ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಶ್ರೇಷ್ಠ ಪರಂಪರೆ ಹೊಂದಿರುವ ದೇಶ ಭಾರತ-ಅಶೋಕ ಹಂಚಲಿ

ಶಿವಮೊಗ್ಗ: ಐತಿಹಾಸಿಕ, ಧಾರ್ಮಿಕವಾಗಿ ಶ್ರೇಷ್ಠ ಪರಂಪರೆ ಹೊಂದಿರುವ ದೇಶ ನಮ್ಮ ಭಾರತ. ಇಂತಹ ಪುಣ್ಯಭೂಮಿ ಭಾರತದಲ್ಲಿ ಜನಿಸಿರುವುದೇ ನಮ್ಮೆಲ್ಲರ ಪುಣ್ಯ ಎಂದು ಬಸವನ ಬಾಗೇವಾಡಿ ಶಿಕ್ಷಕ, ವಾಗ್ಮಿ ಅಶೋಕ ಹಂಚಲಿ ಹೇಳಿದರು.

ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಪದವಿಪೂರ್ವ ( ಸ್ವತಂತ್ರ ) ಕಾಲೇಜಿನ ವತಿಯಿಂದ ಆಯೋಜಿಸಿದ್ದ “ಪೋಷಕರಿಗೆ ಪುನಶ್ಚೇತನ ಕಾರ್ಯಕ್ರಮ”ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಶ್ರೇಷ್ಠ ಪರಂಪರೆ ಮುಖಾಂತರ ಇಡೀ ಜಗತ್ತಿಗೆ ಜ್ಞಾನದ ಬೆಳಕು ನೀಡುತ್ತಿರುವ ದೇಶ ನಮ್ಮದು. ದೇಶ ನನ್ನದು ಎಂಬ ಮನೋಭಾವ ಪ್ರತಿಯೊಬ್ಬರಲ್ಲಿಯೂ ಇರಬೇಕು. ದೇಶದ ಹಿರಿಮೆ ಗರಿಮೆಗಳ ಬಗ್ಗೆ ಹೆಮ್ಮೆ ಇರಬೇಕು ಎಂದು ತಿಳಿಸಿದರು.

ಪೋಷಕರು ಮಾದರಿ ವ್ಯಕ್ತಿತ್ವ ರೂಪಿಸಿಕೊಂಡು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ಮಕ್ಕಳನ್ನು ಎಲ್ಲವನ್ನು ಗಮನಿಸುತ್ತ ಬೆಳವಣಿಗೆ ಹೊಂದುವ ಕಾರಣ ಪೋಷಕರು ಉತ್ತಮ ವ್ಯಕ್ತಿತ್ವ ಹೊಂದಿರಬೇಕು. ಪ್ರತಿಯೊಂದು ಮಕ್ಕಳಲ್ಲಿಯೂ ಅದ್ಭುತ ಶಕ್ತಿ ಇರುತ್ತದೆ ಎಂಬುದನ್ನು ಪೋಷಕರು ಅರಿತುಕೊಳ್ಳಬೇಕು. ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಮಕ್ಕಳಿಗೆ ಶಿಕ್ಷಣದ ಜತೆಯಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಪ್ರೇರಣೆ ನೀಡಬೇಕು. ಸಮಾಜಮುಖಿಯಾಗಿ ಉತ್ತಮ ವ್ಯಕ್ತಿಯಾಗಿ ಬೆಳೆಸುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರಿಗೆ ಇರುತ್ತದೆ. ಸಾಧನೆಗೆ ಪೂರಕ ವಾತಾವರಣ ನಿರ್ಮಿಸಬೇಕು. ದೇಶದ ಶಕ್ತಿಯಾಗಿ ಮಕ್ಕಳನ್ನು ಬೆಳೆಸಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.

ದೇಶಿಯ ವಿದ್ಯಾಶಾಲಾ ಸಮಿತಿಯ ಕಾರ್ಯದರ್ಶಿ ಎಸ್.ರಾಜಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು. ಜಿಲ್ಲೆ, ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ತಿಳಿಸಿದರು.

ದೇಶಿಯ ವಿದ್ಯಾಶಾಲಾ ಸಮಿತಿ ಖಜಾಂಚಿ ಬಿ.ಗೋಪಿನಾಥ್, ನಿರ್ದೇಶಕ ನಿತಿನ್.ಎನ್.ಆರ್., ಶಿಕ್ಷಕ ಪ್ರತಿನಿಧಿ ಎಚ್.ಸಿ.ಉಮೇಶ್, ಡಿವಿಎಸ್ ಪದವಿಪೂರ್ವ ( ಸ್ವತಂತ್ರ ) ಕಾಲೇಜಿನ ಪ್ರಾಚಾರ್ಯ ಎ.ಇ.ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Related posts

ಡೀಪ್ ಫೇಕ್: ಕೇಂದ್ರದಿಂದ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ಗಳಿಗೆ 7 ದಿನದ ಗಡುವು..

ಶಿವಮೊಗ್ಗ ವಿಮಾನ ಹಾರಾಟ ಪ್ರಕ್ರಿಯೆ ಆ. 31ರಿಂದ ಅಧಿಕೃತ ಆರಂಭ- ಸಂಸದ ಬಿ.ವೈ.ರಾಘವೇಂದ್ರ

ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ: ಸಕಾಲದಲ್ಲಿ ನೇತ್ರ ತಪಾಸಣೆಯು ಅಗತ್ಯ-ವೈದ್ಯೆ ಡಾ. ವರ್ಷಾ