ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಕಾವೇರಿ ನದಿ ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್ ಕಾರಣ- ಕೆಎಸ್ ಈಶ್ವರಪ್ಪ ಆರೋಪ.

ಶಿವಮೊಗ್ಗ: ಕಾವೇರಿ ನದಿ ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಕಾರಣ. ಅವರನ್ನು ತಕ್ಷಣವೇ ಡಿಸಿಎಂ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಕುಡಿಯುವ ನೀರಿಗೂ ಹಾಹಾಕಾರವಿದೆ. ಬರಗಾಲ ಕಾಲಿಟ್ಟಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಇಂಡಿಯಾ(ಐ.ಎನ್.ಡಿ.ಐ.ಎ.) ಮೈತ್ರಿಕೂಟಕ್ಕೆ, ತಮಿಳುನಾಡು ಸಿಎಂ ಸ್ಟಾಲಿನ್ ಅವರಿಗೆ ತೃಪ್ತಿ ತರಿಸಲು ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ನೀರು ಬಿಡುವ ಮುನ್ನ ಯಾರಿಗೂ ಹೇಳಲಿಲ್ಲ. ಸರ್ವ ಪಕ್ಷಗಳ ಸಭೆ ಕರೆಯಲಿಲ್ಲ. ರೈತರ ಸಂಕಷ್ಟ ಅರ್ಥ ಮಾಡಿಕೊಳ್ಳಲಿಲ್ಲ. ತಾವೇ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಮೂರ್ಖತನದಿಂದ ನೀರು ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ತಜ್ಞರ ಸಭೆ ಕರೆಯಬಹುದಿತ್ತು. ಸಂಸದರ ಸಭೆ ಕರೆಯಬಹುದಿತ್ತು. ಆದರೆ, ಯಾರನ್ನೂ ಕೇಳಲಿಲ್ಲ. ಸರ್ವಪಕ್ಷಗಳ ಸಭೆ ಕರೆದು ಚರ್ಚೆ ಮಾಡಬಹುದಿತ್ತು. ಆದರೆ, ಚರ್ಚಿಸಲಿಲ್ಲ. ದೆಹಲಿಗೆ ಹೋಗಿ ಸಂಸದರ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಎಲ್ಲಾ ಎಂಪಿಗಳಿಂದ ಛೀಮಾರಿ ಹಾಕಿಸಿಕೊಂಡರು. ಈ ಎಲ್ಲಾ ಹಿನ್ನಲೆಯಲ್ಲಿ ಡಿ.ಕೆ. ಶಿವಕುಮಾರ್, ತಮ್ಮ ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಇಂತಹುದೇ ಪರಿಸ್ಥಿತಿ ಉಂಟಾಗಿತ್ತು. ಆದರೆ, ಅವರು ಸಮರ್ಥವಾಗಿ ಪರಿಸ್ಥಿತಿ ಎದುರಿಸಿದರು. ಆಗ ಅವರಿಗೆ ಎಲ್ಲಾ ವಿಪಕ್ಷಗಳು ಬೆಂಬಲ ಕೊಟ್ಟಿದ್ದೆವು. ನಾವು ಕೂಡ ಕಾವೇರಿ ನದಿ ನೀರು ವಿಚಾರದಲ್ಲಿ ಸರ್ಕಾರಕ್ಕೆ ಬೆಂಬಲ ಕೊಡುತ್ತೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜೈಲಿಗೆ ಹೋದರೆ ನಾವು ಅವರ ಜೊತೆಗಿರುತ್ತೇವೆ ಎಂದರು.
