ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ತಪ್ಪಿತಸ್ಥರನ್ನು ಗಲ್ಲಿಗೇರಿಸಿ: ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ಬಾಲಾಜಿ

ಶಿವಮೊಗ್ಗ: ಭ್ರೂಣ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಹಾಗೂ ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು ಎಂದು ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ಎಚ್.ಎಸ್.ಬಾಲಾಜಿ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಮೈಸೂರು ಹಾಗೂ ಮಂಡ್ಯ ಪ್ರದೇಶದಲ್ಲಿ ಭ್ರೂಣ ಹತ್ಯೆ ಜಾಲದ ಬಗೆಗಿನ ಸುದ್ದಿ ಇಡೀ ರಾಜ್ಯವನ್ನೇ ಆತಂಕಕ್ಕೊಳಗಾಗುವಂತೆ ಮಾಡಿದೆ. ಜೀವ ಉಳಿಸಬೇಕಾದ ವೈದ್ಯರೇ ಇಂತಹ ಅಮಾನವೀಯ ಕೆಲಸಕ್ಕೆ ಕೈಹಾಕಿದ್ದು ಮನುಕುಲ ತಲೆ ತಗ್ಗಿಸುವಂತಾಗಿದೆ’ ಎಂದು ಬಾಲಾಜಿ ಬೇಸರ ವ್ಯಕ್ತಪಡಿಸಿದ್ದಾರೆ.

ತಕ್ಷಣದ ಮಾಹಿತಿ ಪ್ರಕಾರ ಮೂರು ತಿಂಗಳಲ್ಲಿ 242 ಭ್ರೂಣ ಹತ್ಯೆ ಮಾಡಲಾಗಿದ್ದು, ಆರೋಪಿಗಳೇ ಒಪ್ಪಿಕೊಂಡಂತೆ ಎರಡು ವರ್ಷಗಳಿಂದ ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಇದರ ಲೆಕ್ಕದಂತೆ ಒಂದು ವರ್ಷಕ್ಕೆ ಕನಿಷ್ಠ 1,000 ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಎರಡು ವರ್ಷಕ್ಕೆ 2,000 ಭ್ರೂಣ ಹತ್ಯೆ ಮಾಡಿರುವ ಶಂಕೆ ಇದೆ. ಪೊಲೀಸರ ತನಿಖೆಯಲ್ಲಿ ಮೂರು ವರ್ಷದಿಂದ ಕೃತ್ಯವೆಸಗಿರುವುದು ಗೊತ್ತಾಗಿದೆ. ಅಲ್ಲಿಗೆ 3,000 ದಷ್ಟು ಭ್ರೂಣ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳೇ ಮಾಹಿತಿ ನೀಡಿರುವುದು ಆತಂಕಕ್ಕೀಡಾಗುವಂತೆ ಮಾಡಿದೆ ಎಂದಿದ್ದಾರೆ.

ಭ್ರೂಣ ಹತ್ಯೆ ಅತ್ಯಂತ ಹೇಯ ಕೃತ್ಯ. ಇಂತಹ ಕೃತ್ಯಗಳು ಕೇವಲ ಒಂದೆರೆಡು ಜಿಲ್ಲೆಗಳಿಗೆ ಮಾತ್ರವಲ್ಲದೇ ರಾಜ್ಯಾದ್ಯಂತ ಹರಡಿರುವ ಸಾಧ್ಯತೆ ಇದೆ. ಭ್ರೂಣ ಹತ್ಯೆ ತಡೆಯಲು ಅಧಿಕಾರಿಗಳು ವಿಫಲ ಆಗಿದ್ದಾರೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಪ್ರಕರಣದ ಸಮಗ್ರ ತನಿಖೆಯಾಗಬೇಕಿದೆ. ಇಂತಹ ಕೃತ್ಯದ ಹಿಂದೆ ಪ್ರಭಾವಿಗಳು ಸಹ ಭಾಗಿಯಾಗಿರುವ ಸಾಧ್ಯತೆಯಿದ್ದು, ತನಿಖೆ ನಡೆಸುವ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ನೀಡಲು ಹಾಗೂ ಗಲ್ಲಿಗೇರಿಸಲು ಸಹಕರಿಸಬೇಕು ಎಂದಿದ್ದಾರೆ.

