ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು ಈ ನಡುವೆ ಮಹತ್ವದ ರಾಜಕೀಯ ಚಟುವಟಿಕೆಯೊಂದು ನಡೆದಿದೆ. ಆಡಳಿತಾರೂಢ ಬಿಆರ್ಎಸ್ ಹಾಗೂ ಬಿಜೆಪಿ ತೊರೆದಿರುವ ಹಲವು ನಾಯಕರು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ.
ಇದೀಗ ಮಾಜಿ ಸಿಎಂ ವೈಎಸ್ ರಾಜಶೇಖರ್ ರೆಡ್ಡಿ ಅವರ ಪುತ್ರಿ ವೈಎಸ್ ಶರ್ಮಿಳಾ ಅವರು ಚುನಾವಣೆಯಿಂದ ಹಿಂದೆ ಸರಿದು ಕಾಂಗ್ರೆಸ್ ಬೆಂಬಲ ಘೋಷಿಸಿದ್ದಾರೆ. ವೈಎಸ್ಆರ್ಟಿಪಿ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ಸ್ಪರ್ಧಿಸುವುದಿಲ್ಲ. ನಾವು ವಿಧಾನಸಭಾ ಚುನಾವಣೆಯನ್ನು ತ್ಯಜಿಸಿದ್ದೇವೆ. ಕಾಂಗ್ರೆಸ್ಗೆ ಬೇಷರತ್ ಬೆಂಬಲ ನೀಡುತ್ತೇವೆ ಎಂದು ಘೋಷಿಸಿದ್ದಾರೆ.
ಈ ಹಿಂದೆ ಅಂದರೆ ಅಕ್ಟೋಬರ್ 12 ರಂದು ವೈಎಸ್ಆರ್ಟಿಪಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿತ್ತು. ಆಗ ಅವರ ತಾಯಿ ವಿಜಯಮ್ಮ ಕೂಡ ಸಿಕಂದರಾಬಾದ್ನಿಂದ ಸ್ಪರ್ಧಿಸುತ್ತಾರೆ ಎಂದು ಊಹಿಸಲಾಗಿತ್ತು.
ಶರ್ಮಿಳಾ ಅವರು ಕಾಂಗ್ರೆಸ್ನೊಂದಿಗೆ ವಿಲೀನದ ಮಾತುಕತೆ ನಡೆಸಿದ್ದರು. ಆದರೆ, ಕಾಂಗ್ರೆಸ್ ಪಕ್ಷವು ಇದಕ್ಕೆ ಸಮ್ಮತಿ ನೀಡಿರಲಿಲ್ಲ. ಆ ನಂತರ ತೆಲಂಗಾಣದ ಚುನಾವಣೆಯಲ್ಲಿ ತಮ್ಮ ಪಕ್ಷವು ಸ್ಪರ್ಧಿಸಲಿದೆ ಎಂದು ಶರ್ಮಿಳಾ ಘೋಷಣೆ ಮಾಡಿದ್ದರು. ಪಕ್ಷದ ಅಧ್ಯಕ್ಷೆ ವೈಎಸ್ ಶರ್ಮಿಳಾ ಖಮ್ಮಂನ ಪಲೈರ್ನಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷವು ಘೋಷಿಸಿತ್ತು.
ಕೆಲವು ಕಾಂಗ್ರೆಸ್ ನಾಯಕರು ಅವರನ್ನು ಪಕ್ಷಕ್ಕೆ ಸ್ವಾಗತಿಸಲು ಸಿದ್ಧರಾಗಿದ್ದರೆ, ಟಿಪಿಸಿಸಿ ಮುಖ್ಯಸ್ಥ ಎ ರೇವಂತ್ ರೆಡ್ಡಿ ಇದಕ್ಕೆ ಒಪ್ಪಿರಲಿಲ್ಲ. ಶರ್ಮಿಳಾ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುವುದಾದರೆ, ಆಂಧ್ರದಲ್ಲಿ ಕೆಲಸ ಮಾಡಲಿ ಎಂದು ಅವರು ಹೇಳಿದ್ದರು. ಎಐಸಿಸಿ ಹಿರಿಯ ಸದಸ್ಯರೊಂದಿಗೆ ನಡೆದ ಮಾತುಕತೆಗಳ ಹೊರತಾಗಿಯೂ, ಶರ್ಮಿಳಾ ಅವರು ವಿಲೀನ ಒಪ್ಪಂದವನ್ನು ಸಾಧಿಸಲು ಸಾಧ್ಯವಾಗಲಿಲ್ಲ.
ತೆಲಂಗಾಣ ಚುನಾವಣೆಯು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿ ಆಡಳಿತಾರೂಢ ಬಿಆರ್ಎಸ್ ಹಾಗೂ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಹಲವು ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ಗೆಲುವು ಸಾಧಿಸುವ ಸಾಧ್ಯತೆಗಳು ಹೆಚ್ಚಿವೆ.
ಕರ್ನಾಟಕದಂತೆ ತೆಲಂಗಾಣದಲ್ಲಿಯೂ ಕಾಂಗ್ರೆಸ್ ಪಕ್ಷ ಹಲವು ಗ್ಯಾರಂಟಿಗಳನ್ನು ಘೋಷಿಸಿದೆ. ಇದು ಗ್ರಾಮೀಣ ಭಾಗದ ಜನರು ಹಾಗೂ ಮಹಿಳೆಯರನ್ನು ಸೆಳೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿದೆ.