ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ರಾಜ್ಯ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ನಿವೃತ್ತಿ; ಮುಂದಿನ ಸಿಎಸ್ ಯಾರು? ಹಲವರ ಹೆಸರು ಮುನ್ನೆಲೆಗೆ…

ಬೆಂಗಳೂರು: ಈ ತಿಂಗಳ ಅಂತ್ಯದ ವೇಳೆಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇವೆಯಿಂದ ನಿವೃತ್ತರಾಗಲಿದ್ದು, ಮುಂದಿನ ಮುಖ್ಯಕಾರ್ಯದರ್ಶಿ ಯಾರು ಎಂಬ ಪ್ರಶ್ನೆ ಉದ್ಬವವಾಗಿದೆ.

ಮುಂದಿನ ಮುಖ್ಯ ಕಾರ್ಯದರ್ಶಿ ಯಾರೆಂಬ ಎಂಬ ಚರ್ಚೆ ಶುರುವಾಗಿದ್ದು ಹಲವು ಹಿರಿಯ ಐಎಎಸ್ ಅಧಿಕಾರಿಗಳ ಹೆಸರು ಮುನ್ನೆಲೆಗೆ ಬಂದಿದೆ.  2022ರ ಮೇ 31ರಂದು ವಂದಿತಾ ಶರ್ಮಾ ಅವರು ಅಧಿಕಾರ ವಹಿಸಿಕೊಂಡಿದ್ದರು. ರಾಜ್ಯದ 4ನೇ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಅವರು  ಈ ತಿಂಗಳ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮುಂದಿನ 6 ತಿಂಗಳ ಕಾಲ ವಂದಿತಾ ಶರ್ಮಾ ಅವರ ಅವಧಿಯನ್ನು ವಿಸ್ತರಣೆ ಮಾಡುವ ಸಾಧ್ಯತೆಯೂ ಇದೆ ಎಂಬ ಚರ್ಚೆಗಳು ನಡೆಯುತ್ತಿದೆ. ಇಲ್ಲವೇ ಸೇವಾ ಜೇಷ್ಠತೆಯ ಆಧಾರದ ಮೇಲೆ ಹೊಸ ಅಧಿಕಾರಿ ನೇಮಕ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವಧಿ ಮುಕ್ತಾಯಗೊಳ್ಳುವ ಕುರಿತು ಚರ್ಚೆ ನಡೆಯಲಿದೆ. ಸಚಿವರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.

ವಂದಿತಾ ಶರ್ಮಾ ಅವರ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯಲ್ ನೇಮಕಗೊಳ್ಳಲಿದ್ದಾರೆ ಎಂಬ ಸುದ್ದಿ ಹರಡಿದೆ. ವಂದಿತಾ ಶರ್ಮಾ ಅವರನ್ನೇ ಆರು ತಿಂಗಳು ಮುಂದುವರೆಸಲಾಗುತ್ತದೆ ಎಂದೂ ಹೇಳಲಾಗುತ್ತಿದೆ. ಸೇವೆಯನ್ನು ವಿಸ್ತರಣೆ ಮಾಡಲು ಸರ್ಕಾರಕ್ಕೆ ಅಧಿಕಾರ ಸಹ ಇದೆ.

ರಜನೀಶ್ ಗೋಯಲ್ 1986ನೇ ಬ್ಯಾಚ್ ಐಎಎಸ್ ಅಧಿಕಾರಿ. ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿರುವ ಅವರು ಮುಖ್ಯಮಂತ್ರಿಗಳ ಕಛೇರಿಯಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಜೇಷ್ಠತೆ ಆಧಾರದ ಮೇಲೆ ರಜನೀಶ್ ಗೋಯಲ್ ನೇಮಕ ಮಾಡುವ ಸಾಧ್ಯತೆ ಇದೆ.

ವಂದಿತಾ ಶರ್ಮಾ ಅವರಿಂದ ತೆರವಾಗುವ ಹುದ್ದೆಗೆ ಐಎಎಸ್ ಅಧಿಕಾರಿಗಳಾದ ಅಜಯ್ ಸೇಠ್, ವಿ. ಮಂಜುಳಾ, ರಾಕೇಶ್ ಸಿಂಗ್ ಅವರ ಹೆಸರು ಸಹ ಕೇಳಿ ಬರುತ್ತಿದೆ. ಯಾರನ್ನು ನೇಮಕ ಮಾಡಲಾಗುತ್ತದೆ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.

2022ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಪಿ. ರವಿ ಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದರು. ಅವರ ನಿವೃತ್ತಿ ನಂತರ ತೆರವಾದ ಸ್ಥಾನಕ್ಕೆ ವಂದಿತಾ ಶರ್ಮಾ ಅವರನ್ನು ನೇಮಕ ಮಾಡಲಾಗಿತ್ತು. 1986ನೇ ಬ್ಯಾಚ್ ಐಎಎಸ್ ಅಧಿಕಾರಿ ವಂದಿತಾ ಶರ್ಮಾ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾಗಿದ್ದರು.

ವಂದಿತಾ ಶರ್ಮಾ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾದ 4ನೇ ಮಹಿಳೆಯಾಗಿದ್ದಾರೆ. ಮೊದಲ ಮುಖ್ಯ ಕಾರ್ಯದರ್ಶಿಯಾಗಿ ತೆರೇಸಾ ಭಟ್ಟಾಚಾರ್ಯ, ಬಳಿಕ ಮಾಲಿತಿ ದಾಸ್ 2017ರಲ್ಲಿ ಕೆ. ರತ್ನಪ್ರಭಾ ಅವರು ಸರ್ಕಾರದ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು. ವಂದಿತಾ ಶರ್ಮಾ ಅವರ ಪತಿ ಐಎಸ್ಎನ್ ಪ್ರಸಾದ್ ಸಹ ಐಎಎಸ್ ಅಧಿಕಾರಿ, ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

 

Related posts

ಅಂತೂ ಮದ್ಯಪ್ರಿಯರಿಗೊಂದು ಗುಡ್ ನ್ಯೂಸ್: ಏನು ಗೊತ್ತೆ..?

ರಾಜ್ಯ ಸರ್ಕಾರ  ಡಿಎಂಕೆ ಜೊತೆ ಚರ್ಚಿಸಿ ಕಾವೇರಿ ನದಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಿ- ಮಾಜಿ ಸಿಎಂ ಬಿಎಸ್ ವೈ ಸಲಹೆ.

ಮಾಜಿ ಸಿಎಂ.ದಿ. ಎಸ್ ಬಂಗಾರಪ್ಪನವರ ಹುಟ್ಟು ಹಬ್ಬ: ಹಸಿರು ಬಂಗಾರ DRS -ಪಾರ್ಕ್ “ನ ಉದ್ಘಾಟನೆ- ಪ್ರಶಾಂತ್ ದೊಡ್ಡಮನೆ