ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಇಸ್ರೇಲ್‌ ದಾಳಿ ಗಾಜಾ ಪಟ್ಟಿಯ 4 ಲಕ್ಷ ಜನ ವಲಸೆ: 5100ಕ್ಕೂ ಹೆಚ್ಚು ಜನ ಸಾವು…

ಜೆರುಸಲೇಂ: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಕಾಳಗ ತಾರಕಕ್ಕೇರಿದ್ದು ಹಮಾಸ್ ಉಗ್ರರು ಮತ್ತು ಅವರ ಮೂಲಸೌಕರ್ಯ ನಾಶಕ್ಕೆ ಸತತ ದಾಳಿ ನಡೆಸುತ್ತಿರುವ ಇಸ್ರೇಲಿ ಸೇನಾಪಡೆಗಳು ಗಾಜಾಪಟ್ಟಿ ಪ್ರದೇಶದ ಮೇಲಿನ ತಮ್ಮ ವಾಯುದಾಳಿಯನ್ನು ತೀವ್ರಗೊಳಿಸಿದ್ದು,  ಹೀಗಾಗಿ ಗಾಜಾಪಟ್ಟಿಯ ಜನರು ವಲಸೆ ತೆರಳುತ್ತಿದ್ದಾರೆ.   

24 ಗಂಟೆಯಲ್ಲಿ ಮನೆ ತೊರೆಯಿರಿ ಎಂಬ ಇಸ್ರೇಲ್‌ ಸೂಚನೆಯಿಂದ ಆತಂಕಕ್ಕೆ ಒಳಗಾಗಿದ್ದ ಉತ್ತರ ಗಾಜಾದ 11 ಲಕ್ಷ ಜನರ ಪೈಕಿ ಕನಿಷ್ಠ 4 ಲಕ್ಷ ಜನರು ತಮ್ಮ ಮನೆಗಳನ್ನು ತೊರೆದು ದಕ್ಷಿಣ ಗಾಜಾಕ್ಕೆ ವಲಸೆ ಹೋಗಿದ್ದಾರೆ.   ಈ ನಡುವೆ, ಈವರೆಗೂ ಗಾಜಾದ 1000ಕ್ಕೂ ಹೆಚ್ಚು ಪ್ರದೇಶಗಳನ್ನು ಗುರಿಯಾಗಿಸಿ ವಾಯುದಾಳಿ ನಡೆಸಿ ಯಶಸ್ಸು ಸಾಧಿಸಿದ್ದಾಗಿ ಇಸ್ರೇಲ್‌ ಹೇಳಿದೆ. ಮತ್ತೊಂದೆಡೆ ಗಾಜಾಪಟ್ಟಿ ಗಡಿಯೊಳಗೆ ಇಸ್ರೇಲಿ ಸೇನೆ (Israel Army)ಪ್ರವೇಶಿಸಿದ್ದು, ತನ್ನ ಯೋಧರು, ಯುದ್ಧ ಟ್ಯಾಂಕರ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ಗಡಿ ಪ್ರದೇಶದಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಿದ್ದು, ಯಾವುದೇ ಕ್ಷಣದಲ್ಲಿ ದಾಳಿ ಆರಂಭಿಸುವ ಸುಳಿವು ನೀಡಿದೆ.

ಈ ನಡುವೆ ಇದೇ ವೇಳೆ 11 ಲಕ್ಷ ಜನರ ಏಕಾಏಕಿ ತೆರವಿಗೆ ಸೂಚಿಸಿದ ಇಸ್ರೇಲ್‌ ಸರ್ಕಾರದ ನಿರ್ಧಾರವನ್ನು 57 ಇಸ್ಲಾಮಿಕ್‌ ದೇಶಗಳ ಸಂಘಟನೆಯಾದ ‘ಆರ್ಗನೈಜೇಷನ್‌ ಆಫ್‌ ಇಸ್ಲಾಮಿಕ್‌ ಕೋ ಆಪರೇಷನ್‌’ ಖಂಡಿಸಿದೆ. ಜೊತೆಗೆ ಯುರೋಪಿಯನ್‌ ಒಕ್ಕೂಟ ಕೂಡಾ ಜನರ ತೆರವಿಗೆ ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿವೆ. ಅಲ್ಲದೆ ವಿಶ್ವಸಂಸ್ಥೆ  ಕೂಡಾ ಇಸ್ರೇಲ್‌ ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕೆಂದು ಒತ್ತಾಯಿಸಿದೆ.

