ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಹೆಚ್. ಕಾಂತರಾಜ ಆಯೋಗದ ವರದಿ ಜಾರಿಗೆ ಆಗ್ರಹಿಸಿ ನ.20ರಂದು ಧರಣಿ ಸತ್ಯಾಗ್ರಹ.

ಶಿವಮೊಗ್ಗ: ಹೆಚ್. ಕಾಂತರಾಜ ಆಯೋಗದ ವರದಿ ಜಾರಿಗೆ ಆಗ್ರಹಿಸಿ ನ.20ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ, ಹಿಂದುಳಿತ ಜನಜಾಗೃತಿ ವೇದಿಕೆ ಹಾಗೂ ಜಿಲ್ಲಾ ಹಿಂದುಳಿದ ಮತ್ತು ಅತಿ ಹಿಂದುಳಿದ ಜನಜಾಗೃತಿ ವೇದಿಕೆ ವತಿಯಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಹಿಂದುಳಿತ ಜನಜಾಗೃತಿ ವೇದಿಕೆ ಅಧ್ಯಕ್ಷ ತೀ.ನ. ಶ್ರೀನಿವಾಸ್ ತಿಳಿಸಿದರು.
ಅವರು ಇಂದು ಮೀಡಿಯಾ ಹೌಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ 2014-15ರಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಸುಮಾರು 180 ಕೋಟಿ ರೂ. ವೆಚ್ಚ ಮಾಡಿ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ಎಲ್ಲಾ ಜಾತಿಗಳ ಹಿಂದುಳಿದವರ ಸಮಗ್ರ ವರದಿಯನ್ನು ಸಿದ್ಧಪಡಿಸಿದೆ ಎಂದರು.
ಆದರೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಶಾಶ್ವತ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಸದರೀ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಇದನ್ನು ನಮ್ಮ ಮೂರೂ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ರಾಜ್ಯದ ಎಲ್ಲಾ ಜಾತಿಗಳ ಸಾಮಾಜಿಕ-ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂಗೀಕರಿಸಿ ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.
ನಮ್ಮದು ನ್ಯಾಯಬದ್ಧ ಹೋರಾಟವಾಗಿದೆ. ಬಿಹಾರ ರಾಜ್ಯ ಸರ್ಕಾರ ಈಗಾಗಲೆ ವರದಿ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡುವುದಾಗಿ ಪದೇ ಪದೇ ಹೇಳುತ್ತಲೇ ಬಂದಿದ್ದಾರೆ ಆದರೂ ಬಿಡುಗಡೆ ಮಾಡುತ್ತಿಲ್ಲ. ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಅವರು ಕೂಡಲೇ ವರದಿಯನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುತ್ತದೆ ಎಂದರು.
ಒಕ್ಕೂಟದ ಮುಖ್ಯಸ್ಥ ವಿ. ರಾಜು ಮಾತನಾಡಿ, ಕಾಂತರಾಜ ವರದಿ ಜಾರಿಗೆ ಮೇಲ್ವರ್ಗದವರು ಅಡ್ಡಿಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೇಲ್ವರ್ಗದವರು ಹಿಂದುಳಿದ ವರ್ಗಗಳ ಏಳಿಗೆ ಸಹಿಸುವುದು ಕಷ್ಟ. ಕಾಂತರಾಜ ವರದಿಯನ್ನು ವಿರೋಧಿಸುವವರು ಸಂವಿಧಾನವನ್ನೇ ವಿರೋಧಿಸಿದಂತಾಗುತ್ತದೆ. ಬಹಿರಂಗವಾದರೆ ಎಲ್ಲಿ ನಮ್ಮ ಸ್ಥಾನಮಾನ ಗೊತ್ತಾಗುತ್ತದೆಯೋ ಎಂಬ ಭಯದಿಂದ ಈ ರೀತಿ ಮಾಡುತ್ತಿದ್ದಾರೆ. ಆದರೆ ಇದು ತಪ್ಪು. ಎಲ್ಲಾ ಮೇಲ್ವರ್ಗದವರು ಕಾಂತರಾಜ ವರದಿ ಅಧ್ಯಯನ ಮಾಡಿದರೆ ಈ ಸಮಸ್ಯೆ ಉಂಟಾಗುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಕೆ. ಸಿದ್ದರಾಮಣ್ಣ, ಪ್ರೊ. ಹೆಚ್. ರಾಚಪ್ಪ, ಎನ್. ಉಮಾಪತಿ, ಆರ್.ಟಿ. ನಟರಾಜ್, ಜನಮೇಜಿರಾವ್, ಹೆಚ್.ಎಂ. ರಂಗನಾಥ, ಎಸ್.ಪಿ. ಅಶೋಕ್‍ಕುಮಾರ್, ಪ್ರೊ. ಡಿ.ಆರ್. ಉಮೇಶ್ ಉಪಸ್ಥಿತರಿದ್ದರು.

Related posts

ತನಿಖಾ ಸಂಸ್ಥೆ ಪ್ರತಿಕಾರ ತೀರಿಸಿಕೊಳ್ಳಲು ಸಾಧ್ಯವಿಲ್ಲ: ಜಾರಿ ನಿರ್ದೇಶನಾಲಯಕ್ಕೆ(ED) ಛೀಮಾರಿ ಹಾಕಿದ ಸುಪ್ರೀಂಕೋರ್ಟ್

ದೀಪಾವಳಿಗೆ ಶಿವಮೊಗ್ಗದಲ್ಲಿ ಅಂಟಿಗೆ ಕಲಾ ಪ್ರದರ್ಶನ.

ಬೆಂಗಳೂರಿನಲ್ಲಿ ನಡೆದ ಐಟಿ ರೇಡ್‍ ಸಂಬಂಧ ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ-ಹೆಚ್.ಎಸ್. ಸುಂದರೇಶ್ ವಾಗ್ದಾಳಿ.