ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಹೆಸರಾಯಿತು ಕರ್ನಾಟಕ-50 ಸಂಭ್ರಮವನ್ನು ಐದು ವಿಶೇಷ ಪ್ರಶಸ್ತಿಗಳ ಮೂಲಕ ಆಚರಣೆ-ನಾಡೋಜ ಡಾ.ಮಹೇಶ ಜೋಶಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕದ  ಏಕೀಕರಣ ಮತ್ತು ನಾಮಕರಣದಲ್ಲಿ ಪ್ರಮುಖ ಪಾತ್ರವಹಿಸಿದೆ. ಪರಿಷತ್ತು ಹುಟ್ಟಿದ್ದೇ ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಲ್ಲಿಂದ ಮುಂದೆ ಪ್ರತಿ ಅಖಿಲ ಭಾರತ ಸಮ್ಮೇಳನಗಳೂ ಈ ನಿಟ್ಟಿನಲ್ಲಿ ಇಟ್ಟ ದಿಟ್ಟ ಹೆಜ್ಜೆಗಳೇ ಆಗಿವೆ ಈ ಹಿನ್ನೆಲೆಯಲ್ಲಿ ‘ಹೆಸರಾಯಿತು ಕರ್ನಾಟಕ’ದ ಸುವರ್ಣ ಸಂಭ್ರಮವನ್ನು ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು. ಅವರಿಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.

ಕರ್ನಾಟಕ ಎಂಬ ಹೆಸರಿನ ಸುವರ್ಣ ಸಂಭ್ರಮದ ಈ ಸಂದರ್ಭದಲ್ಲಿ ಐದು ಮಹತ್ವದ ಪ್ರಶಸ್ತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನೀಡಲು ತಾತ್ವಿಕವಾಗಿ ನಿರ್ಧರಿಸಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದರು. ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳ ಹಿರಿಮೆಗೆ ಅದರಲ್ಲಿಯೂ ಮುಖ್ಯವಾಗಿ ಏಕೀಕರಣಕ್ಕೆ ದುಡಿದ ಐವತ್ತು ವ್ಯಕ್ತಿ-ಸಂಘ ಸಂಸ್ಥೆಗಳನ್ನು ಗುರುತಿಸಿ ಈ ಪುರಸ್ಕಾರವನ್ನು  ನೀಡಲಾಗುವುದು. ಇದನ್ನು ಐವತ್ತು ಗಣ್ಯರು ನೀಡಲಿದ್ದು ಐವತ್ತು ಸಾವಿರಕ್ಕೂ ಹೆಚ್ಚು ಜನ ಕನ್ನಡಿಗರು ಈ ಸಂಭ್ರಮದಲ್ಲಿ ಭಾಗವಹಿಸುವಂತೆ ಮಾಡಲಾಗುವುದು ಎಂದು ಅವರು ತಿಳಿಸಿ ಈ ಕುರಿತ ಆಯ್ಕೆಗೆ ಉನ್ನತ ಮಟ್ಟದ ಸಮಿತಿಯನ್ನು ನೇಮಕ ಮಾಡಿ ಯಾವುದೇ ಅರ್ಜಿ-ಮರ್ಜಿ-ಶಿಫಾರಸ್ಸಿಗೆ ಅವಕಾಶವಿಲ್ಲದಂತೆ ಪಾರದರ್ಶಕವಾಗಿ ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದರು

