ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಬದಲಾದ ಪರೀಕ್ಷಾ ಪದ್ಧತಿ ಕುರಿತು ನ.8ರಂದು ಶೈಕ್ಷಣಿಕ ಕಾರ್ಯಾಗಾರ

ಶಿವಮೊಗ್ಗ: ಬದಲಾದ ಪರೀಕ್ಷಾ ಪದ್ಧತಿ ಕುರಿತು ನ.8ರಂದು ಬೆಳಿಗ್ಗೆ 10 ಗಂಟೆಗೆ ಶೈಕ್ಷಣಿಕ ಕಾಂರ್ಯಾಗಾರವನ್ನು ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಎನ್.ರಮೇಶ್ ಹೇಳಿದರು.
ಅವರು ಇಂದು ತಮ್ಮ ಶಾಲಾ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2023-24ನೇ ಸಾಲಿನ ಶೈಕ್ಷಣಿಕ ವರ್ಷದಿಂದ 8, 9 ಮತ್ತು 10ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರಲು ಶಿಕ್ಷಣ ಇಲಾಖೆ ಆದೇಶಿಸಿದೆ. ಈ ಹೊಸ ಪದ್ಧತಿ ಶಿಕ್ಷಕರಲ್ಲಿ ಮತ್ತು ಪೋಷಕರಲ್ಲಿ ಗೊಂದಲ ಹುಟ್ಟಿಸಿದೆ. ಈ ಗೊಂದಲಕ್ಕೆ ಉತ್ತರ ನೀಡುವ ಹಿನ್ನೆಲೆಯಲ್ಲಿ ಪ್ರಿಯದರ್ಶಿನಿ ಆಂಗ್ಲ ಪ್ರೌಢಶಾಲೆ ಮತ್ತು ಶಾಲಾ ಶಿಕ್ಷಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಈ ಮಹತ್ವದ ಶೈಕ್ಷಣಿಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಇದುವರೆಗೂ 8 ಮತ್ತು 9ನೇ ತರಗತಿಗಳಿಗೆ ರಾಜ್ಯಾದ್ಯಂತ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳಲ್ಲಿ ಶಾಲಾ ಹಂತದಲ್ಲಿ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿದ್ದವು. 10ನೇ ತರಗತಿಗೆ ಪ್ರತಿ ವರ್ಷ ಒಂದು ವಾರ್ಷಿಕ ಪರೀಕ್ಷೆಯನ್ನು ಮತ್ತು ಒಂದು ಪೂರಕ ಪರೀಕ್ಷೆಯನ್ನು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಮೂಲಕ ನಡೆಸಲಾಗುತ್ತಿತ್ತು. ಆದರೆ ಪುಸಕ್ತ ಸಾಲಿನಿಂದ 10ನೇ ತರಗತಿಗಳ ಜೊತೆಯಲ್ಲಿ 8 ಮತ್ತು 9ನೇ ತರಗತಿಗೂ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಮುಖಾಂತರ ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ಸರ್ಕಾರ ನಿರ್ಧರಿಸಿದೆ ಎಂದರು.
ಈ ಬದಲಾದ ಪರೀಕ್ಷಾ ಪದ್ಧತಿಯ ಕುರಿತು ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಮತ್ತು ಸಹ ಶಿಕ್ಷಕರಿಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಉದ್ದೇಶದಿಂದ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳು ಈ ಹಿಂದೆ ಎರಡು ಬಾರಿ ಮಾತ್ರ ನಡೆಯುತ್ತಿತ್ತು. ಈಗ ವರ್ಷದಲ್ಲಿ ಮೂರು ಬಾರಿ ನಡೆಯುತ್ತಿದೆ. ಮೊದಲ ಮತ್ತು ಎರಡನೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಕೂಡ ಉತ್ತೀರ್ಣರಾಗಿ ಶೈಕ್ಷಣಿಕ ವರ್ಷವನ್ನು ಹಾಳು ಮಾಡಿಕೊಳ್ಳಬಾರದು ಎಂಬ ಉದ್ದೇಶ ಇದರ ಹಿಂದೆ ಇದೆ ಎಂದರು.
ಶೈಕ್ಷಣಿಕ ಕಾರ್ಯಾಗಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ದೇಶಕ ಗೋಪಾಲಕೃಷ್ಣ, ಬೆಂಗಳೂರಿನ ವಿಜಯ ಕಾಲೇಜಿನ ನಿವೃತ್ತ ಪ್ರೊಫೆಸರ್ ಚಂದ್ರಕಾಂತ್ ಟಿ.ಎನ್., ಡಯಟ್ ಉಪನ್ಯಾಸಕ ಡಾ. ಎನ್. ಹರಿಪ್ರಸಾದ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪರಮೇಶ್ವರಪ್ಪ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ ಬಸವರಾಜಪ್ಪ ಮುಂತಾದವರು ಕಾರ್ಯಾಗಾರದಲ್ಲಿ ಹೆಚ್ಚಿನ ಮಾಹಿತಿ ನೀಡುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪನ್ಯಾಸಕರಾದ ರುದ್ರಸ್ವಾಮಿ, ರಂಗಪ್ಪ, ಮಹೇಶ್ವರಪ್ಪ, ಕಿಶೋರ್, ಜಯಣ್ಣ ಗೌಡ, ಉಪ ಪ್ರಾಂಶುಪಾಲ ಪ್ರವೀಣ್ ಇದ್ದರು.

Related posts

ಗಣಪತಿ ಮತ್ತು ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಒಟ್ಟಿಗೆ ಸೇರಿ ಆಚರಿಸೋಣ-ಶಾಸಕ ಎಸ್.ಎನ್. ಚನ್ನಬಸಪ್ಪ

ವಾಸವಿ ಶಾಲೆಯಲ್ಲಿ ಪರಿಸರಸ್ನೇಹಿ ಬಣ್ಣರಹಿತ ಮಣ್ಣಿನ ಗಣಪತಿ ಮಾರಾಟ.

ರಾಜಕಾಲುವೆ ಕಾಮಗಾರಿ ಪೂರ್ಣ: ಸಚಿವ ಬೈರತಿ ಸುರೇಶ್ ರಿಂದ ಉದ್ಘಾಟನೆ.