ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಬಡವರ ಕಲ್ಯಾಣಕ್ಕೆ ಇಂದಿರಾ ಗಾಂಧಿಯವರ 20 ಅಂಶದ ಕಾರ್ಯಕ್ರಮಗಳೇ ತಳಹದಿ-ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್.

ಶಿವಮೊಗ್ಗ: ಬಡವರ ಕಲ್ಯಾಣಕ್ಕಾಗಿ ಎಲ್ಲಾ ಸರ್ಕಾರಗಳು ಇಂದಿರಾ ಗಾಂಧಿಯವರ 20 ಅಂಶದ ಕಾರ್ಯಕ್ರಮಗಳನ್ನೇ ತಳಹದಿಯನ್ನಾಗಿ ಇಟ್ಟುಕೊಂಡಿವೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್ ಹೇಳಿದರು.
ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿಯವರ 39ನೇ ಪುಣ್ಯಸ್ಮರಣೆ ಹಾಗೂ ಮಾಜಿ ಉಪಪ್ರಧಾನಿ ದಿ. ಸರ್ದಾರ್ ವಲ್ಲಭ ಬಾಯಿ ಪಟೇಲ್‍ರವರ 148ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಇಂದಿರಾಗಾಂಧಿಯವರು ಬಡವರ ಕಣ್ಮಣಿಯಾಗಿದ್ದಾರೆ. ಪ್ರಪಂಚ ಕಂಡ ಅತ್ಯಂತ ಪ್ರಭಾವಿ ಮಹಿಳಾ ಪ್ರಧಾನಿಯಾಗಿದ್ದವರು. ದೇಶಕ್ಕಾಗಿಯೇ ತಮ್ಮ ಪ್ರಾಣ ಕೊಟ್ಟವರು. ಅವರ ಅಧಿಕಾರದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ ಅತ್ಯಂತ ಮಹತ್ವ ಪಡೆದಿದೆ. ಅವರ ಆದರ್ಶಗಳನ್ನು ನಾವು ಬೆಳೆಸಿಕೊಳ್ಳೋಣ ಎಂದರು.
ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಮಾತನಾಡಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಉಕ್ಕಿನ ಮನುಷ್ಯ ಎಂದು ಜನಪ್ರಿಯವಾಗಿದ್ದರೆ ಇಂದಿರಾಗಾಂಧಿಯವರು ಬಡವರ ಕಣ್ಮಣಿ ಎಂದೇ ಹೆಸರಾದವರು. ಸ್ವತಂತ್ರ ಭಾರತದಲ್ಲಿ ಅನೇಕ ಸಮಸ್ಯೆಗಳಿದ್ದವು. ಅವುಗಳನ್ನು ಬಗೆಹರಿಸಿದ ಕೀರ್ತಿ ಇಂದಿರಾಗಾಂಧಿಯವರಿಗೆ ಸಲ್ಲುತ್ತದೆ. ಅವರೊಬ್ಬ ದಿಟ್ಟ ಮಹಿಳೆ. ಅವರು ತೆಗೆದುಕೊಂಡ ತೀರ್ಮಾನಗಳು ದೇಶದ ಮತ್ತು ಬಡ ಜನರ ಅಭಿವೃದ್ಧಿಗೆ ನಾಂದಿಯಾಗಿತ್ತು ಎಂದರು.
ಮಾಜಿ ಶಾಸಕ ಹಾಗೂ ಕಾಂಗ್ರೆಸ ಹಿರಿಯ ಮುಖಂಡ ಹೆಚ್.ಎಂ. ಚಂದ್ರಶೇಖರಪ್ಪ ಮಾತನಾಡಿ, ಇಂದಿರಾಗಾಂಧಿಯವರಿಗೆ ದೂರದೃಷ್ಟಿ ಇತ್ತು. ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ನೀಡಿದವರು. ಅವರಿಲ್ಲದೆ ನಮಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆದರೆ ಸಾಕು. ಪಕ್ಷ ಗಟ್ಟಿಯಾಗುತ್ತದೆ. ಆದರೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇಂತಹ ಜನ್ಮದಿನಾಚರಣೆ ಅಥವಾ ಪುಣ್ಯಸ್ಮರಣೆಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಸಡ್ಡೆ ಇರುತ್ತದೆ ಎಂದರು.
ಕಾಂಗ್ರೆಸ್ ಮುಖಂಡರಾದ ಎಸ್.ಪಿ. ಶೇಷಾದ್ರಿ, ಮಹಾನಗರ ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡ ಮುಂತಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಆಡಳಿತ ಮೇಲುಸ್ತುವಾರಿ ಸಿ.ಎಸ್. ಚಂದ್ರಭೂಪಾಲ್, ಜಿ.ಡಿ. ಮಂಜುನಾಥ್, ಎನ್.ಡಿ. ಪ್ರವೀಣ್‍ಕುಮಾರ್, ಯು. ಶಿವಾನಂದ್, ದೇವಿಕುಮಾರ್, ಪ್ರೇಮಾ, ಹಸನ್‍ಆಲಿಖಾನ್‍ಅಫ್ರಿದಿ ಮುಂತಾದವರಿದ್ದರು.

Related posts

ಸರ್ಕಾರಿ ಜಾಗಗಳಲ್ಲಿ ಅಂಗನವಾಡಿಗಳನ್ನು ನಿರ್ಮಿಸಬೇಕು:ಶಿವಮೊಗ್ಗ ಪೀಸ್ ಆರ್ಗನೈಜೇಷನ್ ಮನವಿ

ಕಥಾ ಕಮ್ಮಟಗಳು ಪ್ರತಿಭೆಗಳನ್ನು ಅನಾವರಣಗೊಳಿಸುತ್ತವೆ-ಬಿ.ಕೃಷ್ಣಪ್ಪ

ಜಾತಿ ಜನಗಣತಿ ವರದಿ ಮೂಲಪ್ರತಿಯೇ ಕಾಣೆ : ರಾಜ್ಯ ಸರ್ಕಾರಕ್ಕೆ ಜಯಪ್ರಕಾಶ್ ಹೆಗ್ಡೆ ಪತ್ರ.