ಕರ್ನಾಟಕ ಏಕೀಕರಣಕ್ಕೆ ಬಲಿದಾನ ಮಾಡಿದ ಹುತಾತ್ಮ ರಂಜಾನ್ ಸಾಬ್ ಅವರ ಹೆಸರಿನಲ್ಲಿ ವಿಶೇಷ ಪ್ರಶಸ್ತಿಯನ್ನು ನೀಡಲಾಗುವುದು ಎಂದು ನಾಡೋಜ ಡಾ.ಮಹೇಶ ಜೋಶಿ ಇದೇ ಸಂದರ್ಭದಲ್ಲಿ ವಿವರವನ್ನು ನೀಡಿದರು.   1953ರ ಸೆಪ್ಟಂಬರ್ 30ರ ರಾತ್ರಿ ಬಳ್ಳಾರಿಯ ಪಿಂಜಾರ ಓಣಿಯಲ್ಲಿ  ಅದ್ದೂರಿ ರಾಜ್ಯೋತ್ಸವದ ಸಿದ್ದತೆ ನಡೆದಿತ್ತು. ಆಗ ಕನ್ನಡ ವಿರೋಧಿಗಳು ದಾಳಿ ನಡೆಸ ಬಹುದು ಎಂಬ ಸುದ್ದಿ ತಿಳಿದ ರಂಜಾನ್ ಸಾಹೇಬರು ಕಾವಲು ಕಾಯಲು ರಾತ್ರಿ ಉತ್ಸವದ ಮಂಟಪದಲ್ಲಿಯೇ ಮಲಗಿದ್ದರು. ಅಂದಿನ ರಾತ್ರಿ ಅವರ ಮೇಲೆ ಆಸಿಡ್ ದಾಳಿ ನಡೆಯಿತು. ಅವರನ್ನು ಕೂಡಲೇ ಚಿಕಿತ್ಸಾಲಯಕ್ಕೆ  ಸೇರಿಸಿದರೂ ಅದು ಫಲಕಾರಿಯಾಗದೆ ರಂಜಾನ್ ಸಾಬ್ ಅಸು ನೀಗಿದರು. ಅದು ಏಕೀಕರಣದ ಹೋರಾಟದಲ್ಲಿ ಒಂದು ಕಪ್ಪು ಚುಕ್ಕೆ ಎನ್ನಿಸಿ ಕೊಂಡಿತು. ಕರ್ನಾಟಕ ಎನ್ನುವ ಹೆಸರನ್ನು ನಾವು ಸಂಭ್ರಮಿಸುವಾಗ  ಅದಕ್ಕೆ ಬಲಿದಾನ ಮಾಡಿದ ರಂಜಾನ್ ಸಾಬ್ ಅವರ ಹೆಸರನ್ನು ಚಿರಂತನವಾಗಿಡಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ ಎಂದು ನಾಡೋಜ ಡಾ.ಮಹೇಶ ಜೋಶಿ  ತಿಳಿಸಿದರು.

ಭಾವೈಕ್ಯತೆಗೆ ಹೆಸರಾದ ನಮ್ಮ ನಾಡಿನ ಹಿರಿಮೆಯನ್ನು ಎತ್ತಿ ಹಿಡಿಯಲು ಭಾವೈಕ್ಯತೆಗೆ ಹೆಸರಾದ ಸಂತ ಶಿಶುನಾಳ ಶರೀಫರು  ಮತ್ತು ಗುರು ಗೋವಿಂದ ಭಟ್ಟರ ಹೆಸರಿನಲ್ಲಿ ಪುರಸ್ಕಾರವನ್ನು ನೀಡಲಾಗುವುದು ಎಂದ ನಾಡೋಜ ಡಾ.ಮಹೇಶ ಜೋಶಿಯವರು ಈ ಮೂಲಕ ‘ಸರ್ವ ವಜನಾಂಗದ ಶಾಂತಿಯ ತೋಟ’ ಎಂಬ ಕುವೆಂಪು ಅವರ ಕವಿವಾಣಿಯ ಆಶಯವನ್ನು ಎತ್ತಿ ಹಿಡಿಯಲಾಗುವುದು ಎಂದು  ನಾಡೋಜ ಡಾ.ಮಹೇಶ ಜೋಶಿ ಹೇಳಿದರು

