ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ದೀಪವಾಗಿ ಬೆಳಗಿ ಬೆಂಕಿಯಾಗಿ ಉರಿಯಬೇಡಿ- ವಿದ್ಯಾರ್ಥಿಗಳಿಗೆ ಪೊಲೀಸ್ ಪಡೆಯ ಕಮಾಡಂಟ್ ಎಸ್. ಯುವಕುಮಾರ್ ಕಿವಿಮಾತು

ಶಿವಮೊಗ್ಗ: ದೀಪವಾಗಿ ಬೆಳಗಿ ಬೆಂಕಿಯಾಗಿ ಉರಿಯಬೇಡಿ ಎಂದು ಮಾಚೇನಹಳ್ಳಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಕಮಾಡಂಟ್ ಎಸ್. ಯುವಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜ್, ಹಳೆ ವಿದ್ಯಾರ್ಥಿಗಳ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಇವರ ಸಮಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪದವಿ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗ ಅವಕಾಶ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಬದುಕೇ ಒಂದು ಕಂಪ್ಯೂಟರ್ ಇದ್ದ ಹಾಗೆ. ಇದನ್ನು ಅತ್ಯಂತ ಸೂಕ್ಷ್ಮವಾಗಿ ಬಳಸಬೇಕು. ವೈರಸ್ ಗಳು ಸಹಜ. ಅದನ್ನು ತಡೆಯಲು ಆಂಟಿ ವೈರಸ್ ಗಳು ಹೇಗೇ ಮುಖ್ಯವೋ ಹಾಗೆಯೇ ವಿದ್ಯಾರ್ಥಿಗಳು ಕೂಡ ತಮ್ಮ ಕೆಟ್ಟ ಆಲೋಚನೆಗಳನ್ನು ದೂರ ಮಾಡಬೇಕು. ವಿದ್ಯಾರ್ಥಿ ಜೀವನವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಪರೀಕ್ಷೆಗಾಗಿಯೇ ಓದಬೇಡಿ, ನಾನು ಓದಿದ್ದರಿಂದ ಎಷ್ಟು ಅಂಕಗಳು ಬಂದಿವೆ ಎಂದು ತಿಳಿದುಕೊಳ್ಳಿ. ಒಳ್ಳೆಯ ಆಲೋಚನೆಗಳಿಂದ ಸಮಾಜಕ್ಕೆ ಆಸ್ತಿಯಾಗುತ್ತೀರಿ. ಇಲ್ಲದಿದ್ದರೆ ಅಸ್ತಿಯಾಗುತ್ತೀರಿ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಸೈಯದ್ ಸನಾವುಲ್ಲ ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗ ಮಾಡುವಾಗಲೇ ಒಂದು ಗುರಿ ಇಟ್ಟುಕೊಳ್ಳಬೇಕು. ಕೆಲಸಕ್ಕೆ ಸೇರಬೇಕು ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು. ಸರ್ಕಾರಿ ಉದ್ಯೋಗಗಳಂತೂ ಈಗ ಸ್ಪರ್ಧಾತ್ಮಕ ಪರೀಕ್ಷೆಗಳಿಂದಲೇ ದಕ್ಕಲೂ ಸಾಧ್ಯ. ಆದ್ದರಿಂದ ಕಷ್ಟಪಟ್ಟು ಓದಿ. ಜ್ಞಾನ ಸಂಪಾದಿಸಿ, ವಿದ್ಯಾರ್ಥಿಗಳು ಕೆಲವು ವರ್ಷ ಓದಿದರೆ ಹಲವು ವರ್ಷಗಳು ಸುಖದಿಂದ ಇರಬಹುದು ಎಂದರು.
