ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ರಾಜ್ಯದ ಎರಡು ಕಡೆ ಆರ್ & ಡಿ ಕೇಂದ್ರ ತೆರೆಯಲು ಆಪ್ಟೀವ್ ಕಂಪನಿಗೆ ಆಹ್ವಾನ.

ಬೋಸ್ಟನ್: ಆಟೋಮೋಟೀವ್ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ ಆಪ್ಟೀವ್ ಪಿಎಲ್ಸಿ ರಾಜ್ಯದ ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ತನ್ನ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವಂತೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಆಹ್ವಾನ ನೀಡಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಸಚಿವರ ನೇತೃತ್ವದ ನಿಯೋಗವು ಈ ಸಂಬಂಧ ಕಂಪನಿಯ ಉನ್ನತ ಮಟ್ಟದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದೆ.

ಈ ಸಂಬಂಧ ಮಾಹಿತಿ ನೀಡಿರುವ ಪಾಟೀಲ, ಆಪ್ಟೀವ್ ಕಂಪನಿ ಜತೆಗಿನ ಮಾತುಕತೆಯ ಸಂದರ್ಭದಲ್ಲಿ ಸೆಮಿಕಂಡಕ್ಟರ್ ಉತ್ಪನ್ನಗಳಿಗೆ ಸ್ಥಳೀಯ ಪೂರೈಕೆ ಜಾಲವನ್ನು ಅಭಿವೃದ್ಧಿ ಪಡಿಸಲು ಇರುವ ಅವಕಾಶದ ಬಗ್ಗೆ ಚರ್ಚಿಸಲಾಗಿದೆ. ಇದರ ಜೊತೆಗೆ ಆಪ್ಟೀವ್ ಕಂಪನಿಯ ಉತ್ಪನ್ನಗಳ ಓಇಎಂ (ಒರಿಜನಲ್ ಎಕ್ವಿಪ್ಮೆಂಟ್ ಮ್ಯಾನಫ್ಯಾಕ್ಚರಿಂಗ್),  ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಪ್ಯಾಕೇಜಿಂಗ್ (ಎಟಿಪಿಎಂ) ಸೌಲಭ್ಯಗಳ ಬಗ್ಗೆಯೂ ವಿಚಾರ ವಿನಿಮಯ ನಡೆಸಲಾಯಿತು ಎಂದಿದ್ದಾರೆ.

ವಿದ್ಯುತ್ ಚಾಲಿತ ಮತ್ತು ಸಾಫ್ಟ್ವೇರ್ ನಿರ್ದೇಶಿತ ಸಾರಿಗೆ ವ್ಯವಸ್ಥೆಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಆಪ್ಟೀವ್ ಪಿಎಲ್ಸಿ ಕಂಪನಿಯು ಸದ್ಯಕ್ಕೆ ಬೆಂಗಳೂರಿನಲ್ಲಿ ತನ್ನ ತಾಂತ್ರಿಕ ಕೇಂದ್ರವನ್ನು ಹೊಂದಿದ್ದು, ಇದರಲ್ಲಿ 2,500 ಎಂಜಿನಿಯರುಗಳು ಮತ್ತು ತಂತ್ರಜ್ಞರು ಇದ್ದಾರೆ.