ಕನ್ನಡಕ್ಕೆ ಮೊದಲ ನಿಘಂಟನ್ನು ನೀಡಿದ ಫರ್ಡಿನೆಂಡ್ ಕಿಟಲ್ ಅವರ ಹೆಸರಿನಲ್ಲಿ ವಿಶೇಷ ಪ್ರಶಸ್ತಿಯನ್ನು  ನೀಡಲಾಗುವುದು ಎಂದು ಮಾಹಿತಿ ನೀಡಿದ ನಾಡೋಜ ಡಾ.ಮಹೇಶ ಜೋಶಿಯವರು. ಇದರ ಜೊತೆಯಲ್ಲಿ ವಿದೇಶದಲ್ಲಿ ನೆಲೆಸಿ ಕನ್ನಡಕ್ಕಾಗಿ ಅನುಪಮ ಸೇವೆ ಸಲ್ಲಿಸುತ್ತಿರುವ ಕನ್ನಡಿಗರಿಗೆ ವಿಶೇಷ ಪುರಸ್ಕಾರ ನೀಡಲಾಗುವುದು ಎಂದು ಐದು ಪ್ರಶಸ್ತಿಗಳ ವಿವರಗಳನ್ನು ನೀಡಿ. ಇದರ ಪೂರ್ಣ ಸ್ವರೂಪವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.

ಇದರ ಜೊತೆಗೆ ಕನ್ನಡ ಕವಿಗಳ, ಕನ್ನಡ ಪ್ರೇಮದ, ಕರ್ನಾಟಕದ ಹಿರಿಮೆಯನ್ನು ಹೇಳುವ ಕನ್ನಡ ಗೀತೆಗಳ ವಿಶೇಷ ಕಾರ್ಯಕ್ರಮ ‘ನಾವಾಡುವ ನುಡಿಯೇ ಕನ್ನಡ ನುಡಿ’ ಕಾರ್ಯಕ್ರಮವನ್ನು ನಾಡಿನೆಲ್ಲೆಡೆ ಏರ್ಪಡಿಸಲಾಗುವುದು, ಕನ್ನಡ-ಕನ್ನಡಿಗ-ಕರ್ನಾಟಕದ ಕುರಿತ ಅರಿವನ್ನು ಹೆಚ್ಚಿಸುವ ರಸಪ್ರಶ್ನೆ ಕಾರ್ಯಕ್ರಮವನ್ನು ಗ್ರಾಮ, ತಾಲ್ಲೊಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಏರ್ಪಡಿಸಲಾಗುವುದು ಎಂದು ತಿಳಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಇಡೀ ವರ್ಷ ‘ಹೆಸರಾಯಿತು ಕರ್ನಾಟಕ’ದ ಸುವರ್ಣ ಸಂಭ್ರಮ ನಾಡಿನೆಲ್ಲೆಡೆ ಸದಾ ಹಸಿರಾಗುವುಂತೆ ಉಸಿರಾಗುವಂತೆ ಮಾಡುವುದಾಗಿ ತಿಳಿಸಿದ ನಾಡೋಜ ಡಾ.ಮಹೇಶ ಜೋಶಿ  ಸಾಂಸ್ಕೃತಿಕ ಮಹತ್ವದ ಈ ಮಾಹಿತಿಯನ್ನು ಸಮಸ್ತ ಕನ್ನಡಿಗರಿಗೆ ತಲುಪಿಸಲು ನೆರವಾಗ ಬೇಕೆಂದು ಪತ್ರಕರ್ತರನ್ನು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು, ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗಶೆಟ್ಟಿ, ಡಾ. ಪದ್ಮಿನಿ ನಾಗರಾಜು, ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ. ಎನ್.ಎಸ್. ಶ್ರೀಧರಮೂರ್ತಿ ಅವರು ಉಪಸ್ಥಿತರಿದ್ದರು.

Related posts

ಎರಡುವರೆ ವರ್ಷ ಬಳಿಕ ಕ್ಯಾಬಿನೆಟ್ ಬದಲಾವಣೆ :  ಅಶೋಕ್​ ಪಟ್ಟಣ್​ ಹೇಳಿಕೆ ಸಮರ್ಥಿಸಿಕೊಂಡ ಸಚಿವ ರಾಮಲಿಂಗಾ ರೆಡ್ಡಿ

ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕಕ್ಕೆ ನಂಬರ್ 2ನೇ ಸ್ಥಾನ

ರಸಗೊಬ್ಬರಕ್ಕೆ ಸಬ್ಸಿಡಿ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿ- ರಾಜ್ಯ ಸರ್ಕಾರಕ್ಕೆ ಆಗ್ರಹ.