ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕುಗ್ಗುತ್ತಿದೆ ಚೀನಾ ಪ್ರಭಾವ: ಪ್ರಮುಖ ಉತ್ಪಾದನ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಭಾರತ

ನವದೆಹಲಿ: ಭಾರತ ದೇಶ ಪ್ರಮುಖ ಉತ್ಪಾದನ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಹಾಗೆಯೇ ಚೀನದಿಂದ ಆಮದು ಮಾಡಿಕೊಳ್ಳುವ ಪ್ರಮಾಣವೂ ಗಣನೀಯವಾಗಿ ಕುಸಿಯುತ್ತಿದೆ ಎಂದು ಹಾರ್ನೆಸ್ಸಿಂಗ್ ದ ಟೆಕ್ಟೋನಿಕ್ ಶಿಫ್ಟ್ ಇನ್ ಗ್ಲೋಬಲ್ ಮ್ಯಾನ್ಯುಫ್ಯಾಕ್ಚರಿಂಗ್’ ಎಂಬ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಗತ್ತಿನ ವಸ್ತುಗಳ ಪ್ರಮುಖ ಉತ್ಪಾದನ ರಾಷ್ಟ್ರವಾಗಿ ಭಾರತ ಹೊರಹೊಮ್ಮುತ್ತಿದೆ. ಈ ನಿಟ್ಟಿನಲ್ಲಿ ಚೀನ ಹೊಂದಿರುವ ಪಾರಮ್ಯ ನಿಧಾನವಾಗಿ ಕುಸಿಯುತ್ತಿದ್ದು, 2018ರಿಂದ 2022ರ ಅವಧಿಯಲ್ಲಿ ಅಮೆರಿಕಕ್ಕೆ ದೇಶದ ರಫ್ತು ಪ್ರಮಾಣ ಶೇ.44 ಏರಿಕೆಯಾಗಿದೆ. ಐದು ವರ್ಷಗಳ ಅವಧಿಯಲ್ಲಿ ಚೀನ ಶೇ.10 ಕಡಿಮೆ ಪ್ರಮಾಣದಲ್ಲಿ ವಸ್ತುಗಳನ್ನು ಅಮೆರಿಕಕ್ಕೆ ರಫ್ತು ಮಾಡಿದೆ ಎಂದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ)ನ “ಹಾರ್ನೆಸ್ಸಿಂಗ್ ದ ಟೆಕ್ಟೋನಿಕ್ ಶಿಫ್ಟ್ ಇನ್ ಗ್ಲೋಬಲ್ ಮ್ಯಾನ್ಯುಫ್ಯಾಕ್ಚರಿಂಗ್’ ಎಂಬ ಅಧ್ಯಯನ ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಪ್ರಗತಿ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ಕಂಪೆನಿಗಳು ಚೀನಕ್ಕಿಂತ ಭಾರತಕ್ಕೇ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿವೆ. ಆ ದೇಶದಲ್ಲಿ ಕೊರೊನಾ ಸೋಂಕು ಉಂಟಾದ ಅನಂತರದ ಪರಿಸ್ಥಿತಿಯಲ್ಲಿ ಅರ್ಥ ವ್ಯವಸ್ಥೆಯೇ ಬುಡಮೇಲಾಗಿತ್ತು. ಅದರ ಜತೆಗೆ ಜಗತ್ತಿನ ಹಲವು ರೀತಿಯ ರಾಜಕೀಯ ಬಿಕ್ಕಟ್ಟುಗಳು ಕೂಡ ನಿರ್ಧಾರಕ್ಕೆ ಕಾರಣವಾಗಿವೆ.

ಸೆಮಿಕಂಡಕ್ಟರ್ ಮತ್ತು ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ವಹಿವಾಟುಗಳು ಕೂಡ ಶೇ.143ರಷ್ಟು ಹೆಚ್ಚಾಗಿದೆ ಎಂದು ಬಿಸಿಜಿ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಚೀನಕ್ಕೆ ಸಂಬಂಧಿಸಿದಂತೆ ಶೇ.23 ಕುಸಿತ ಕಂಡಿದೆ. ಭಾರತದಲ್ಲಿ ಉತ್ಪಾದನೆಗೊಂಡ ವಾಹನೋದ್ಯಮದ ಉತ್ಪನ್ನಗಳ ರಫ್ತು ಕೂಡ ಅಮೆರಿಕಕ್ಕೆ ಶೇ.65ರಷ್ಟು ವೃದ್ಧಿಯಾಗಿದೆ. ಮೆಕ್ಯಾನಿಕಲ್ ಮಷಿನರಿ ವಿಭಾಗದಲ್ಲಿ ಶೇ.70ರಷ್ಟು ಹೆಚ್ಚಾಗಿವೆ.

ದೇಶದ ಟಿವಿ ಮಾರುಕಟ್ಟೆಯ ವ್ಯಾಪ್ತಿಯಲ್ಲಿ ಚೀನದ ಪ್ರಭಾವ ಗಣನೀಯವಾಗಿ ಕುಗ್ಗುತ್ತಿದೆ. ಇದೇ ಮೊದಲ ಬಾರಿಗೆ ಇಂಥ ಬೆಳವಣಿಗೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಜನಪ್ರಿಯ ಬ್ರ್ಯಾಂಡ್ಗಳು ತಮ್ಮ ಟಿವಿಗಳ ಬೆಲೆ ಇಳಿಕೆ ಮಾಡಲು ಮುಂದಾಗಿವೆ. ಜತೆಗೆ ಭಾರತದ ಮಾರುಕಟ್ಟೆಗಾಗಿ ಯೋಜನೆಯನ್ನೇ ಬದಲು ಮಾಡಲು ಮುಂದಾಗಿವೆ. ಕೌಂಟರ್ ಪಾಯಿಂಟ್ ಟೆಕ್ನಾಲಜಿ ನಡೆಸಿದ ಅಧ್ಯಯನ ಪ್ರಕಾರ ಟಿವಿ ಕ್ಷೇತ್ರದಲ್ಲಿ ಎಪ್ರಿಲ್ನಿಂದ ಜೂನ್ ಅವಧಿಯಲ್ಲಿ ಶೇ.33.6 ಚೀನ ಅವಲಂಬನೆ ತಗ್ಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅದರ ಪ್ರಮಾಣ ಶೇ. 35.7 ಆಗಿತ್ತು. ಇದಲ್ಲದೆ ಕೆಲವು ಕಂಪೆನಿಗಳು ಟಿವಿ ಉದ್ದಿಮೆಯಿಂದ ದೂರವಾಗುವ ಸಾಧ್ಯತೆ ಇದೆ ಎಂದು “ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.

 

Related posts

ಭಾರತೀಯ ವಿದ್ಯಾ ಭವನದಲ್ಲಿ ‘ಗೊಂಬೆ ಹಬ್ಬ’

ಸಾವಿರಾರು ಅರಣ್ಯವಾಸಿಗಳಿಗೆ ಶೀಘ್ರವೇ ಹಕ್ಕುಪತ್ರ-ಅರಣ್ಯ ಸಚಿವ ಈಶ್ವರ್ ಖಂಡ್ರೆ

ಕೇಂದ್ರದಿಂದ ಇನ್ನೂ ನಯಾಪೈಸೆ ನೆರವು ಸಿಕ್ಕಿಲ್ಲ: ಸಿಎಂ‌ ಸಿದ್ದರಾಮಯ್ಯ ಆಕ್ರೋಶ ವಾಗ್ದಾಳಿ.