ಹಳೆ ವಿದ್ಯಾರ್ಥಿಗಳ ಸಂಘದ ಸಂಚಾಲಕ ಹಾಗೂ ಇತಿಹಾಸ ಪ್ರಾಧ್ಯಾಪಕ ಡಾ.ಕೆ.ಎನ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಜೀವನ ಬಂಗಾರದ ಜೀವನ ಎನ್ನುತ್ತಾರೆ. ಆದರೆ, ಅದನ್ನು ಪಡೆಯಲು ಶ್ರದ್ಧೆ, ಸಾಧನೆ ಮುಖ್ಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಯುಗದಲ್ಲಿ ಸಾಕಷ್ಟು ಕಷ್ಟಪಡಬೇಕಾಗಿದೆ. ಉದ್ಯೋಗ ಇಂದಿನ ಆದ್ಯತೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಮಲ್ನಾಡ್ ಕೋಚಿಂಗ್ ಸೆಂಟರ್ ನಿರ್ದೇಶಕ ತೀರ್ಥಹಳ್ಳಿ ಕೇಶವಮೂರ್ತಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಸ್ತು ಅತಿ ಮುಖ್ಯ. ಸರ್ಕಾರಿ ಉದ್ಯೋಗಗಳು ಲಭಿಸಲು ಇಂದು ಕಷ್ಟಪಡಬೇಕಾಗಿದೆ. ಮಲ್ನಾಡ್ ಕೋಚಿಂಗ್ ಸೆಂಟರ್ ಲಕ್ಷಾಂತರ ಜನರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದೆ. ವಿದ್ಯಾರ್ಥಿಗಳು ದೊಡ್ಡ ದೊಡ್ಡ ಪರೀಕ್ಷೆಗಳನ್ನು ಪಾಸ್ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂಬ ಕೀಳರಿಮೆ, ಸೋಮಾರಿತನ ಬಿಟ್ಟು ಸಾಮಾಜಿಕ ಜಾಲತಾಣಗಳ ದಾಸರಾಗದೇ ಪರೀಕ್ಷೆಗಳನ್ನು ಎದುರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಎಂಎ ಇಂಗ್ಲಿಷ್ ನಲ್ಲಿ ಅತಿ ಹೆಚ್ಚು ಅಂಕ ಪಡೆದ ಸಲ್ಮಾ ತಬಸುಮ್ ಅವರಿಗೆ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಘಟಕ 1 ರ ಕಾರ್ಯಕ್ರಮಾಧಿಕಾರಿ ಡಾ. ಬಿ.ಎನ್. ಪ್ರಕಾಶ್ ಮರ್ಗನಳ್ಳಿ, ಘಟಕ 2ರ ಅಧಿಕಾರಿ ಡಾ. ಮುದುಕಪ್ಪ, ಆನಂದಪುರ ಜ್ಞಾನಸಹ್ಯಾದ್ರಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಡಾ. ಆರ್. ಸುರೇಶ್, ಸಹ್ಯಾದ್ರಿ ಕಾಲೇಜಿನ ಹಳೆಯ ವಿದ್ಯಾರ್ಥಿ ವೈ.ಹೆಚ್. ನಾಗರಾಜ್, ಪ್ರೊ. ಸಿರಾಜ್ ಅಹಮ್ಮದ್, ಡಾ. ಹಾಲಮ್ಮ, ಜಿ.ಆರ್. ಲವ ಮುಂತಾದವರಿದ್ದರು.

Related posts

ಬಿವೈ ವಿಜಯೇಂದ್ರರನ್ನ ಅಳೆದು ತೂಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಲ್ಲ- ಅರವಿಂದ ಲಿಂಬಾವಳಿ.

ಡಿಕೆ ಶಿವಕುಮಾರ್ ವಿರುದ್ದ ಸಿಬಿಐ ತನಿಖೆ ವಾಪಸ್: ಸರ್ಕಾರ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಬಿಜೆಪಿ ಶಾಸಕ ಯತ್ನಾಳ್.

ಎಲ್ಲೆಂದರಲ್ಲಿ ಬೆರಳಚ್ಚು ಕೊಡುವ ಮುನ್ನ ಇರಲಿ ಎಚ್ಚರ: ಇಲ್ಲದಿದ್ರೆ ಬ್ಯಾಂಕ್ ಖಾತೆ ಖಾಲಿ ಖಾಲಿ.