ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಭಾವನಾತ್ಮಕ ಹೃದಯದಿಂದ ಭಾವನೆಗಳ ಅಭಿವ್ಯಕ್ತಿ : ಡಾ.ಧನಂಜಯ ಸರ್ಜಿ

ಶಿವಮೊಗ್ಗ; ಭಾವನಾತ್ಮಕ ಹೃದಯ ಅರಳಿದಾಗ ಮಾತ್ರ ಕಲೆ, ಸಾಹಿತ್ಯ, ಸಂಗೀತದಂತಹ ಪ್ರತಿಭೆಗಳು ಹೊರ ಹೊಮ್ಮಲು ಸಾಧ್ಯ ಎಂದು ಸರ್ಜಿ ಸಮೂಹಗಳ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಧನಂಜಯ ಸರ್ಜಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಫ್ರೆಂಡ್ಸ್ ಸೆಂಟರ್ ಸಹಯೋಗದಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವ ಅಂಗವಾಗಿ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಹಾಗೂ ಬಹು ಭಾಷಾ ಕವಿ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಗವಂತ‌ ಮನುಷ್ಯನಿಗೆ ಕಣ್ಣು, ಕಿವಿ, ಕೈ,ಕಾಲು, ಕಿಡ್ನಿ ಹೀಗೆ ಎರಡೆರಡು ಅಂಗಾಂಗಳನ್ನು ಕೊಟ್ಟಿದ್ದಾನೆ. ಆದರೆ, ಹೃದಯವನ್ನು ಮಾತ್ರ ಒಂದೇ ನೀಡಿದ್ದಾನೆ. ಇಡೀ ದೇಹದಲ್ಲಿ ಹೃದಯ ಶಕ್ತಿ ಶಾಲಿ ಅಂಗ. ಈ ಹೃದಯದಲ್ಲಿ ದೈಹಿಕ ಹಾಗೂ ಭಾವನಾತ್ಮಕ ಹೃದಯ ಹೀಗೆ ಎರಡು ಹೃದಯಗಳನ್ನು ಕಾಣಬಹುದು. ದೈಹಿಕ ಹೃದಯ ರಕ್ತವನ್ನು ಪಂಪ್ ಮಾಡಿದರೆ, ಭಾವನಾತ್ಮಕ ಹೃದಯ ಭಾವನೆಗಳನ್ನು ಅಭಿವ್ಯಕ್ತಿಸುತ್ತದೆ. ಅದು ಸಾಹಿತ್ಯ, ಸಂಗೀತ, ಕಲೆ ಹೀಗೆ ನಾನಾ ರೂಪದಲ್ಲಿ ಸ್ಪಂದಿಸುತ್ತದೆ.  ಆಗ ಮನಸ್ಸು ಕೂಡ ಸಂತೃಪ್ತಿಯಾಗಿರುತ್ತದೆ. ಹಾಗಾಗಿ ಇರುವುದೊಂದೇ ಹೃದಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ‌ ನೀಡಿದರು.
ಕರ್ನಾಟಕ ಸಂಘದ ಆಧ್ಯಕ್ಷರಾದ ಎಂ.ಎನ್.ಸುಂದರರಾಜ್ ಮಾತನಾಡಿ, ಅರ್ಜಿ ಮುರ್ಜಿಗಳಿಲ್ಲದೆ ಕರ್ನಾಟಕ ಸಂಘಕ್ಕೆ ಎರಡು ಬಾರಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯಿಂದ ಬಂದ ಹಣವನ್ನು ಇಡಿ ಗಂಟಾಗಿ ಇಟ್ಟು ಕನ್ನಡ ಪರ ಕಾರ್ಯಕ್ರಮಗಳ ಆಯೋಜನೆಗೆ ಬಳಸಲಾಗುವುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ‌ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಸರ್ವಜನಾಂಗದ ಶಾಂತಿಯ ತೋಟ ಎಂಬ ಕವಿಯ ಆಶಯದಂತೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವಂತಹ ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡುವ ಆಶಯದೊಂದಿಗೆ ಬಹುಭಾಷಾ ಕವಿಸಮ್ಮೇಳನ ರೂಪಿಸಲಾಗಿದೆ ಎಂದು ಹೇಳಿದರು.
 ತಾಲ್ಲೂಕು ಕಸಾಪ ಅಧ್ಯಕ್ಷೆ ಮಹಾದೇವಿ, ಫ್ರೆಂಡ್ ಸೆಂಟರ್ ಅಧ್ಯಕ್ಷ ಲೋಕೇಶ್, ಸಮುದಾಯದ ಅಧ್ಯಕ್ಷ ಶ್ರೀನಿವಾಸ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ತೀರ್ಥಹಳ್ಳಿ ತಾಲ್ಲೂಕು 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಎಂ.ನವೀನ್ ಕುಮಾರ್ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ.ಎನ್. ಸುಂದರರಾಜ್,  ಮೆಸ್ಕಾಂನ ಕೆ.ಎಸ್. ಮಂಜಪ್ಪ, ನಿವೃತ್ತ ಮುಖ್ಯ ಶಿಕ್ಷಕರಾದ ಜಿ. ಕುಬೇರಪ್ಪ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಕವಿಗಳು ತಾವು ರಚಿಸಿದ ಬಹುಭಾಷಾ ಕವನಗಳನ್ನು ವಾಚಿಸಿದರು. ಕನ್ನಡದಲ್ಲಿ ಕವನಗಳನ್ನು ಕವಿಗಳಾದ ಮಣಿಕಂಠ.ಎಸ್.ಎಂ, ವಿಜಯಲಕ್ಷ್ಮಿ, ಅನಿತಾ ಸುಧಾಕರ್, ಗಾಯತ್ರಿ ಎಸ್. ಕೆ., ಸಾಗರ ಸುಲೋಚನ, ಆರ್. ಕೆ. ಫ್ಯಾಷನ್ ಕುಮಾರ್, ಪುಷ್ಪಾವತಿ ಟಿ. ಎಸ್.,ಕೆ.ಜಿ. ವೆಂಕಟೇಶ್, ಕೆ. ಎನ್. ರಮೇಶ್, ಡಾ.ಗಂಗಾಧರ ಪಿ.ಬನ್ನಿಹಟ್ಟಿ, ರಾಜಲಕ್ಷ್ಮಿ, ಶಂಕರ ಜಿಗಾಡೆ, ಡಾ.ಗಂಗಾಧರ ಸಾಗರ, ತುಳು ಕವನವನ್ನು ಡಾ. ಆಶಾಲತಾ,  ತಮಿಳು ಕವನವನ್ನು ದೊರೆ, ಮರಾಠಿ ಕವನವನ್ನು ಚಿಕ್ಕಮಗಳೂರಿನ ಲಕ್ಷ್ಮೀ ಶಾಮರಾವ್, ತೆಲುಗು ಕವನವನ್ನು ಆರ್. ರತ್ನಯ್ಯ, ಹಿಂದಿ ಕವನವನ್ನು ಪೂರ್ಣಿಮಾ, ಇಂದಿರಾ, ಕೊಂಕಣಿ ಮಂಜುನಾಥ ಕಾಮತ್ ಅವರು ಕವನ ವಾಚಿಸಿದರು.

Related posts

ಕರ್ನಾಟಕ ಬಂದ್ ಅವಶ್ಯಕತೆ ಇರಲಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್

ಸೆ. 09: ಶಾಲಾ ಅಂಗಳದಲ್ಲಿ ಸಾಹಿತ್ಯ ಕಮ್ಮಟ

ನ್ಯೂ ಮಂಡ್ಲಿ ಸರ್ಕಾರಿ ಶಾಲೆ ಕಟ್ಟಡ ನಿರ್ಮಾಣ ಇನ್ನೆರಡು ತಿಂಗಳಿನಲ್ಲಿ ಪೂರ್ಣ- ಶಾಸಕ ಎಸ್.ಎನ್. ಚನ್ನಬಸಪ್ಪ