ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಮಾನವೀಯತೆಯ ಸೂಕ್ಷ್ಮಗಳನ್ನು ಗಾಂಧಿಯಿಂದ ತಿಳಿಯಿರಿ-ಹಿರಿಯ ಸಾಹಿತಿ ಎಲ್.ಎನ್. ಮುಕುಂದರಾಜ್

ಶಿವಮೊಗ್ಗ : ಮನೆಯನ್ನು ಗುಡಿಸಿದರೆ ಸ್ವಚ್ಛವಾಗುವುದಿಲ್ಲ, ನಮ್ಮ ಎಲ್ಲರ ಮನಸ್ಸು ಬದುಕು ಶುದ್ಧವಾಗಿರಬೇಕು. ಮಾನವೀಯತೆಯ ಸೂಕ್ಷ್ಮಗಳನ್ನು ಗಾಂಧಿಯಿಂದ ತಿಳಿಯಿರಿ ಎಂದು ನಾಡಿನ ಹಿರಿಯ ಸಾಹಿತಿ ಎಲ್.ಎನ್. ಮುಕುಂದರಾಜ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ಅ.ನಾ.ಕೃ. ರಸ್ತೆಯ ಎರಡನೇ ತಿರುವಿನಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಸ್ವಚ್ಛ ಬದುಕಿಗೆ ಗಾಂಧಿ ಮಾದರಿಯಾಗಲಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಭಾರತೀಯರಿಗೆ ಸ್ವಾತಂತ್ರ್ಯ ಪಡೆದಿದ್ದು ಗೊತ್ತು ಅದರೇ ಕಳೆದುಕೊಂಡದ್ದು ಗೊತ್ತಿಲ್ಲ. ಬಡವ, ಶ್ರೀಮಂತ, ಜಾತಿ, ಧರ್ಮ ಯಾವುದೂ ಇಲ್ಲದೆ ಬಹುದೊಡ್ಡ ಸ್ವಾತಂತ್ರ್ಯ ಸಿಕ್ಕಿದೆ. ಅದನ್ನು ಸರಿಯಾಗಿ ಜೋಪಾನ ಮಾಡಿಕೊಳ್ಳಬೇಕು. ಆದರ್ಶವಾದ ಬದುಕನ್ನು ಬದುಕಬೇಕು.
ತಾರತಮ್ಯವಿಲ್ಲದ ದೇಶ ಸೃಷ್ಠಿಸುವ ಪ್ರಯತ್ನ ಎಲ್ಲೆಡೆಯೂ ನಡೆಯಬೇಕು. ಸ್ವಾತಂತ್ರ್ಯ ಕಳೆದುಕೊಂಡ ಹಿಂದಿನ ವ್ಯವಸ್ಥೆ ಪುನರ್ ಸೃಷ್ಟಿ ಮಾಡುವ ಪ್ರಯತ್ನ ಬೇರೆ ಬೇರೆ ಹೆಸರಲ್ಲಿ ನಡೆಯುತ್ತಿರುವುದನ್ನು  ಮನಗಾಣಬೇಕು ಎಂದು ವಿವರಿಸಿದರು. ನಮ್ಮ ನಮ್ಮ ಸಂಸಾರ ದೊಡ್ಡದಲ್ಲ, ದೇಶ ದೊಡ್ಡದು. ಸುಳ್ಳು ಹೇಳಬೇಡ, ಸತ್ಯದಲ್ಲಿ ನಡೆಯುವುದು ಮರೆಯಬಾರದು ಎಂದರು.
 ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ನಾಗರಾಜ್ ಕಂಕಾರಿ ಮಾತನಾಡಿ, ಗಾಂಧಿ ಅವರ ಅಹಿಂಸಾ ಹೋರಾಟ ಜಗತ್ತನ್ನೆ ಗಮನಿಸುವಂತೆ ಮಾಡಿದರು. ಜಗತ್ತಿನ ೧೨೩ ರಾಷ್ಟ್ರಗಳು ಅವರ ಜಯಂತಿ ಆಚರಿಸುತ್ತಿದ್ದಾರೆ ಎಂದರೆ ಅವರ ವಿಶ್ವಮಾನ್ಯತೆಯನ್ನು ತಿಳಿಯಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿ ಗಾಂಧಿ ಕುರಿತು ವ್ಯಂಗ್ಯವಾಡುವ ಜನರಿಗೆ ಗಾಂಧಿ ತಿಳಿದಿಲ್ಲ. ವಿಶ್ವದ ಯಾವುದೇ ನಾಯಕರನ್ನು ಕುರಿತು ಹೆಚ್ಚು ಹೆಚ್ಚು ಪುಸ್ತಕಗಳು ಈಗಲೂ ಪ್ರಕಟವಾಗುತ್ತಿವೆ ಎಂದರೆ ಅದು ಮಹಾತ್ಮಾ ಗಾಂಧಿ ಅವರನ್ನು ಕುರಿತು ಮಾತ್ರ ಅನ್ನುವುದು ನಮಗೆ ಹೆಮ್ಮೆಯಲ್ಲವೇ ಎಂದರು.
ಇತ್ತೀಚೆಗೆ ಕನ್ನಡದಲ್ಲಿ ಡಿ. ಎಸ್. ನಾಗಭೂಷಣ ಅವರು ಬರೆದ ಏಳುನೂರ ಐವತ್ತು ಪುಟದ ಗಾಂಧಿ ಕಥನ ಪುಸ್ತಕ ಇದುವರೆಗೆ ಇಪ್ಪತ್ತೈದು ಬಾರಿ ಮರು ಮುದ್ರಣ ಆಗಿದೆಎಂದರೆ ಆ ಕೃತಿಯ ಮಹತ್ವ ಅರಿಯಬೇಕು. ನೀವು ವಿದ್ಯಾರ್ಥಿಗಳು ಶ್ರದ್ಧೆಯಿಂದ ಸಾಹಿತ್ಯ ಓದುವುದನ್ನ ಅಭ್ಯಾಸ ಮಾಡಿಕೊಳ್ಳಿ ಎಂದು ವಿವರಿಸಿದರು.
ವಿದ್ಯಾರ್ಥಿನಿ ನಿಲಯದ ಮೇಲ್ವಿಚಾರಕರಾದ ಬಿ.ಎಸ್. ವಿನಯ, ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ, ನಿವೃತ್ತಿ ಉಪನ್ಯಾಸಕರಾದ ಎ. ಉಮಾಪತಿ, ಕವಯಿತ್ರಿ ಪದ್ಮಾ ಚಿನ್ಮಯಿ ಉಪಸ್ಥಿತರಿದ್ದರು. ಸೋನಾಬಾಯಿ ಪ್ರಾರ್ಥಿಸಿದರು. ಪ್ರೀತಿ ನಿರೂಪಿಸಿ, ಚೈತ್ರಾ ವಂದಿಸಿದರು.

Related posts

ಮುಂದಿನ ಎರಡು ವರ್ಷ ವರ್ಗಾವಣೆ ಸ್ಥಗಿತಕ್ಕೆ ಸರ್ಕಾರ ತೀರ್ಮಾನ..?

ಮತ್ತೊಂದು ಇತಿಹಾಸ ಸೃಷ್ಠಿಸಲು ಇಸ್ರೋ ಸಜ್ಜು:  ಇಂದು ಆದಿತ್ಯ ಎಲ್-1 ಉಡಾವಣೆ.

ಪ್ರತಿಭೆಯನ್ನು ಉದಾತ್ತವಾಗಿ ನೋಡಿ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು-ಪತ್ರಕರ್ತ, ಕವಿ ಎನ್. ರವಿಕುಮಾರ್