ಎಲ್ಲ ಜೀವಕ್ಕೂ ಬದುಕುವ ಹಕ್ಕು ಇದೆ. ವೈದ್ಯರು ತಮ್ಮ ವೈದ್ಯಕೀಯ ಧರ್ಮದ ಜತೆಗೆ ಸಾಮಾಜಿಕ ಕಳಕಳಿ ಇಟ್ಟುಕೊಂಡು ಕೆಲಸ ಮಾಡಬೇಕು. ವೈದ್ಯರಿಗೆ ಗೌರವ ಸ್ಥಾನವಿದ್ದು, ವೃತ್ತಿಗೆ ಚ್ಯುತಿ ಬಾರದಂತೆ ಕರ್ತವ್ಯ ಮಾಡಬೇಕು. ಆದರೆ ಇಂತಹ ಕೃತ್ಯಗಳಿಂದ ಜನರು ವೈದ್ಯಕೀಯ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಮಾಜದ ಪ್ರತಿಯೊಬ್ಬರಿಗೂ ಭ್ರೂಣ ಹಾಗೂ ಹೆಣ್ಣಿನ ಬಗ್ಗೆ ಸಂವೇದನಾಶೀಲತೆ ಬರಬೇಕು. ಸ್ಕ್ಯಾನಿಂಗ್‌ ಸೌಲಭ್ಯ ಹೊಂದಿರುವ ಪ್ರತಿಯೊಂದು ಕೇಂದ್ರದ ನೋಂದಣಿ ಕಡ್ಡಾಯವಾಗಿದ್ದು, ಯಾರೆ ವ್ಯಕ್ತಿ ವೈಜ್ಞಾನಿಕ ತಂತ್ರಗಳನ್ನು ಭ್ರೂಣ ಲಿಂಗ ಪತ್ತೆಗಾಗಿ ಬಳಸಿದರೆ, ಬಳಸಲು ಕಾರಣವಾದರೆ, ಸಹಾಯ ಮಾಡಿದರೆ, ಲಿಂಗಪತ್ತೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಗರ್ಭಿಣಿ ಮೇಲೆ ಒತ್ತಡ ಹೇರಿದರೆ ಅದು ಅಪರಾಧ. ಈ ಬಗ್ಗೆ ಅರಿವು ಮೂಡಿಸಿ. ವೈದ್ಯರು ತಮ್ಮ ವೃತ್ತಿ ಧರ್ಮ ಮರೆಯದೇ ನೈತಿಕ ಮೌಲ್ಯ ಉಳಿಸಿಕೊಳ್ಳಬೇಕು. ಭ್ರೂಣ ಹತ್ಯೆಯಿಂದ ಉಂಟಾಗಬಹುದಾದ ಸಮಸ್ಯೆ ಹಾಗೂ ಸಾಮಾಜಿಕ ಅಸಮತೋಲನದ ಬಗ್ಗೆ ಅರಿವು ಮೂಡಿಸಿದ್ದಲ್ಲಿ ಮಾತ್ರ ಪಿಡುಗು ನಿವಾರಣೆ ಮಾಡಲು ಸಾಧ್ಯ ಎಂದು ಬಾಲಾಜಿ ಹೇಳಿದ್ದಾರೆ.

Related posts

ಲೋಕಸಭೆ ಚುನಾವಣೆ ಬಳಿಕ ಇಂಡಿಯಾ ಮೈತ್ರಿಕೂಟ ಪ್ರಧಾನಿ ಅಭ್ಯರ್ಥಿ ಆಯ್ಕೆ :ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವಿರುದ್ದ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನುಡಿ

ಈ ವರ್ಷವೂ ಮ್ಯಾಮ್ ಕೋಸ್ ಲಾಭಾಂಶದಲ್ಲಿ ವೃದ್ಧಿ- ಸಂಸ್ಥೆ ಉಪಾಧ್ಯಕ್ಷ ಮಹೇಶ್ ಎಚ್.ಎಸ್.