ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಆಡಳಿತ ಜನಸ್ನೇಹಿಯಾಗಿರಬೇಕೆಂಬ ದೃಷ್ಟಿಯಿಂದ ಜನತಾ ದರ್ಶನ-ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ

ಶಿವಮೊಗ್ಗ: ಆಡಳಿತ ಜನಸ್ನೇಹಿಯಾಗಿರಬೇಕು. ಜನರ ಸಂಕಷ್ಟಗಳಿಗೆ ಉತ್ತರವಾಗಬೇಕು ಎಂಬ ದೃಷ್ಟಿಯಿಂದ ಜನತಾ ದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಅವರು ಇಂದು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಡಳಿತ ಜನರ ಬಳಿ ಹೋದಾಗ ಮಾತ್ರ ಜನರ ಸಂಕಷ್ಟಗಳಿಗೆ ಪರಿಹಾರ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಜನತಾ ದರ್ಶನ ಹಮ್ಮಿಕೊಳ್ಳಲಾಗಿದೆ. ಪ್ರತಿ ತಿಂಗಳು ಜನತಾ ದರ್ಶನ ಏರ್ಪಡಿಸುವ ಉದ್ದೇಶವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಇಡೀ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಜನತಾ ದರ್ಶನ ಆಯೋಜಿಸಿ ಜನರ ಅಹವಾಲುಗಳನ್ನು ಸ್ವೀಕರಿಸಿ ಅವರ ಸವiಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿ ತಾಲೂಕಿನಲ್ಲಿಯೂ ಜನತಾ ದರ್ಶನ ಹಮ್ಮಿಕೊಳ್ಳುವ ಚಿಂತನೆ ಸರ್ಕಾರಕ್ಕಿದೆ. ಸ್ಥಳೀಯ ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ತಂಡವೇ ತಾಲೂಕು ಕೇಂದ್ರಗಳಿಗೆ ಹೋಗಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಉತ್ತರ ನೀಡಬೇಕು. ಅಧಿಕಾರಿಗಳು ಸೋಮಾರಿತನ ಬಿಡಬೇಕು. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದರು.
ಗಮನ ಸೆಳೆದ ಜನತಾ ದರ್ಶನ: ಇಂದು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗಿದ್ದರು. ಪ್ರತಿಯೊಬ್ಬರಿಗೂ ಅರ್ಜಿಯ ರೂಪದಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಲು ವೇದಿಕೆಯಲ್ಲಿ ಅವಕಾಶ ನೀಡಲಾಗಿತ್ತು. ಮೊದಲು ವಿಕಲಚೇತನರಿಗೆ ನಂತರ ಮಹಿಳೆಯರಿಗೆ ಅನಂತರ ಗುಂಪುಗಳಿಗೆ ಹಾಗೂ ವೈಯಕ್ತಿಕ ಸಮಸ್ಯೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ವಿಕಲಚೇತನರ ಬಳಿಯೇ ಬಂದು ಸಚಿವರು ಅವರ ಅಹವಾಲುಗಳನ್ನು ಸ್ವೀಕರಿಸಿದರು.
ಆಸ್ಮಾ ಎಂ ಅಂಧ ಮಹಿಳೆ ತಮಗೆ ಎರಡೂ ಕಣ್ಣು ಕಾಣಿಸುವುದಿಲ್ಲ ನನಗೆ ಇದುವರೆಗೂ ಪಡಿತರ ಕಾರ್ಡ್ ಸಿಕ್ಕಿಲ್ಲ. ಅಧಿಕಾರಿಗಳಿಗೆ ಆದೇಶಿಸಿ ಪಡಿತರ ಚೀಟಿ ನೀಡಬೇಕು. ಮತ್ತು ಗೃಹಲಕ್ಷ್ಮಿ ಹಣವನ್ನು ಪಡೆಯುವಂತೆ ಅನುಕೂಲ ಮಾಡಿಕೊಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.ಸಚಿವರ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ರೇಷನ್ ಕಾರ್ಡ್ ಮಾಡಿಕೊಡುವಂತೆ ಸೂಚನೆ ನೀಡಿದರು.
ಕಾಂಗ್ರೆಸ್ ಮುಖಂಡರಾದ ಸುವರ್ಣಾ ನಾಗರಾಜ್ ಬಸ್ ನಿಲ್ದಾಣದಲ್ಲಿ ಕಸ ಗುಡಿಸುವವರ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು. ಇಲ್ಲಿನ ಕಸ ಗುಡಿಸುವವರ ಕಷ್ಟವನ್ನು ಯಾರೂ ಕೇಳುತ್ತಿಲ್ಲ. ಪಿಎಫ್ ನೀಡಿಲ್ಲ. ಯೂನಿಫಾರ್ಮ್ ಕೊಡುತ್ತಿಲ್ಲ. ಹಲವು ಬಾರಿ ಸಮಸ್ಯೆಗಳನ್ನು ಹೇಳಿಕೊಂಡರೂ ಪ್ರಯೋಜನವಾಗಿಲ್ಲ. ಎಂದರು.
