ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ರಾಜ್ಯದ ಎಲ್ಲಾ ನಗರದಲ್ಲಿ ಶೌಚಾಲಯ; ಹೈಕೋರ್ಟ್ ಗೆ ಸರ್ಕಾರ ಅಫಿಡವಿಟ್ ಸಲ್ಲಿಕೆ…

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಎರಡು ವರ್ಷದಲ್ಲಿ ಹೆಚ್ಚಾಗಲಿರುವ ಜನಸಂಖ್ಯೆ ಹಾಗೂ ಶೇ.5ರಷ್ಟು ಫ್ಲೋಟಿಂಗ್ ಪಾಪ್ಯುಲೇಷನ್ಗೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶೌಚಾಲಯ ಮತ್ತು ಮೂತ್ರಾಲಯಗಳನ್ನು ನಿರ್ಮಿಸಲು ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ ಎಂದು ಕರ್ನಾಟಕ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.

ಸ್ವಚ್ ಭಾರತ್ ಮಿಷನ್ ಅಡಿ ರಾಜ್ಯಾದ್ಯಂತ 310 ನಗರ ಸ್ಥಳೀಯ ಸಂಸ್ಥೆಗಳಲ್ಲಿ 3,081 ಹೊಸ ಸಾರ್ವಜನಿಕ ಶೌಚಾಲಯಗಳು, 2,725 ಹೊಸ ಸಾರ್ವಜನಿಕ ಮೂತ್ರಾಲಯಗಳು ಮತ್ತು 1,223 ಹೊಸ ಸಾರ್ವಜನಿಕ ಇ-ಶೌಚಾಲಯಗಳನ್ನು ವಿವಿಧ ಪ್ರವಾಸಿ ತಾಣಗಳಲ್ಲಿ ನಿರ್ಮಿಸಲಾಗುವುದು ಎಂದು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್ಗೆ ತಿಳಿಸಿದೆ. ಇವುಗಳಲ್ಲಿ 600 ಸಾರ್ವಜನಿಕ ಶೌಚಾಲಯಗಳನ್ನು ಬೆಂಗಳೂರು ನಗರದಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದೆ.

ಈ ಸಾರ್ವಜನಿಕ ಶೌಚಾಲಯ ಬ್ಲಾಕ್ ಗಳ ನಿರ್ಮಾಣಕ್ಕೆ ಅಂದಾಜು 37.22 ಕೋಟಿ ರೂ., ಮೂತ್ರ ವಿಸರ್ಜನೆಯ ಬ್ಲಾಕ್ಗಳ ನಿರ್ಮಾಣಕ್ಕೆ 8.72 ಕೋಟಿ ರೂ. ಮತ್ತು ಇ-ಶೌಚಾಲಯಗಳಿಗೆ 30.58 ಕೋಟಿ ರೂ. ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ. 600 ಶೌಚಾಲಯಗಳನ್ನು ನಿರ್ಮಿಸಲು ಅಂದಾಜು ವೆಚ್ಚ 9 ಕೋಟಿ ರೂ. ಆಗಲಿದ್ದು, ಪ್ರತಿ ಶೌಚಾಲಯಕ್ಕೆ 1.5 ಲಕ್ಷ ರೂ. ವೆಚ್ಚವಾಗಲಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಜಯ್ ನಾಗಭೂಷಣ ಎಂ.ಎನ್. ತಿಳಿಸಿದ್ದಾರೆ.

ಬೆಂಗಳೂರಿನ ಲೆಟ್ಜ್ಕಿಟ್ ಫೌಂಡೇಶನ್ ಸಾಕಷ್ಟು ಸಾರ್ವಜನಿಕ ಶೌಚಾಲಯಗಳ ಕೊರತೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಿಹಿಡಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಅಫಿಡವಿಟ್ ಸಲ್ಲಿಸಲಾಯಿತು.

ರಾಜ್ಯದಲ್ಲಿ ಪ್ರಸ್ತುತ 312 ನಗರ ಸ್ಥಳೀಯ ಸಂಸ್ಥೆಗಳಿವೆ. ಅವುಗಳಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕವಾಗಿ ತಲಾ 6 ರಿಂದ 7 ಸೀಟ್ಗಳಂತೆ ಒಟ್ಟು 9,167 ಸೀಟ್ಗಳ ಸಾಮರ್ಥ್ಯದ 1,360 ಸಾರ್ವಜನಿಕ ಶೌಚಾಲಯಗಳಿವೆ.

ಕೇಂದ್ರ ಸಾರ್ವಜನಿಕ ಆರೋಗ್ಯ ಪರಿಸರ ಸಂಘಟನೆ ಹಾಗೂ ಸ್ವಚ್ಛ ಭಾರತ್ ಮಿಷನ್ ಮಾರ್ಗಸೂಚಿಗಳಂತೆ ಪ್ರತಿ ನಗರ ಸ್ಥಳೀಯ ಸಂಸ್ಥೆಗಳ ಒಟ್ಟು ಜನಸಂಖ್ಯೆಯಲ್ಲಿ ಶೇ.5ರಷ್ಟು, ಅಂದರೆ 250 ಮಂದಿಯನ್ನು ಬಂದು ಹೋಗುವ ಜನಸಂಖ್ಯೆಯೆಂದು ಪರಿಗಣಿಸಬೇಕು. ಆ 250 ಜನಸಂಖ್ಯೆಗೆ ಒಂದು ಶೌಚಾಲಯ/ ಮೂತ್ರಾಲಯ ಒದಗಸಲಾಗುವುದು ಎಂದು ಹೇಳಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ 2011ರ ಜನಸಂಖ್ಯೆ ಪ್ರಕಾರ ರಾಜ್ಯದ ನಗರ ಜನಸಂಖ್ಯೆ1.57 ಕೋಟಿ ಇದ್ದು, 2026ರಲ್ಲಿ ಈ ಜನಸಂಖ್ಯೆ 2.01 ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಶೇ.5ರಂತೆ ಬಂದು ಹೋಗುವ ಜನಸಂಖ್ಯೆ10 ಲಕ್ಷ ಆಗಲಿದೆ. ಈ ಶೇ.5ರಷ್ಟು ಬಂದು ಹೋಗುವ ಜನಸಂಖ್ಯೆ ಆಧರಿಸಿ ಪ್ರತಿ 250 ಮಂದಿಗೆ ಸಾರ್ವಜನಿಕ ಶೌಚಾಲಯದ ಒಂದು ಸೀಟ್ ಒದಗಿಸಬೇಕಾಗಿದೆ.

ಅದಕ್ಕಾಗಿ, 3,081 ಸೀಟ್ಗಳ 384 ಹೊಸ ಸಾರ್ವಜನಿಕ ಶೌಚಾಲಯಗಳನ್ನು 37.22 ಕೋಟಿ ರೂ. ವೆಚ್ಚದಲ್ಲಿ , 2,726 ಮೂತ್ರಾಲಯಗಳಿರುವ 635 ಮೂತ್ರಾಲಯ ಬ್ಲಾಕ್ಗಳನ್ನು 8.72 ಕೋಟಿ ರೂ. ವೆಚ್ಚದಲ್ಲಿ ಹಾಗೂ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಹೆಚ್ಚು ಜನ ಬಂದು ಹೋಗುವ ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶಗಳಲ್ಲಿ 1,223 ಸೀಟ್ಗಳ 199 ಇ-ಶೌಚಾಲಯಗಳನ್ನು 30.58 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಲಾಗಿದೆ.

2011 ರ ಜನಗಣತಿಯ ಪ್ರಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊರತುಪಡಿಸಿ, ಕರ್ನಾಟಕದ ನಗರ ಜನಸಂಖ್ಯೆ 1,57,84,378 ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ. ಜನಸಂಖ್ಯೆಯ ಆಧಾರದ ಮೇಲೆ, ರಾಜ್ಯವು 250 ವ್ಯಕ್ತಿಗಳಿಗೆ ಒಂದು ಕ್ಲೋಸೆಟ್/ಶೌಚಾಲಯದ ಆಸನವನ್ನು ಒದಗಿಸಬೇಕು. ಈಗಿರುವ ಶೌಚಾಲಯಗಳನ್ನು ಮೇಲ್ದರ್ಜೆಗೇರಿಸಲು ಮತ್ತು ನಿರ್ವಹಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ.

ರಸ್ತೆಗಳಲ್ಲಿ ನಡೆಯುವ ಮಹಿಳೆಯರಿಗೆ ಶೌಚಾಲಯ, ಮೂತ್ರಾಲಯ, ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ ಸಮಗ್ರ ಯೋಜನೆ ರೂಪಿಸಲು ಹಾಗೂ ನ್ಯಾಯಾಲಯದ ನಿರ್ದೇಶನದಂತೆ ಸಮಿತಿಯನ್ನು ರಚಿಸಲು ಎಲ್ಲ ನಗರಸಭೆಗಳಿಗೆ ಸೂಚಿಸಲಾಗಿದೆ ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ.

 

Related posts

ದೀಪಾವಳಿ ಹಬ್ಬದ ಎಫೆಕ್ಟ್ : ವಾಯುಮಟ್ಟ ಸೂಚ್ಯಂಕದಲ್ಲಿ ಹೆಚ್ಚಳ.

ಸರ್ಕಾರದ ನಿರ್ಧಾರ: ಈ ವರ್ಷ ‘ಶಿಕ್ಷಕ ವರ್ಗಾವಣೆ’ ಇಲ್ಲ:

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರಿಗೆ ‘Z’ ಶ್ರೇಣಿ ಭದ್ರತೆ.