ರಾಜ್ಯದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಬಂಡವಾಳ ಹೂಡುವಂತೆ ಎಂಕೆಎಸ್ ಇನ್ಸ್ಟ್ರುಮೆಂಟ್ಸ್ ಕಂಪನಿಯೊಂದಿಗೂ ಚರ್ಚಿಸಲಾಗಿದೆ. ಈ ಮಾತುಕತೆಯ ವೇಳೆಯಲ್ಲಿ ರಾಜ್ಯದಲ್ಲಿ ವ್ಯಾಕ್ಯೂಮ್ ಮತ್ತು ಫೋಟಾನಿಕ್ಸ್ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಸುಧಾರಣೆಗೆ ಇರುವ ಅವಕಾಶಗಳನ್ನು ಗಮನಕ್ಕೆ ತರಲಾಗಿದೆ. ಅಲ್ಲದೆ, ರಾಜ್ಯದಲ್ಲಿರುವ ಕಾರ್ಪೊರೇಟ್ ತೆರಿಗೆ ದರ, ವೇತನ ಮತ್ತು ಬೌದ್ಧಿಕ ಹಕ್ಕುಗಳ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಹಾಗೆಯೇ, ಇಂಧನ ಕ್ಷೇತ್ರದ ಸಾಧನಗಳಲ್ಲಿ ಫ್ಲುವೋರಿನ್ ತಂತ್ರಜ್ಞಾನ ಬಳಕೆಗೆ ಹೆಸರಾಗಿರುವ ಓರ್ಬಿಯಾ ಕಂಪನಿಯ ಪ್ರತಿನಿಧಿಗಳೊಂದಿಗೂ ಮಾತುಕತೆ ನಡೆಸಲಾಗಿದೆ. ಅವರಿಗೆ ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರದಲ್ಲಿ ಸಹಭಾಗಿತ್ವಕ್ಕೆ ಇರುವ ಅವಕಾಶ, ಇಥಲೈನ್ ಉತ್ಪಾದನೆ, ಹನಿ ನೀರಾವರಿಗೆ ಬೇಕಾದ ಪೈಪುಗಳ ತಯಾರಿಕೆ ಇತ್ಯಾದಿಗಳನ್ನು ಕುರಿತು ಮಾಹಿತಿ ನೀಡಿದ್ದೇವೆ ಎಂದು ಪಾಟೀಲ್ ವಿವರಿಸಿದ್ದಾರೆ.

ಎಂ ಬಿ ಪಾಟೀಲ ನೇತೃತ್ವದ ನಿಯೋಗವು ಭಾರತದ ಆರ್ಥಿಕ ರಾಜಧಾನಿಯಾದ ಬೆಂಗಳೂರಿನಲ್ಲಿ ಆರ್ಥಿಕ ಸೇವೆಗಳ ಬೆಳವಣಿಗೆಗೆ ಇರುವ ಅವಕಾಶಗಳ ಬಗ್ಗೆ ಸ್ಟೇಟ್ ಸ್ಟ್ರೀಟ್ ಕಂಪನಿಯೊಂದಿಗೆ ಮಾತುಕತೆ ನಡೆಸಿದೆ.

ಮಾತುಕತೆಯ ಸಂದರ್ಭದಲ್ಲಿ ಆಪ್ಟೀವ್ ಕಂಪನಿಯ ಉನ್ನತಾಧಿಕಾರಿ ಕೆವಿನ್ ಕ್ಲೈನ್, ಎಂಕೆಎಸ್ ಇನ್ಸ್ಟ್ರುಮೆಂಟ್ಸ್ ಕಂಪನಿಯ ಸಿಇಒ ಟಿ ಸಿ ಜಾನ್ ಲೀ, ಉಪಾಧ್ಯಕ್ಷ ಎರಿಕ್ ಟರಾಂಟೋ,  ಡೇವ್ ಹೆನ್ರಿ, ಸಿಐಒ ಮಾಧುರಿ ಆಂಡ್ರೂಸ್ ಇದ್ದರು. ರಾಜ್ಯದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

 

Related posts

ಹಿರಿಯ ನಟಿ ಲೀಲಾವತಿ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ನಟ ಶಿವರಾಜ್ ಕುಮಾರ್ ದಂಪತಿ.

ಸಮಪ್ರಮಾಣದ ಪರಿಹಾರ, ಮನೆಗೊಂದು ಉದ್ಯೋಗ, ಸೈಟ್ ಗಾಗಿನ ನಿರಾಶ್ರಿತರ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ. 

ಹಿಂದುಳಿದ ವರ್ಗಗಳಿಗೆ ಶೇ.33ರಷ್ಟು ಮೀಸಲಾತಿ ಶಿಫಾರಸ್ಸಿಗೆ ಸರ್ಕಾರ ಒಪ್ಪಿಗೆ