ಉಭಯ ದೇಶಗಳಲ್ಲಿ 5 ಸಾವಿರ ಹೆಚ್ಚು ಸಾವು…   ಸಂಘರ್ಷದಿಂದ ಉಭಯ ದೇಶಗಳಲ್ಲಿ ಸಾವನ್ನಪ್ಪಿದ ಯೋಧರು ಮತ್ತು ನಾಗರಿಕ ಸಂಖ್ಯೆ 5100 ದಾಟಿದ್ದು, ಗಾಯಾಳುಗಳ ಸಂಖ್ಯೆ 10 ಸಾವಿರದ ಸನಿಹಕ್ಕೆ ಬಂದಿದೆ. ಈ ಪೈಕಿ ಇಸ್ರೇಲ್‌ ಕಡೆ 1600 ಜನರು ಸಾವ್ನಪ್ಪಿದ್ದಾರೆ. ಗಾಜಾ ಪಟ್ಟಿ ಪ್ರದೇಶದಲ್ಲಿ 724 ಮಕ್ಕಳು ಸೇರಿದಂತೆ 2215 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇನ್ನು ಗಾಜಾ ಗಡಿಯಲ್ಲಿ 1300 ಹಮಾಸ್‌ ಉಗ್ರರ ಶವ ಪತ್ತೆಯಾಗಿದೆ ಎಂಬ ಇಸ್ರೇಲ್‌ ಸರ್ಕಾರದ ಹೇಳಿಕೆಯನ್ನು ಪರಿಗಣಿಸಿದರೆ ಒಟ್ಟಾರೆ ಸಾವಿನ ಸಂಖ್ಯೆ 5100 ದಾಟಿದಂತಾಗಿದೆ.

ಗಾಜಾದ ಸಂತ್ರಸ್ತರಿಗೆಂದು ವಿಶ್ವಸಂಸ್ಥೆ ರವಾನಿಸಿರುವ ಪರಿಹಾರ ಸಾಮಗ್ರಿಗಳು ಈಜಿಪ್ಟ್‌ನೊಂದಿಗೆ (Egypt) ಹೊಂದಿಕೊಂಡಿರುವ ಗಾಜಾದ ದಕ್ಷಿಣ್‌ ಚೆಕ್‌ಪಾಯಿಂಟ್‌ ತಲುಪಿವೆ. ಇಸ್ರೇಲ್‌ ಅನುಮತಿ ನೀಡದ ಹೊರತೂ ಈ ಪರಿಹಾರ ಸಾಮಗ್ರಿ ಗಾಜಾ ಪ್ರವೇಶ ಸಾಧ್ಯವಿಲ್ಲ.

ಇದೇ ವೇಳೆ ಅಮೆರಿಕ ತನ್ನ ಎಫ್‌ -15ಇ ಯುದ್ಧ ವಿಮಾನವನ್ನು ಮಧ್ಯಪ್ರಾಚ್ಯದಲ್ಲಿ ನಿಯೋಜಿಸುವ ಮೂಲಕ ಹಮಾಸ್‌ ವಿರುದ್ಧ ಹೋರಾಟದಲ್ಲಿ ಇಸ್ರೇಲ್‌ಗೆ ಬೆಂಬಲ ವ್ಯಕ್ತಪಡಿಸಿದೆ.

 

Related posts

ಆಸ್ಪತ್ರೆಗೆ ಭೇಟಿ:  ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ಧರಾಮಯ್ಯ.

ಬಾನುಲಿ ಕ್ವಿಜ್ ವಿಜೇತರಿಗೆ ಬಹುಮಾನ ವಿತರಣೆ

ಹಳೇ ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ಸಿಕ್ಕಿದ್ದು ಇದೇ ಮೊದಲು-  ವಿಪಕ್ಷ ನಾಯಕ ಆರ್.ಅಶೋಕ್.