ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಮಹಿಳಾ ಮೀಸಲಾತಿ ಮಸೂದೆ ಅನುಮೋದನೆ ಐತಿಹಾಸಿಕ ತೀರ್ಮಾನ-ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ: ನಾರಿ ಶಕ್ತಿಗೆ ಒತ್ತು ಕೊಡುವ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿ ಅನುಮೋದನೆಗೊಂಡಿರುವುದು ಐತಿಹಾಸಿಕ ತೀರ್ಮಾನವಾಗಿದೆ. ಇದಕ್ಕೆ ಪ್ರಧಾನಿ ಮೋದಿ ಅವರ ಇಚ್ಛಾಶಕ್ತಿ ಕಾರಣ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಇಂದು ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ಆಡಳಿತ ನಡೆಸಿದ್ದರೂ ಕೂಡ ಈ ಮಸೂದೆ ಜಾರಿಗೆ ತರಲಿಲ್ಲ. ಆದರೆ, ಬಿಜೆಪಿ ಸರ್ಕಾರ ಮಹಿಳಾ ಮೀಸಲಾತಿ ಜಾರಿಗೆ ತಂದಿದೆ. ಸಂಸತ್ ನಲ್ಲಿ ಈಗಾಗಲೇ ಅನುಮೋದನೆಗೊಂಡು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಾಯುತ್ತಿದೆ ಅಷ್ಟೇ. ಅನೇಕ ವರ್ಷಗಳ ಕನಸು ಇದು. ಈ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು ಎಂದರು.
ಕಾಂಗ್ರೆಸ್ ಪಕ್ಷ ಈ ಬಾರಿಯಿಂದಲೇ ಇದನ್ನು ಜಾರಿಗೆ ತರಬೇಕು ಎನ್ನುತ್ತಿದೆ. ಆದರೆ, ಹಾಗೆಲ್ಲಾ ಮಾಡಲು ಬರುವುದಿಲ್ಲ. ಅದಕ್ಕಾಗಿ ನಿಯಮಗಳಿವೆ. ಜನಗಣತಿ ಆಗಬೇಕಾಗಿದೆ. ಮೀಸಲಾತಿ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಕ್ಷೇತ್ರವಾರು ವರ್ಗೀಕರಣ ಆಗಬೇಕು. ಅದೆಲ್ಲಾ ಮುಗಿದ ನಂತರ ಜಾರಿಗೆ ತರಲಾಗುವುದು ಎಂದರು.
ಈ ಮಸೂದೆಯಿಂದ ಮಹಿಳೆಯರ ಸ್ವಾಭಿಮಾನ ಮತ್ತು ಸ್ವಾವಲಂಬನೆ ಹೆಚ್ಚಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರ ಮತದಾನ ಕೂಡ ಶೇಕಡ 5 ರಷ್ಟು ಹೆಚ್ಚಳವಾಗಿದೆ. ಮಹಿಳೆಯರ ಮತದಾನ ಕೂಡ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಹಲವು ಯೋಜನೆ ರೂಪಿಸಿದೆ. ಬಿಜೆಪಿ ಸರ್ಕಾರ ಹೆಮ್ಮೆಯ ನಿರ್ಧಾರವಿದು ಎಂದರು.
ಕಾವೇರಿ ನದಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನೀರು ಬಿಟ್ಟ ಮೇಲೆ ಸರ್ವ ಪಕ್ಷಗಳ ಸಭೆ ಕರೆಯುವ ಅಗತ್ಯವಾದರೂ ಏನಿತ್ತು? ಈಗ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎನ್ನುತ್ತಿದ್ದಾರೆ. ಆದರೆ, ನೀರಿಗೆ ಸಂಬಂಧಿಸಿದಂತೆ ಪ್ರಾಧಿಕಾರಗಳು, ನ್ಯಾಯಾಲಯಗಳು ಇವೆ. ಅಲ್ಲಿ ಇವರು ಪ್ರಶ್ನೆ ಮಾಡಬೇಕಿತ್ತು. ಅದನ್ನು ಬಿಟ್ಟು ರಾಜಕೀಯ ಹಿತಾಸಕ್ತಿಗಾಗಿ ನೀರನ್ನು ಬಿಟ್ಟಿದ್ದು ಸರಿಯಲ್ಲ ಎಂದರು.
ವಿಐಎಸ್ಎಲ್ ಶತಮಾನೋತ್ಸವಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಿರಿಯ ಕಾರ್ಮಿಕರೊಂದಿಗೆ ಚರ್ಚಿಸಿದ್ದು, ಅವರಿಗೆ ಜವಾಬ್ದಾರಿ ನೀಡಲಾಗಿದೆ. ಅಲ್ಲಿನ ಹಿರಿಯ ಕಾರ್ಮಿಕ ಹಾಗೂ ಚಿತ್ರನಟ ದೊಡ್ಡಣ್ಣ ಅವರ ನೇತೃತ್ವದಲ್ಲಿ ಕೆಲಸಗಳು ನಡೆಯುತ್ತಿವೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ಸ್ವಾಗತಿಸಿದ ಸಂಸದ ರಾಘವೇಂದ್ರ ಮುಂದೆಯೂ ಮೋದಿ ಅವರೇ ಪ್ರಧಾನಿಯಾಗಲು ಇದು ಸಹಕಾರವಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಶಿವರಾಜ್, ಮಾಲತೇಶ್, ಜಗದೀಶ್, ಹೃಷಿಕೇಶ್ ಪೈ, ಸುನಿತಾ ಅಣ್ಣಪ್ಪ, ಸುವರ್ಣಾ ಶಂಕರ್, ಪದ್ಮಿನಿ, ಕೆ.ವಿ. ಅಣ್ಣಪ್ಪ ಮುಂತಾದವರಿದ್ದರು.

Related posts

ಅಂಗವಿಕಲತೆ ಶಾಪವಲ್ಲ- ಡಾ. ಧನಂಜಯ ಸರ್ಜಿ

ಗೋವಾದಲ್ಲಿ 37ನೇ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿ: ಅ.8ರಂದು ತಂಡದ ಆಯ್ಕೆ ಪ್ರಕ್ರಿಯೆ-ಸ್.ಕೆ. ರಘುವೀರ್ ಸಿಂಗ್

ಕರ್ನಾಟಕ ಪ್ರದೇಶ ಕುರುಬ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಕೆ.ರಂಗನಾಥ್ ಅವಿರೋಧ ಆಯ್ಕೆ