ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯಶಿವಮೊಗ್ಗ

ದಿ:ಬಂಗಾರಪ್ಪನವರ 90ನೇ ಹುಟ್ಟುಹಬ್ಬ ವಿಶೇಷ ಲೇಖನ: ಬಡವರನ್ನು ಕಂಡರೆ ಅವರ ಮನ ಮಿಡಿಯುತ್ತಿತ್ತು….

ಲೇಖಕರು – ರಮೇಶ್ ಶೆಟ್ಟಿ, ಶಂಕರಘಟ್ಟ

ಆಶ್ರಯ, ಅಕ್ಷಯ, ಶುಶ್ರೂಷಾ, ವಿಶ್ವ, ಆರಾಧನಾ, ಗ್ರಾಮೀಣ ಕೃಪಾಂಕ, ರೈತರ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್.

ಇವಿಷ್ಟನ್ನು ಹೇಳಿದರೆ ಸಾಕು, ಕನ್ನಡ ನಾಡಿನ ಯಾವುದೇ ಪ್ರಜೆ ಕಣ್ಣ ಮುಂದೆ ಬಂಗಾರಪ್ಪ ಬಂದುಬಿಡುತ್ತಾರೆ. ನಾಡಿನ ಜನತೆ ಮನದಲ್ಲಿ ಬಂಗಾರಪ್ಪ ಹೆಸರು ಚಿರಸ್ಥಾಯಿ. ಕೆಲವರು ಬದುಕಿದ್ದು ಸತ್ತಂತಿರುತ್ತಾರೆ, ಇನ್ನು ಕೆಲವರು ಸತ್ತ ಮೇಲೂ ಬದುಕಿರುತ್ತಾರೆ. ಬಂಗಾರಪ್ಪ ಎರಡನೇ ಗುಂಪಿಗೆ ಸೇರಿದವರು.

ಆಶ್ರಯ ಯೋಜನೆಯಿಂದಾಗಿ ಲಕ್ಷಾಂತರ ಕಡುಬಡವರು ಸ್ವಂತ ನಿವೇಶನ ಮತ್ತು ಮನೆ ನೋಡುವಂತಾಗಿದೆ. ಗ್ರಾಮೀಣ ಕೃಪಾಂಕದಿಂದಾಗಿ ಗ್ರಾಮೀಣ ಪ್ರದೇಶದ ಸಾವಿರಾರು ಜನರು ಸರಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಸಾಧ್ಯವಾಯಿತು. ರೈತರು ಕಳೆದ 30 ವರ್ಷದಿಂದ ಪಂಪ್‍ಸೆಟ್‍ಗೆ ಶುಲ್ಕ ಪಾವತಿಸದೆ ಕೃಷಿಯನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಇದೆಲ್ಲವೂ ಸಾಧ್ಯವಾಗಿದ್ದು ಬಂಗಾರಪ್ಪ ಅವರ ದೂರದೃಷ್ಟಿಯ ಯೋಜನೆಗಳಿಂದಾಗಿ.

ದೇವರಾಜ ಅರಸು ಬಳಿಕ ಈ ನಾಡು ಕಂಡ ಅತ್ಯುತ್ತಮ ಹಿಂದುಳಿದ ವರ್ಗಗಳ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಅವರು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹಮ್ಮಿಕೊಂಡ ಕಾರ್ಯಕ್ರಮಗಳೇ ಸಾಕ್ಷಿ. ಹೀಗಾಗಿಯೇ ಬಂಗಾರಪ್ಪ ಹೋದಲ್ಲಿ ಬಂದಲ್ಲಿ ಅವರನ್ನು ಜನ ಮುತ್ತಿಕೊಳ್ಳುತ್ತಿದ್ದರು.