ಜಿಲ್ಲಾಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿ ಕೆಲಸ ನಿರ್ವಹಣೆ ಮಾಡುತ್ತಿರುವ ಏಜೆನ್ಸಿಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. ತಕ್ಷಣವೇ ನಿಯಮದಂತೆ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಬಂದಿಲ್ಲ. ಕೊಳಚೆ ಪ್ರದೇಶಗಳಿಗೆ ನಿವೇಶನ ಪತ್ರ ನೀಡಿಲ್ಲ. ಹೊಸ ನ್ಯಾಯ ಬೆಲೆ ಅಂಗಡಿ ಬೇಕು. ಪಿಂಚಣಿ ಬರುತ್ತಿಲ್ಲ. ವಿದ್ಯುತ್ ಇಲ್ಲ. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಅರ್ಜಿಯ ಮೂಲಕ ನೂರಾರು ಜನರು ಸಚಿವರಿಗೆ ಮನವಿ ಮಾಡಿದರು. ಪ್ರತಿಯೊಬ್ಬರ ಸಮಸ್ಯೆಗಳನ್ನೂ ಆಲಿಸಿದ ಸಚಿವರು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳದಲ್ಲಿಯೇ ಕರೆಸಿ ಅರ್ಜಿದಾರರ ಎದುರಿಗೆಯೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ನವಕರ್ನಾಟಕ ವೇದಿಕೆಯವರು ಹುಣಸೋಡು ಸ್ಫೋಟದಿಂದ ಹಾನಿಗೊಳಗಾಗಿರುವ ಮನೆಗಳ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ಜಿಲ್ಲೆಯಾದ್ಯಂತ 5 ಗುಂಟೆಗಿಂತ ಹೆಚ್ಚು ಜಮೀನನ್ನು ಭೂ ಪರಿವರ್ತನೆ ಮಾಡುತ್ತಿದ್ದು, ಅದನ್ನು ಕೈಬಿಟ್ಟು ಎಲ್ಲಾ ಬಡವರ ಕಂದಾಯ ನಿವೇಶನಗಳಿಗೆ ಭೂ ಪರಿವರ್ತನೆ ಮಾಡಬೇಕು ಎಂದು ಮನವಿ ಮಾಡಿದರು.
ಅಲ್ಪಸಂಖ್ಯಾತರ ಇಲಾಖೆ ವ್ಯಾಪ್ತಿಯಲ್ಲಿ ನಡೆಯುವ ಹಾಸ್ಟೆಲ್‍ಗಳ ವಿದ್ಯಾರ್ಥಿವೇತನವನ್ನು ಹೆಚ್ಚಿಸಬೇಕು. ಮತ್ತು ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ತಡೆಹಿಡಿದಿರುವ ವೇತನವನ್ನು ತಕ್ಷಣವೇ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು. ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಸರ್ಕಾರದ ಆದೇಶದಂತೆ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಜನರ ಸಮಸ್ಯೆಗಳನ್ನು ಆಲಿಸಲು ಜನತಾ ದರ್ಶನ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ತಮ್ಮ ಅಹವಾಲು ಸಲ್ಲಿಸುವಾಗ ತಮ್ಮ ಮೊಬೈಲ್ ನಂಬರ್ ಕಡ್ಡಾಯವಾಗಿ ಅರ್ಜಿಯಲ್ಲಿ ನಮೂದಿಸಬೇಕು. ಈ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸಿ ಶೀಘ್ರ ಬಗೆಹರಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಮತ್ತು ಈ ಎಲ್ಲಾ ಅರ್ಜಿಗಳು ತಂತ್ರಾಂಶಕ್ಕೆ ಒಳಗಾಗುತ್ತವೆ. ಅರ್ಜಿಯ ಪ್ರತಿಯೊಂದು ಹಂತವನ್ನು ಅರ್ಜಿದಾರರಿಗೆ ಮೊಬೈಲ್ ಮೂಲಕ ಸಂದೇಶ ನೀಡಲಾಗುವುದು ಎಂದರು.
ಜನತಾ ದರ್ಶನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‍ಕುಮಾರ್, ಜಿ.ಪಂ. ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಪಾಲಿಕೆ ಸದಸ್ಯರಾದ ಮೆಹಕ್ ಶರೀಫ್, ಹೆಚ್.ಸಿ ಯೋಗೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Related posts

ಮಹಿಳೆಯರ ಸ್ವಾವಲಂಬಿ ಬದುಕಿಗೆ ಗೃಹಲಕ್ಷ್ಮಿ ಆಸರೆ- ಗ್ರಾಪಂ ಅಧ್ಯಕ್ಷೆ ಚೈತ್ರ ಮೋಹನ್

ವರ್ಗಾವಣೆ ದಂಧೆ ಆಡಿಯೋ ವೈರಲ್ ವಿಚಾರ:  ಸಮಗ್ರ ತನಿಖೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ

ಬೆಳ್ಳಂಬೆಳಿಗ್ಗೆ ತೆರಿಗೆ ವಂಚಕರಿಗೆ ಶಾಕ್:  ಬೆಂಗಳೂರಿನ 10ಕ್ಕೂ ಹೆಚ್ಚುಕಡೆಗಳಲ್ಲಿ ಐಟಿ ದಾಳಿ