ಕಾವೇರಿ ಎಂದರೆ ಕಾಂಗ್ರೆಸ್ ಪಕ್ಷದ ಸ್ವತ್ತಲ್ಲ, ಯಾವುದೇ ನಿರ್ಧಾರ ತೆಗೆದುಕೊಳ್ಳಲು ಡಿ.ಕೆ. ಶಿವಕುಮಾರ್ ಒಬ್ಬರೇ ಇಲ್ಲ. ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಿ ಡಿ.ಕೆ. ಶಿವಕುಮಾರ್ ಅವರನ್ನು ವಜಾ ಮಾಡಬೇಕು. ರಾಜ್ಯದ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಮುಂದಾಗಬೇಕು. ವಸ್ತುಸ್ಥಿತಿಯ ಅಧ್ಯಯನ ಮಾಡಿ ನೀರಾವರಿ ತಜ್ಞರ ಸಲಹೆ ಪಡೆದು ಅಗತ್ಯ ಕ್ರಮ ತೆಗೆದುಕೊಂಡು ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಮೇಯರ್ ಶಿವಕುಮಾರ್, ಜ್ಞಾನೇಶ್ವರ್, ಶಿವರಾಜ್, ಜಗದೀಶ್, ವಿಶ್ವಾಸ್, ಅಣ್ಣಪ್ಪ, ಬಾಲು ಇದ್ದರು.
 ಬಾಕ್ಸ್:1
ನೀರು ಕಳ್ಳನನ್ನು ನೀರುಗಳ್ಳ ಎನ್ನದೇ ಏನೆನ್ನಬೇಕು…?
ಡಿ.ಕೆ. ಶಿವಕುಮಾರ್ ರಾತ್ರೋರಾತ್ರಿ ಕದ್ದು ನೀರು ಬಿಟ್ಟವರು. ಇಂತಹ ನೀರು ಕಳ್ಳನನ್ನು ಕಳ್ಳ ಎನ್ನದೇ ಬೇರೇನು ಹೇಳಬೇಕು. ಡಿಕೆಶಿ ಕಳ್ಳ ನೀರುಗಂಟಿ. ಅದಕ್ಕಾಗಿ ನಾನೇಕೆ ಅವರನ್ನು ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಪ್ರಶ್ನಿಸಿದರು.
ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಡಿ.ಕೆ. ಶಿವಕುಮಾರ್ ಸೆಟ್ಲ್ ಮೆಂಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಅವರು ಯಾರು ಸೆಟ್ಲ್ ಮೆಂಟ್ ಮಾಡಲು. ನಾನೇ ಸೆಟ್ಲ್ ಮೆಂಟ್ ಮಾಡಬಲ್ಲೆ. ಅವರಿಗಿಂತ ಮೊದಲೇ ನಾನು ಡಿಸಿಎಂ ಆದವನು. ಗೂಂಡಾಗಳು ಬಳಸುವ ಭಾಷೆ ಇದು. ಅವರು ಜೈಲಿನಲ್ಲಿ ಇದ್ದು ಬಂದಿದ್ದನ್ನು ಮರೆತಿದ್ದಾರೆ. ಅಕ್ಷರಶಃ ಕಾಂಗ್ರೆಸ್ ಆಡಳಿತ ರಾಜ್ಯದಲ್ಲಿ ಕುಸಿದಿದೆ. ಗುಂಪುಗಾರಿಕೆ ಹೆಚ್ಚಾಗಿದೆ ಎಂದರು.
ಬಾಕ್ಸ್ 2
ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.  ಮೇಘರಾಜ್ ಮಾತನಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಮನೆಗಳಿಗೆ ಅರ್ಜಿ ಹಾಕಿದವರ ಗೋಳು ಹೇಳತೀರದಾಗಿದೆ. ಬಿಜೆಪಿ ಆಡಳಿತದಲ್ಲಿದ್ದಾಗ ಸಚಿವ ಈಶ್ವರಪ್ಪ ಅವರು ಗೋವಿಂದಾಪುರ ಮತ್ತು ಗೋಪಿಶೆಟ್ಟಿ ಕೊಪ್ಪದಲ್ಲಿ ಸುಮಾರು 4800 ಮನೆಗಳನ್ನು ನಿರ್ಮಿಸಲು ಪ್ರಯತ್ನಿಸಿದ್ದರು. ಕೆಲಸವೂ ನಡೆಯುತ್ತಿತ್ತು. ಆದರೆ ಈಗ ಸಂಪೂರ್ಣವಾಗಿ ನಿಂತಿದೆ. ರಾಜ್ಯ ಸರ್ಕಾರ ಕೂಡಲೇ ಗಮನಹರಿಸಿ ಹಣ ಬಿಡುಗಡೆ ಮಾಡಿ ಬಡವರಿಗೆ ಸೂರು ನೀಡಬೇಕು. ಇಲ್ಲದಿದ್ದರೆ ಅ. 5 ರ ನಂತರ ಜಿಲ್ಲೆಯಲ್ಲಿ ಬಿಜೆಪಿ ಹೋರಾಟ ನಡೆಸಲಿದೆ ಎಂದರು.

Related posts

ಕರಾಳ ದಿನ: ಮುಂಬೈ 26 \11 ಭಯೋತ್ಪಾದಕ ದಾಳಿಗೆ ಹದಿನೈದು ವರ್ಷ…..

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ವರ್ಗಾವಣೆ ಮಾಡಿದ ಸರ್ಕಾರ

ಮಹಿಳಾ ಮೀಸಲಾತಿ ಮಸೂದೆ ಸ್ವಾಗತ: ಸಿಹಿ ಹಂಚಿ ಸಂಭ್ರಮ..