ಬಂಗಾರಪ್ಪ ಅಂದುಕೊಂಡಿದ್ದು ಮಾಡೇ ತೀರುವಂತಹ ಹಠವಾದಿ ಅಲ್ಲದೆ ಮಹಾನ್ ಸ್ವಾಭಿಮಾನಿ. ತಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬೀಳುತ್ತದೆ ಎಂದು ಗೊತ್ತಾದ ತಕ್ಷಣ ಯಾರನ್ನಾದರೂ ಸರಿ ದಿಕ್ಕರಿಸಿ ಬರುತ್ತಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿ, ರಾಜೀವ್‍ಗಾಂಧಿ, ದೇವರಾಜ ಅರಸು ಸೇರಿದಂತೆ ಹಲವು ಘಟಾನುಘಟಿ ರಾಜಕಾರಣಿಗಳು ಅಧಿಕಾರದ ಉತ್ತುಂಗದಲ್ಲಿದ್ದಾಗಲೆ ಅವರಿಗೆ ಸಡ್ಡು ಹೊಡೆದಿದ್ದರು. ಯಾವುದಕ್ಕೂ ಜಗ್ಗದೆ, ನಿಷ್ಠೂರ, ನೇರ ನಡೆ ನುಡಿಗಳಿಂದ ತಾವು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿದ್ದರು. ಸ್ನೇಹಿತರಾದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪರಂತೆ ಇವರು ಸಹ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಗರಡಿಯಲ್ಲಿ ಫಳಗಿದವರು. ಸಮಾಜವಾದಿ ಚಿಂತನೆಗಳನ್ನು ಚಿಕ್ಕಂದಿನಲ್ಲೇ ಮೈಗೂಡಿಸಿಕೊಂಡಿದ್ದರಿಂದ ಇಡೀ ನಾಡಿನ ಜನತೆ ಅನುಕೂಲವಾಗುವಂತಹ ಅದರಲ್ಲೂ ಬಡವರ ಏಳಿಗೆಗೆ ಕಾರಣವಾಗುವಂತಹ ಆಶ್ರಯ, ಅಕ್ಷಯ, ಆರಾಧನಾ, ಗ್ರಾಮೀಣ ಕೃಪಾಂಕದಂತಹ ಯೋಜನೆಗಳನ್ನು ಜಾರಿಗೊಳಿಸಿದರು. ಯಾವುದೋ ಒಂದು ಜನಾಂಗಕ್ಕೆ ಅಥವಾ ಈಗಿನ ರಾಜಕಾರಣಿಗಳಂತೆ ಒಂದೇ ಊರಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ನಗರ ಮತ್ತು ಹಳ್ಳಗಳ ನಡುವೆ ಅಸಮತೋಲನ- ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿರಲಿಲ್ಲ. ಅವರ ಆಲೋಚನೆಗಳಲ್ಲಿ ದೂರದೃಷ್ಟಿ ಇರುತ್ತಿತ್ತು.

ಇಂತಹ ವ್ಯಕ್ತಿತ್ವದಿಂದ, ಯಾರೊಂದಿಗೂ ರಾಜಿಮಾಡಿಕೊಳ್ಳದ ಮನೋಭಾವದಿಂದಾಗಿಯೇ ಅವರು 42 ವರ್ಷ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಹಲವು ಪಕ್ಷಗಳನ್ನುಬದಲಾಯಿಸಿದರು. ಕೆಲ ಪಕ್ಷಗಳನ್ನು ಕಟ್ಟಿ, ಬೆಳೆಸಿ, ಅಷ್ಟೇ ಬೇಗ ಕೆಡವಿ ದಾಖಲೆ ನಿರ್ಮಿಸಿದರು. ಬಂಗಾರಪ್ಪ ಅವರ ವ್ಯಕ್ತಿತ್ವವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಈ ಕಾರಣಕ್ಕಾಗಿಯೇ ಅವರನ್ನು ವರ್ಣರಂಜಿತ ವ್ಯಕ್ತಿ ಎಂದು ಕರೆಯಲಾಗುತ್ತಿತ್ತು. ರಾಷ್ಟ್ರಪತಿ, ಪ್ರಧಾನ ಮಂತ್ರಿಯೊಂದಿಗೆ ಸಖ್ಯ ಬೆಳೆಸಿದ್ದ ಅವರು ಹಳ್ಳಿಯ ಬಡ ಬೋರೇಗೌಡನೊಂದಿಗೂ ಬೆರೆಯುತ್ತಿದ್ದರು. ಇದು ಅವರಲ್ಲಿನ ವಿಶಾಲ ಮನೋಭಾವವನ್ನು ತೋರ್ಪಡಿಸುತ್ತಿತ್ತು.

