ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೃಷಿ ಪಾಠ: ಶಿಕ್ಷಣ ಇಲಾಖೆ ಚಿಂತನೆ.

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೃಷಿಯ ಕಡೆಗೆ ಒಲವು ಕಡಿಮೆಯಾಗುತ್ತಿದ್ದು, ಕೃಷಿ ಬಿಟ್ಟು ಹಳ್ಳಿಗಳಿಂದ ಪಟ್ಟಣಕ್ಕೆ ದುಡಿಯಲು ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷಿಯತ್ತ ಯುವಜನತೆ ಮುಖ ಮಾಡಲು ಸಹಾಯವಾಗುವಂತೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೃಷಿ ಪಾಠ ಸೇರಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.

ಹೌದು, ಮುಂದಿನ ವರ್ಷದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೃಷಿಯನ್ನು ಪಠ್ಯವನ್ನಾಗಿ ಸೇರ್ಪಡೆ ಮಾಡಲು ಕರ್ನಾಟಕ  ಶಿಕ್ಷಣ ಇಲಾಖೆ ಪ್ರಯತ್ನ ನಡೆಸುತ್ತಿದೆ. ಆಯ್ದ ಕೆಲವು ಶಾಲೆಗಳಲ್ಲಿ ತೃತೀಯ ಭಾಷೆಯ ಬದಲು ಕೃಷಿಯನ್ನು ಒಂದು ವಿಷಯವನ್ನಾಗಿ ಪರಿಗಣಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ರಾಜ್ಯದಲ್ಲಿ 267 ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜುಗಳಲ್ಲಿ ಈಗಾಗಲೇ ರಾಷ್ಟ್ರೀಯ ವೃತ್ತಿ ಶಿಕ್ಷಣ ಕೌಶಲ ಚೌಕಟ್ಟು (ಎನ್ಎಸ್ಕ್ಯುಎಫ್) ಪಠ್ಯ ಅಳವಡಿಸಲಾಗಿದೆ. ಈ ಶಾಲೆಗಳಲ್ಲಿ 9ನೇ ತರಗತಿಯ ಬಳಿಕ ತೃತೀಯ ಭಾಷೆಯ ಬದಲು ಮಾಹಿತಿ ತಂತ್ರಜ್ಞಾನ, ಅಟೋಮೊಬೈಲ್, ಬ್ಯೂಟಿ ಮತ್ತು ವೆಲ್ ನೆಸ್ ಇತ್ಯಾದಿ ಕಲಿಯಲು ಅವಕಾಶ ನೀಡಲಾಗಿದೆ. ಇನ್ನು ಕೃಷಿಯೂ ಸೇರ್ಪಡೆಯಾಗಲಿದೆ. ಕೃಷಿ ಕ್ಷೇತ್ರದಲ್ಲಿ ಕೌಶಲದ ಅಗತ್ಯ ಮತ್ತು ಈ ವಲಯದಲ್ಲಿ ಉದ್ಯೋಗ ಅವಕಾಶಗಳನ್ನು ಗಮನಿಸಿ ಕೃಷಿ ಸೇರ್ಪಡೆಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಕೃಷಿಯಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಜತೆಗೆ ಕೃಷಿ ಸಂಬಂಧಿ ಉದ್ದಿಮೆಗಳು, ಕೃಷಿ ಯಂತ್ರೋಪಕರಣಗಳ ನಿರ್ವಹಣೆ, ಬಳಕೆಗೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಉದ್ಯೋಗ ಮಾರುಕಟ್ಟೆ ಸೃಷ್ಟಿಯಾಗಲಿದೆ. ಮಣ್ಣಿನ ಪರೀಕ್ಷೆ, ನೀರಿನ ನಿರ್ವಹಣೆ, ಯಾವ ಮಣ್ಣಿನಲ್ಲಿ ಯಾವ ಕೃಷಿ ಮಾಡಬೇಕು, ನೀರು ಎಷ್ಟು ಬಳಕೆ ಮಾಡಬೇಕು ಎಂಬಿತ್ಯಾದಿ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆರಂಭಿಕ ಹಂತದಲ್ಲಿ 29 ಸಂಯುಕ್ತ ಪದವಿ ಪೂರ್ವ ಕಾಲೇಜುಗಳಲ್ಲಿ ಕೃಷಿಯನ್ನು ಒಂದು ವಿಷಯವನ್ನಾಗಿ ಕಲಿಸಲು ತಯಾರಿ ನಡೆಸಲಾಗಿದೆ. 2024-25ರ ಸಾಲಿನಿಂದ ಕೃಷಿ ಚಟುವಟಿಕೆಯನ್ನು ಪಠ್ಯಕ್ಕೆ ಸೇರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳುವ ವಿದ್ಯಾರ್ಥಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮತ್ತು ಕೌಶಲ ಪರಿಷತ್ ಜಂಟಿ ಪ್ರಮಾಣಪತ್ರ ನೀಡುತ್ತದೆ. ಇದರ ಆಧಾರದಲ್ಲಿ ಸಾಲ ಸೌಲಭ್ಯ ದೊರೆಯುತ್ತದೆ.

 

Related posts

ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಮಾರಾಟಗಾರರಿಗೆ ಶಾಕ್: ಈ ನಿಯಮ ನಿಬಂದನೆ ಪಾಲನೆ ಕಡ್ಡಾಯ..

ನ.22ರಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟ ಪ್ರತಿಭಟನೆ.

ರಾಜ್ಯದಲ್ಲಿ ಅತಿವೃಷ್ಠಿ, ಬರಗಾಲ: ಬೇಳೆಕಾಳುಗಳ ಬೆಲೆಯಲ್ಲಿ ಏರಿಕೆ..