ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಮೌಲ್ಯಾಂಕನ ವಿಶ್ಲೇಷಣೆ ಬಿಡುಗಡೆ: ಸರ್ಕಾರಿ ಶಾಲೆ ವಿದ್ಯಾರ್ಥಿಗಳೇ ಬೆಸ್ಟ್..!

ಬೆಂಗಳೂರು: 5 ಮತ್ತು 8ನೇ ತರಗತಿ ಮಕ್ಕಳಿಗೆ ಕಳೆದ ಮಾರ್ಚ್/ಏಪ್ರಿಲ್ನಲ್ಲಿ ನಡೆಸಿದ ಮೌಲ್ಯಾಂಕನ (ಸಂಕಲನಾತ್ಮಕ ಮೌಲ್ಯಮಾಪನ-2) ವಿಶ್ಲೇಷಣಾತ್ಮಕ ವರದಿಯನ್ನು ಶಾಲಾ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ್ದು, ಸರ್ಕಾರಿ ಶಾಲೆ ವಿದ್ಯಾರ್ಥಿಗಳೇ  ಮುಂದಿದ್ದಾರೆ ಎಂಬ ಅಂಶ ಬಹಿರಂಗಗೊಂಡಿದೆ.

ಗ್ರಾಮೀಣರು ಮತ್ತು ಬಾಲಕಿಯರು ಮೇಲುಗೈ ಸಾಧಿಸಿದ್ದು, 5ನೇ ತರಗತಿಯಲ್ಲಿ ಸರ್ಕಾರಿ ಶಾಲೆ ಹಾಗೂ 8ನೇ ತರಗತಿಯಲ್ಲಿ ಖಾಸಗಿ ಶಾಲೆ ವಿದ್ಯಾರ್ಥಿಗಳು ಮುಂದಿದ್ದಾರೆ. ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ವರದಿಯನ್ನು ಪ್ರಕಟಿಸಿದೆ.

2023-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಯ 5ನೇ ತರಗತಿಯ 9,59,734 ಮತ್ತು 8ನೇ ತರಗತಿಯ 9,43,919 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 5ನೇ ತರಗತಿಯ 80,945 ಹಾಗೂ 8ನೇ ತರಗತಿಯ 82,388 ವಿದ್ಯಾರ್ಥಿಗಳ ಫಲಿತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಮಾ.27ರಿಂದ ಏ.1ರವರೆಗೆ ಈ ಮೌಲ್ಯಾಂಕನ ನಡೆಸಲಾಗಿತ್ತು. ವಿದ್ಯಾರ್ಥಿಗಳ ಕಲಿಕಾ ಮಟ್ಟ, ಕಲಿಕಾ ನ್ಯೂನ್ಯತೆ, ಕಲಿಕಾ ಪ್ರಗತಿ ಹಾಗೂ ಯಾವ ವಿಷಯದಲ್ಲಿ ಎಷ್ಟು ಹಿನ್ನಡೆ ಎಂಬುದನ್ನು ತಿಳಿಯಲು ಪರೀಕ್ಷೆ ಕೈಗೊಳ್ಳಲಾಗಿತ್ತು.

ಶಿಕ್ಷಣ ಇಲಾಖೆಯು ಈ ಹಿಂದೆ ರಾಜ್ಯ ಕಲಿಕಾ ಸಾಧನಾ ಸಮೀಕ್ಷೆಯನ್ನು 3,5,8,9 ಮತ್ತು 10ನೇ ತರಗತಿಗೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ 5 ಮತ್ತು 8ನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆಯು ಕ್ರಮವಾಗಿ ಶೇ.71 ಮತ್ತು ಶೇ.51 ಇತ್ತು. 5ನೇ ತರಗತಿಯ ಮೌಲ್ಯಾಂಕನದಲ್ಲಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ. ಆದರೆ, 8ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನ ಶೇ.77 ಆಗಿದ್ದರೆ, ಹಿಂದಿನ ಸಮೀಕ್ಷೆಯಲ್ಲಿ ಶೇ.51 ಆಗಿತ್ತು. ಈ ವ್ಯತ್ಯಾಸದ ಕಾರಣಕ್ಕೆ ತುಲನಾತ್ಮಕ ಅಧ್ಯಯನದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಡಲಾಗಿದೆ. ಎರಡೂ ತರಗತಿಯಲ್ಲಿಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿದೆ. ಶೇ.80 ಗ್ರಾಮೀಣ ಮತ್ತು ಶೇ.76 ನಗರ ಪ್ರದೇಶದ ಮಕ್ಕಳು ಸಾಧನೆ ಮಾಡಿದ್ದಾರೆ.

5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಸಾಧನೆ ಗಮನಿಸಿದಾಗ 5ನೇ ತರಗತಿಯಲ್ಲಿ ಶೇ.78 ಮತ್ತು 8ನೇ ತರಗತಿಯಲ್ಲಿ ಶೇ.77 ವಿದ್ಯಾರ್ಥಿಗಳ ಕಲಿಕಾ ಸಾಧನೆಯಾಗಿದೆ. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಂತೆ 5 ಮತ್ತು 8ನೇ ತರಗತಿಯಲ್ಲಿಯೂ ಬಾಲಕಿಯರ ಸಾಧನೆಯೇ ಉತ್ತಮವಾಗಿದೆ.

 

Related posts

‘ರೈತ’ರಿಗೆ ಗುಡ್ ನ್ಯೂಸ್: ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ‘ಬಗರ್ ಹುಕುಂ’ ಸಮಿತಿ,

ರಾಜ್ಯಮಟ್ಟದ ಗಾಯನ ಸ್ಪರ್ಧೆಗೆ ವಿದ್ಯಾ ಎಸ್, ಮಂಜುನಾಥ್ ಟಿ.ಎನ್.

ಬಿಗ್’ಬಾಸ್ ಮನೆಯಿಂದಲೇ ವರ್ತೂರು ಸಂತೋಷ್ ಅರೆಸ್ಟ್…