ಅಧಿಕಾರದ ಬೆನ್ನತ್ತದ ಸ್ವಾಭಿಮಾನಿ:

ಬಂಗಾರಪ್ಪ ಅಧಿಕಾರಕ್ಕೇರಬೇಕು, ಮಂತ್ರಿ, ಮುಖ್ಯಮಂತ್ರಿಯಾಗಬೇಕೆಂಬ ಕಾರಣಕ್ಕೆ ಹಲವು ಪಕ್ಷಗಳನ್ನು ಬದಲಿಸಿದರು, ಕಟ್ಟಿದರೆಂಬ ಆಪಾದನೆ ಇದೆ. ಆದರೆ 42 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಅವರು ಅಧಿಕಾರದಲ್ಲಿದ್ದದ್ದು ಕೇವಲ 5 ವರ್ಷ ಮಾತ್ರ.  ಇನ್ನುಳಿದ ಅವಧಿಯಲ್ಲಿ ಅವರು ಶಾಸಕ ಅಥವಾ ಸಂಸದನಾಗಿ ಮಾತ್ರ ಉಳಿದಿದ್ದರು. 1967ರಿಂದ1996ರ ವರೆಗೆ ಸತತ 7 ಬಾರಿ ಸೊರಬ ಶಾಸಕರಾಗಿದ್ದ ಅವರು, 1996ರಿಂದ 2009ರ ವರೆಗೆ 4 ಅªಧಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಬಂಗಾರಪ್ಪ ಅನುಭವಿಸಿದ ಅತಿದೊಡ್ಡ ಹುದ್ದೆ ಎಂದರೆ 1990ರಿಂದ 92ರ ವರೆಗೆ ಎರಡು ವರ್ಷ ಮುಖ್ಯಮಂತ್ರಿ ಹುದ್ದೆ. ಅದಕ್ಕೆ ಮೊದಲು 1977-78ರಲ್ಲಿ ಗೃಹ ಸಚಿವ, 78-79ರಲ್ಲಿ ಲೋಕೋಪಯೋಗಿ ಸಚಿವ, 1980-81ರಲ್ಲಿ ಕಂದಾಯ ಮತ್ತು ಕೃಷಿ ಸಚಿವ, 1989-90ರಲ್ಲಿ ಕೃಷಿ ಮತ್ತು ತೋಟಗಾರಿಕೆ ಸಚಿವರಾಗಿದ್ದರು. ಇದರ ಮಧ್ಯೆ 1979-80ರಲ್ಲಿ ಕೆಪಿಸಿಸಿ ಅಧ್ಯಕ್ಷ, 1985-87 ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದರು. ಅಧಿಕಾರದ ವಿಷಯ ಬಂದಾಗಲೆಲ್ಲ ಅವರು ಹೀಗೆ ಹೇಳುತ್ತಿದ್ದರು, ‘ ನಾನು ಯಾವತ್ತೂ ಅಧಿಕಾರದ ಹಿಂದೆ ಹೋದ ರಾಜಕಾರಣಿಯಲ್ಲ. ನಾನು ನನ್ನ ಮನಸಾಕ್ಷಿಗೆ ತಕ್ಕಂತೆ ರಾಜಕಾರಣ ಮಾಡುತ್ತೇನೆ. ಅಧಿಕಾರ ಬೇಕಿದ್ದರೆ ಪಡೆಯುವುದು ನನಗೇನು ಕಷ್ಟವಾಗಿರಲಿಲ್ಲ. ಆದರೆ, ನಾನು ಹಾಗೆ ಮಾಡಲಿಲ್ಲ. ಅದಕ್ಕೆ ನನ್ನ ಮನಸ್ಸು ಒಪ್ಪುವುದಿಲ್ಲ’.

ಹೆಸರಿಗೆ ತಕ್ಕ ಬಂಗಾರ:

ಸಾರೆಕೊಪ್ಪ ಬಂಗಾರಪ್ಪ ಹಠಮಾರಿಯಾದರೂ ಗುಣ ಮಾತ್ರ ಹೆಸರಿಗೆ ತಕ್ಕ ಬಂಗಾರ. ಬಡವರನ್ನು ಕಂಡರೆ ಅವರ ಮನ ಮಿಡಿಯುತ್ತಿತ್ತು. ಬೆಂಗಳೂರು ಸದಾಶಿವನಗರದಲ್ಲಿರುವ ಅವರ ಮನೆಗೆ ಸೊರಬದಿಂದ ಯಾರೇ ಹೋಗಲಿ ಬಹಳ ಮುತುವರ್ಜಿಯಿಂದ ಮಾತನಾಡಿಸಿ ಅವರ ಕೆಲಸ ಮಾಡಿಕೊಡುತ್ತಿದ್ದರು. ಅದಕ್ಕೆ ಅವರ ಪತ್ನಿ ಶಕುಂತಲಾ ಅವರು ಸಾಥ್ ನೀಡಿದ್ದರು.

ನಾನು ನಡೆದದ್ದೇ ದಾರಿ:

ನೇರ ನಡೆ ನುಡಿಯುಳ್ಳವರಾಗಿದ್ದ ಬಂಗಾರಪ್ಪ ಆನೆ ನಡೆದದ್ದೇ ದಾರಿ ಎಂಬ ಸ್ವಭಾವದವರು. ಅವರು ಅದೇ ರೀತಿ ಹೇಳುತ್ತಿದ್ದರಲ್ಲದೆ ಕೊನೆವರೆಗೂ ಅದೇ ರೀತಿ ಬಾಳಿದರು.  ಆನೆ ನಡೆದದ್ದೆ ದಾರಿ, ಬಂಗಾರಪ್ಪ ನಡೆದದ್ದೆ ದಾರಿ ಎನ್ನುತ್ತಿದ್ದರು. ಯಾವುದೇ ಪಕ್ಷವಾದರೂ ಸರಿ ಅವರೇ ನಾಯಕ. ಅಂತಹ ನಾಯಕತ್ವ ಗುಣ ಅವರಲ್ಲಿತ್ತು. ಕೊನೆವರೆಗೂ ಅವರು ಯಾರಿಗೂ ತಲೆಬಾಗಿಸಲಿಲ್ಲ. ಇಂತಹ ಸ್ವಭಾವದಿಂದಾಗಿಯೇ ಅವರು ಬಹಳಷ್ಟು ಜನರನ್ನು ಶಾಸಕ, ಸಂಸದರನ್ನಾಗಿ ಮಾಡಿದರು. ರಾಜಕೀಯದಿಂದ ಹೊರಗಿದ್ದುಕೊಂಡು ವ್ಯಾಪಾರ, ವಹಿವಾಟು, ವೃತ್ತಿ ಮಾಡಿಕೊಂಡಿದ್ದಂತಹ ಡಾ. ಜಿ.ಡಿ.ನಾರಾಯಣಪ್ಪ, ಕೆ.ಜಿ.ಶಿವಪ್ಪ, ಹರತಾಳು ಹಾಲಪ್ಪ, ಗೋಪಾಲಕೃಷ್ಣ ಬೇಳೂರು, ಸ್ವಾಮಿರಾವ್ ಮತ್ತಿತರನ್ನು ಬಂಗಾರಪ್ಪ ಅವರೆ ವಿಧಾನಸೌಧ ಮತ್ತು ಪಾರ್ಲಿಮೆಂಟ್ ಮೆಟ್ಟಿಲು ತುಳಿಯುವಂತೆ ಮಾಡಿದ್ದರು. ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದ ತಮ್ಮ ಮಗ ಕುಮಾರ್ ಬಂಗಾರಪ್ಪರನ್ನು ಸಹ ರಾಜಕೀಯಕ್ಕೆ ಕರೆತದರು. ಹೀಗಾಗಿಯೆ ಬಂಗಾರಪ್ಪರನ್ನು ರಾಜಕಾರಣಿಗಳು ಶಾಸಕರನ್ನು ಉತ್ಪಾದಿಸುವ ಕಾರ್ಖಾನೆ ಎಂದು ಕರೆಯುತ್ತಿದ್ದರು. ಆದರೆ, ಕಡೇ ಕಾಲದಲ್ಲಿ ತಮ್ಮ ಎರಡನೇ ಮಗ ಮಧು ಬಂಗಾರಪ್ಪರನ್ನು ಸೊರಬದಿಂದ ಶಾಸಕನನ್ನಾಗಿ ಮಾಡಬೇಕೆಂಬ ಅವರ ಮಹದಾಸೆ ಕನಸಾಗಿಯೇ ಉಳಿಯಿತು.

 

ವರ್ಣರಂಜಿತ ವ್ಯಕ್ತಿತ್ವ:

