಡಿಸಿಎಂ ಡಿ.ಕೆ ಶಿವಕುಮಾರ್.

ಹಿಂದೂ ಸಮಾಜ ತಿರುಗಿ ಬಿದ್ದರೆ ಗತಿ ಏನು ಎಂದು ಮುಸ್ಲಿಂ ಸಮಾಜ ಯೋಚಿಸಿಲ್ಲ-ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಗುಡುಗು.