ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಎಫ್ ಡಿಎ, ಎಸ್ ಡಿಎ ನೇಮಕಾತಿಗಾಗಿ ಕಾದು ಕುಳಿತ ಲಕ್ಷಾಂತರ ಆಕಾಂಕ್ಷಿಗಳು: ಅರ್ಜಿ ಕರೆಯುವುದು ಯಾವಾಗ..?

ಬೆಂಗಳೂರು: ಸರ್ಕಾರಿ ನೌಕರಿ ಪಡೆಯಬೇಕು. ಉತ್ತಮ ಜೀವನ ನಡೆಸಬೇಕು ಎಂದು ಆಸೆ ಆಕಾಂಕ್ಷೆಗಳನ್ನು ಹೊತ್ತು  ಲಕ್ಷಾಂತರ ಮಂದಿ ಈಗ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ, ಎಫ್ಡಿಎ)  ನೇಮಕಾತಿ ಯಾವಾಗ ಎಂದು ಕಾಯುತ್ತಾ ಕುಳಿತಿದ್ದಾರೆ.

ಕೆಪಿಎಸ್ಸಿ ನೇಮಕಾತಿಗೆ ಸಂಬಂಧಪಟ್ಟಂತೆ ಈ ಹುದ್ದೆಗಳಿಗೆ ಯಾವಾಗ ಅರ್ಜಿ ಕರೆಯುತ್ತಾರೆ ಎಂದು ಲಕ್ಷಾಂತರ ಆಕಾಂಕ್ಷಿಗಳು ಚಿಂತಿಸುತ್ತಿದ್ದು ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ನಾಲ್ಕೂವರೆ ವರ್ಷಗಳೇ ಕಳೆದಿವೆ. 2019ರಲ್ಲಿ ಆಹ್ವಾನಿಸಿದ್ದೇ ಕೊನೇ. ಇಲ್ಲಿಯವರೆಗೂ ಹೊಸ ಅಧಿಸೂಚನೆಯನ್ನು ಸರ್ಕಾರ  ಪ್ರಕಟಿಸಿಲ್ಲ. ಹೀಗಾಗಿ ಈ ಬಾರಿ ಉದ್ಯೋಗಾಂಕ್ಷಿಗಳಲ್ಲಿ ನಿರೀಕ್ಷೆ ನೂರು ಪಟ್ಟು ಹೆಚ್ಚಾಗಿದ್ದು ಎಫ್ ಡಿಎ ಮತ್ತು ಎಸ್ ಡಿಎ ಹುದ್ದೆಗಳ ನೇಮಕಾತಿಗಾಗಿ ಕಾದು ಕುಳಿತಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳಿಂದ ಸುಮಾರು 150 ಎಫ್ಡಿಎ, ಎಸ್ಡಿಎ ಹುದ್ದೆಗಳ ನೇಮಕಕ್ಕೆ ಪ್ರಸ್ತಾವನೆ ಬಂದಿವೆ ಎಂದು ಹೇಳಲಾಗಿದೆ. ಆದರೆ, ಇಷ್ಟಕ್ಕೋಸ್ಕರ ಅರ್ಜಿ ಆಹ್ವಾನ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ಈಗ ಕೆಪಿಎಸ್ಸಿ ಇದೆ. ಕಾರಣ ಕನಿಷ್ಠ 500ರಿಂದ 1 ಸಾವಿರ ಹುದ್ದೆಗಳಿಗಾದರೆ ಅರ್ಜಿ ಆಹ್ವಾನಿಸಿದರೆ ಎಲ್ಲ ರೀತಿಯಲ್ಲಿಯೂ ಸಮಂಜಸವಾಗಲಿದೆ. ಅಂದರೆ, ಎಷ್ಟೇ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಸಲು ಅರ್ಜಿ ಆಹ್ವಾನಿಸಿದರೂ ಸುಮಾರು 5 ಲಕ್ಷ ಅರ್ಜಿಗಳು ಬಂದೇ ಬರುತ್ತವೆ ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಇದಕ್ಕೆ ಪರೀಕ್ಷೆ ನಡೆಸಬೇಕಾದಲ್ಲಿ ಸಿದ್ಧತೆಯನ್ನು ಸಹ ಆ ಮಟ್ಟಿಗೆ ಮಾಡಿಕೊಳ್ಳಬೇಕು. ಹೀಗಾಗಿ ಯಾವೆಲ್ಲ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ. ಅವಶ್ಯಕತೆಗಳು ಇವೆ ಎಂಬ ವಿವರ ಸಹಿತ ಖಾಲಿ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಸ್ತಾವನೆ ಸಲ್ಲಿಸಲು ವಿವಿಧ ಇಲಾಖೆಗಳಿಗೆ ಕೆಪಿಎಸ್ಸಿ ಕೋರಿದೆ.

ಸರ್ಕಾರಿ ನೌಕರಿಯಲ್ಲಿ ಎಸ್ಡಿಎ, ಎಫ್ಡಿಎ ಹುದ್ದೆಗಳು ಎಂದರೆ ಎಲ್ಲಾ ಅಭ್ಯಿರ್ಥಿಗಳಿಗೂ ಇಷ್ಟ. ಎಸ್ಡಿಎ ಹುದ್ದೆಗೆ ನೇಮಕವಾಗಬೇಕಾದಲ್ಲಿ ಯಾವುದೇ ವಿಭಾಗದಲ್ಲಿ ಪಿಯು ವ್ಯಾಸಂಗ ಮಾಡಿದ್ದರೆ ಸಾಕು. ಅದೇ ಎಫ್ಡಿಎ ಹುದ್ದೆಗಾದರೆ ಯಾವುದೇ ಪದವಿಯನ್ನು ಪಡೆದವರೂ ಸಹ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ, ಈ ಹುದ್ದೆಗಳಿಗೆ ಇಂಥದ್ದೇ ವಿಷಯ, ಭಾಷೆಯಲ್ಲಿ ವ್ಯಾಸಂಗ ಮಾಡಿರಬೇಕು ಎಂಬ ನಿಯಮವಾಲೀ, ಷರತ್ತುಗಳಾಗಲೀ ಇಲ್ಲ. ಹೀಗಾಗಿ, ಆಯಾ ಹುದ್ದೆಗಳ ಲಕ್ಷಾಂತರ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಾರೆ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್ ಡಿಎ ಮತ್ತು ಎಫ್ ಡಿಎ ಹುದ್ದೆಗಳನ್ನು ಮುಂದುವರಿಸುವ ಅಗತ್ಯವಿಲ್ಲ. ಹಾಲಿ ಇರುವ ಹುದ್ದೆಗಳನ್ನು ಪುನಾರಚನೆ ಮಾಡಬಹುದು ಅಥವಾ ತಾಂತ್ರಿಕ ಹುದ್ದೆಗಳಿಗೆ ಪರಿವರ್ತಿಸಬಹುದು ಎಂದು ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗ ತನ್ನ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದರಿಂದ ಈ ಹುದ್ದೆಗಳ ನೇಮಕಾತಿ ಬಗ್ಗೆ ಅಷ್ಟಾಗಿ ಒಲವು ತೋರುವುದು ಬೇಡ ಎಂದು ವರದಿಯಲ್ಲಿ ಉಲ್ಲೇಖಿಸಿದಂತೆ ಆಗಿದೆ. ಒಂದು ವೇಳೆ ಸರ್ಕಾರ ಈ ಶಿಫಾರಸನ್ನು ಗಂಭೀರವಾಗಿ ಪರಿಗಣಿಸಿದರೆ ಲಕ್ಷಾಂತರ ಆಕಾಂಕ್ಷಿಗಳಿಗೆ ನಿರಾಸೆಯಾಗಲಿದೆ.  ಜೊತೆಗೆ ಲಕ್ಷಾಂತರ ಆಕಾಂಕ್ಷಿಗಳ ಜೀವನಕ್ಕೆ ಕೊಳ್ಳಿ ಇಟ್ಟಂತಾಗುತ್ತದೆ.

ನಾವು ಅಧಿಕಾರಕ್ಕೆ ಬಂದರೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿತ್ತು. ಹೀಗಾಗಿ ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಿದೆ ಎಂಬ ನಿರೀಕ್ಷೆಯಲ್ಲಿ ಉದ್ಯೋಗಾಕಾಂಕ್ಷಿಗಳು ಕಾಯುತ್ತಿದ್ದಾರೆ.

 

Related posts

ಹೆಚ್.ಡಿಕೆ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ- ಸಚಿವ ಸಂತೋಷ್ ಲಾಡ್ ತಿರುಗೇಟು.

ಮೌಂಟ್ ಅಭುವಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ.

ಛಾಯಾಚಿತ್ರ ಹಾಗೂ ಚಿತ್ರಕಲಾ ಪ್ರದರ್ಶನಕ್ಕೆ ಎಸ್ಪಿ ಜಿ.ಕೆ. ಮಿಥುನ್‍ಕುಮಾರ್ ಚಾಲನೆ.