ಬಂಗಾರಪ್ಪ ಕೇವಲ ಒಬ್ಬ ರಾಜಕಾರಣಿಯಲ್ಲ ಅವರೊಳಗೊಬ್ಬ ಕಲಾವಿದನಿದ್ದ. ಸಿನಿಮಾ ರಂಗ ಪ್ರವೇಶಿಸಬೇಕು, ನಟನಾಗಬೇಕು ಎಂಬ ಬಗ್ಗೆ ಬಹಳ ಕನಸು ಕಟ್ಟಿದ್ದರು. ಅದರಂತೆಯೆ ಒಂದು ಸಿನಿಮಾದಲ್ಲಿ ನಟಿಸಿದರಾದರೂ ಅದು ತೆರೆಗೆ ಬರಲಿಲ್ಲ. ತಮ್ಮ ಮಕ್ಕಳ ಮೂಲಕ ಸಿನಿಮಾ ಕ್ಷೇತ್ರದ ಕನಸು ನನಸು ಮಾಡಿಕೊಂಡರು. ಪದ್ಮಭೂಷಣ ಡಾ. ರಾಜ್‍ಕುಮಾರ್ ನಂಟಸ್ತನ ಬೆಳೆಸಿದರು. ಹಿಂದೂಸ್ತಾನಿ ಸಂಗೀತದ ಬಗ್ಗೆ ಅಪಾರವಾದ ಪ್ರೀತಿ ಹೊಂದಿದ್ದರು. ಬಿಡುವಿಲ್ಲದ ರಾಜಕೀಯದ ನಡುವೆಯೂ ಅವರು ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸಂಗೀತ ಕಲಾವಿದರೊಂದಿಗೆ ಸಾಥ್ ನೀಡಿ ಜನತೆಯ ಚಪ್ಪಾಳೆ ಗಿಟ್ಟಿಸುತ್ತಿದ್ದರು. ಆಶ್ಚರ್ಯದ ಸಂಗತಿ ಎಂದರೆ ಬಂಗಾರಪ್ಪ ಗಾಯನದ ಎರಡು ಕ್ಯಾಸೆಟ್‍ಗಳನ್ನೂ ಹೊರತರಲಾಗಿದೆ.

ಚಿರ ಯುವಕ:

ವಯಸ್ಸು 79 ಅದರೂ ಬಂಗಾರಪ್ಪ ಮಾತ್ರ `ಯಾರು ಹೇಳಿದ್ದು ನನಗಿನ್ನೂ 29 ವರ್ಷ’ ಎನ್ನುತ್ತಿದ್ದರು. ದೇಹದ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನವೂ ಷಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದರು. ನಿಯಮಿತವಾಗಿ ಯೋಗ ಸಹ ಮಾಡುತ್ತಿದ್ದರು. ಸಿಲ್ಕ್ ಶರ್ಟ್, ಕಪ್ಪು ಕನ್ನಡಕ ಧರಿಸುತ್ತಿದ್ದ ಬಂಗಾರಪ್ಪ ಸದಾ ಟಿಪ್‍ಟಾಪ್ ಆಗಿರಲು ಬಯಸುತ್ತಿದ್ದರು. ದೇಹದ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸುತ್ತಿದ್ದರಾದರೂ ಕೊನೆ ದಿನಗಳಲ್ಲಿ ಅವರನ್ನು ಅನಾರೋಗ್ಯ ಬಾಧಿಸಿತು. ಕನ್ನಡ ನಾಡಿಗಾಗಿ ಅವರ ಸಲ್ಲಿಸಿದ ಸೇವೆ ಚಿರಕಾಲ ಉಳಿಯುವಂತದ್ದು.  ಇಂತಹ ಮಹಾನ್ ನಾಯಕನ 90ನೇ ಜನ್ಮದಿನ. ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ದಿ:ಬಂಗಾರಪ್ಪನವರಿಗೆ ನಾಡಿನ ಜನತೆಯ ಹುಟ್ಟು ಹಬ್ಬದ ಶುಭಾಶಯಗಳು….

 

 

 

 

 

 

 

 

 

 

 

 

 

 

 

 

 

 

Related posts

ದೀಪವಾಗಿ ಬೆಳಗಿ ಬೆಂಕಿಯಾಗಿ ಉರಿಯಬೇಡಿ- ವಿದ್ಯಾರ್ಥಿಗಳಿಗೆ ಪೊಲೀಸ್ ಪಡೆಯ ಕಮಾಡಂಟ್ ಎಸ್. ಯುವಕುಮಾರ್ ಕಿವಿಮಾತು

ರಾಜಕಾರಣದಲ್ಲಿ ಬದಲಾವಣೆಗಳು ಅನಿವಾರ್ಯ:ಪಕ್ಷ ಗಟ್ಟಿಗೊಳಿಸುವುದು ನನ್ನ ಮುಖ್ಯ ಉದ್ದೇಶ-ಆಯನೂರು ಮಂಜುನಾಥ್

ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘದಿಂದ ಸದಸ್ಯರಿಗೆ ಶೇ.23ರಷ್ಟು ಲಾಭಾಂಶ ಘೋಷಣೆ.